ಪೊನ್ನಂಪೇಟೆ, ನ. ೨೮: ಹಳ್ಳಿಗಟ್ಟು ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಮತ್ತು ಕುಶಾಲನಗರದ ಕನ್ನಡಸಿರಿ ಸ್ನೇಹ ಬಳಗದ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ "ಕರ್ನಾಟಕ ಅಭಿವೃದ್ಧಿಯಲ್ಲಿ ತಾಂತ್ರಿಕ ಶಿಕ್ಷಣ" ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದ ಕುಶಾಲನಗರ ಕನ್ನಡಸಿರಿ ಸ್ನೇಹ ಬಳಗದ ಅಧ್ಯಕ್ಷ ಬಿ. ಎಸ್.ಲೋಕೇಶ್ ಸಾಗರ್ ಅವರು ಕರುನಾಡಿಗೆ ಕರ್ನಾಟಕ ಎಂದು ಮರು ನಾಮಕರಣವಾಗಿ ೫೦ ವರ್ಷ ಪೂರ್ಣಗೊಂಡ ಸಂದರ್ಭ ಕನ್ನಡಸಿರಿ ಸ್ನೇಹ ಬಳಗವೂ ಒಂದು ವರ್ಷದ ಅವಧಿಯಲ್ಲಿ ೫೦ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೂಲಕ ಕನ್ನಡನಾಡು - ನುಡಿ ಪರಂಪರೆಗೆ ವಿಶಿಷ್ಟ ರೀತಿಯಲ್ಲಿ ಸೇವೆ ನೀಡುತ್ತಿರುವುದರ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ನಿವೃತ್ತ ಡೀನ್ ಡಾ.ಚೆಪ್ಪುಡಿರ ಕುಶಾಲಪ್ಪ ಅವರು ಭಾರತೀಯ ಪ್ರಾಚೀನ ಗ್ರಂಥಗಳಲ್ಲಿ ತಂತ್ರಜ್ಞಾನ, ಆವಿಷ್ಕಾರದ ಹಲವಾರು ವಿಚಾರಗಳು ದಾಖಲಾ ಗಿವೆ. ಮಾತೃಭಾಷೆಯ ಬಳಕೆ ತಂತ್ರಜ್ಞಾನ ಆವಿಷ್ಕಾರಕ್ಕೆ ಎಂದೂ ಅಡ್ಡಿಯಾಗಲಾರದು. ತಂತ್ರಜ್ಞಾನದ ಕ್ಷೇತ್ರದಲ್ಲಿ ಮೈಲಿಗಲ್ಲು ಸಾಧಿಸ ಬೇಕಾದರೆ ವಿನೂತನ ಆವಿಷ್ಕಾರ ಮತ್ತು ಕೌಶಲ್ಯಾಧಾರಿತ ಕಾರ್ಯಕ್ಷಮತೆಯು ಮಹತ್ವದ ಪಾತ್ರ ನಿರ್ವಹಿಸುತ್ತದೆ. ಕರ್ನಾಟಕ ರಾಜ್ಯ ಔದ್ಯೋಗಿಕ ರಂಗದಲ್ಲಿ ಪ್ರಪಂಚದಲ್ಲಿ ಸ್ಥಾನ ಪಡೆಯಲು ತಂತ್ರಜ್ಞಾನ ಕ್ಷೇತ್ರದಲ್ಲಿನ ಬೆಳವಣಿಗೆಯೇ ಮುಖ್ಯ ಕಾರಣವಾಗಿದೆ ಎಂದು ತಿಳಿಸಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಡಾ. ಚಂದ್ರಶೇಖರ್ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಿ.ಐ.ಟಿ. ಕಾಲೇಜಿನ ಪ್ರಾಂಶುಪಾಲ ಡಾ. ಎಂ. ಬಸವರಾಜ್ ಮಾತನಾಡಿ, ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿ - ಬೆಳೆಸಬೇಕು. ತಂತ್ರಜ್ಞಾನದ ಯುಗದಲ್ಲಿ ಹೊಸ ಆವಿಷ್ಕಾರಕ್ಕೆ ಭಾಷ್ಯ ಬರೆಯಬೇಕು ಆ ಮೂಲಕ ದೇಶಕ್ಕೆ ಕೊಡುಗೆ ನೀಡಬೇಕು ಎಂದರು. ಬೇಸಿಕ್ ಸೈನ್ಸ್ ವಿಭಾಗ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಬೋಧಕ-ಬೋಧಕೇತರ ವರ್ಗದ ಸಿಬ್ಬಂದಿ ಪಾಲ್ಗೊಂಡಿದ್ದರು. ವಿದ್ಯಾರ್ಥಿನಿ ದಯಾನ್ ಪ್ರಾರ್ಥಿಸಿ, ಕನ್ನಡ ಉಪನ್ಯಾಸಕಿ ಡಾ. ಸುಶ್ಮಿತ. ಪಿ.ವಿ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.