ವೀರಾಜಪೇಟೆ, ನ. ೨೮ : ದೇಶದ ಮಹಾನ್ ಸೇನಾಧಿಕಾರಿಗಳಾದ ಪೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ತೆರೆದು ಅವಹೇಳನಕಾರಿ ಪೋಸ್ಟ್ ಮಾಡಿದ ವಕೀಲ ವಿದ್ಯಾಧರ್ ಅವರು ಜಿಲ್ಲೆಯಲ್ಲಿ ಅಶಾಂತಿ ಮೂಡಿಸುವ ದೇಶದ್ರೋಹದ ಕೃತ್ಯದ ನಡೆಯನ್ನು ವೀರಾಜಪೇಟೆ ಕರ್ನಾಟಕ ಸಂಘದ ಸಾಮಾನ್ಯ ಸಭೆಯಲ್ಲಿ ಖಂಡಿಸಲಾಯಿತು. ಕರ್ನಾಟಕ ಸಂಘದ ಅಧ್ಯಕ್ಷ ಮಾಳೇಟಿರ ಎಂ.ಬೆಲ್ಲುಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಚೇನಂಡ ಈ ಗಿರೀಶ್ ಪೂಣಚ್ಚ, ಕಾರ್ಯದರ್ಶಿ ಮುಂಡ್ಯೋಳAಡ ಕುಸುಮ ಸೋಮಣ್ಣ, ಖಜಾಂಚಿ ಕೋಟೆರ ಯು.ಗಣೇಶ್ ತಮ್ಮಯ್ಯ, ನಿರ್ದೇಶಕರುಗಳಾದ ಸಿ.ಪಿ.ಕಾವೇರಪ್ಪ, ಸಿ.ಎಂ.ಸುರೇಶ್ ನಾಣಯ್ಯ, ಪಿ.ಎಸ್.ನಂದ, ಎಂ.ರಾಣು ಮಂದಣ್ಣ, ಬಿ.ಎಂ. ಸುರೇಶ್, ಎಂ.ಜಿ. ಪೂಣಚ್ಚ, ಬಿ.ಗಣೇಶ್ ಬಿದ್ದಪ್ಪ, ಕೆ.ಎಂ. ಮೊಣ್ಣಪ್ಪ ಗಿಣಿ, ಎಂ.ಬಿ. ದೇವಯ್ಯ ಚುಮ್ಮಿ, ಕಚೇರಿ ಕಾರ್ಯದರ್ಶಿ ರಾಧ ಅವರುಗಳು ಉಪಸ್ಥಿತರಿದ್ದರು.

ಕಠಿಣ ಕ್ರಮಕ್ಕೆ ಒತ್ತಾಯ

ಮಡಿಕೇರಿ : ದೇಶ ಕಂಡ ಅಪ್ರತಿಮ ವೀರ ಸೇನಾನಿಗಳಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರುಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡಿದ ಆರೋಪಿಯನ್ನು ಗಡಿಪಾರು ಮಾಡಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶ್ರೀ ವಿಶ್ವಕರ್ಮ ಸಮುದಾಯ ಜಾಗೃತ ಸೇವಾ ಟ್ರಸ್ಟ್ನ ರಾಜ್ಯಾಧ್ಯಕ್ಷ ಹರೀಶ್ ಜಿ. ಆಚಾರ್ಯ ಒತ್ತಾಯಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಇಬ್ಬರು ವೀರ ಸೇನಾಧಿಕಾರಿಗಳನ್ನು ಅಪಮಾನಿಸಿರುವ ಪ್ರಕರಣ ದೇಶದ ಇಡೀ ಸೇನಾ ವ್ಯವಸ್ಥೆಗೆ ತೋರಿದ ಅಗೌರವವಾಗಿದೆ. ಆದ್ದರಿಂದ ಇದನ್ನು ದೇಶದ್ರೋಹದ ಪ್ರಕರಣವೆಂದು ಪರಿಗಣಿಸಬೇಕು ಮತ್ತು ಆರೋಪಿಯ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಿ ಗಡಿಪಾರು ಮಾಡಬೇಕೆಂದು ಆಗ್ರಹಿಸಿದ್ದಾರೆ.