ಮಡಿಕೇರಿ, ನ. ೨೮: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು , ಎ.ಎಲ್. ಜಿ ಕ್ರೆಸೆಂಟ್ ಶಾಲೆ, ಕೊಡಗು ಬ್ಯಾರಿ ವೆಲ್ಫೇರ್ ಟ್ರಸ್ಟ್ ಹಾಗೂ ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘದ ವತಿಯಿಂದ ಮಡಿಕೇರಿಯ ಕ್ರೆಸೆಂಟ್ ಶಾಲಾ ಸಭಾಂಗಣದಲ್ಲಿ ನಡೆದ ೬೯ ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ರಸಪ್ರಶ್ನೆ ಸ್ಪರ್ದೆ ಮತ್ತು ಗೀತ ಗಾಯನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾ ಬ್ಯಾರಿ ವೆಲ್‌ಫೇರ್ ಟ್ರಸ್ಟ್ ಉಪಾಧ್ಯಕ್ಷ ಎಂ.ಬಿ. ನಾಸೀರ್, ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿರುವ ಕನ್ನಡ ಭಾಷೆ ಉತ್ಕೃಷ್ಟವಾದದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ದಾಸ ಸಾಹಿತ್ಯ ವಚನ ಸಾಹಿತ್ಯ, ಶಿಶು ಸಾಹಿತ್ಯ, ಜಾನಪದ ಸಾಹಿತ್ಯ, ಪ್ರೇಮ ಸಾಹಿತ್ಯ, ದಾಂಪತ್ಯ ಸಾಹಿತ್ಯ ಈ ಹಲವಾರು ವಿಭಾಗಗಳಿದ್ದು ಎಲ್ಲವೂ ಅತ್ಯುನ್ನತ ಪರಂಪರೆ ಹೊಂದಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಲ್ಲಿ ಸಾಮಾನ್ಯ ಜ್ಞಾನ ಬೆಳೆಯಬೇಕು, ಕನ್ನಡ ನಾಡು ನುಡಿಯ ವಿಚಾರ ತಿಳಿಯಬೇಕು, ಕನ್ನಡ ಗೀತೆಗಳನ್ನು ಹಾಡುವ ಮೂಲಕ ಅದರ ಅರಿವು ಮೂಡಬೇಕು ಎಂದು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.

ಕ್ರೆಸೆAಟ್ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಜಿ.ಹೆಚ್ ಹನೀಪ್ ಮಾತನಾಡಿ, ವಿದ್ಯಾರ್ಥಿಗಳಿಗೆ ಈ ರೀತಿಯ ಕಾರ್ಯಕ್ರಮದಿಂದ ಕನ್ನಡ ನಾಡು ನುಡಿ ಪರಿಚಯ ಮಾಡಿಕೊಡುತ್ತಿರುವ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯ ಎಂದರು.

ಕ್ರಸೆAಟ್ ಶಾಲೆಯ ಅಧ್ಯಕ್ಷ ನಿಝಾಮುದ್ದೀನ್ ಸಿದ್ದೀಖಿ, ಉಪಾಧ್ಯಕ್ಷರಾದ ಅನೀಸ್ ಜವಾಹರ್, ನಿರ್ದೇಶಕ ಉಮ್ಮರ್ ಚಡಖಾನ್, ಕೊಡಗು ಬ್ಯಾರಿ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಎಸ್.ಐ ಮುನೀರ್ ಅಹಮದ್, ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘದ ಅಧ್ಯಕ್ಷೆ ಪುದಿಯನೆರವನ ರೇವತಿ ರಮೇಶ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಕೋಶಾಧಿಕಾರಿ ಸಂಪತ್ ಕುಮಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಬೈತಡ್ಕ ಜಾನಕಿ, ಗೌರಮ್ಮ ಮಾದಮ್ಮಯ್ಯ, ಭಾರತಿ ರಮೇಶ್, ಕಟ್ರತನ ಲಲಿತ ಅಯ್ಯಣ್ಣ, ಚೊಕ್ಕಾಡಿ ಪ್ರೇಮ ರಾಘವಯ್ಯ, ರಾಧಾ ಪೊನ್ನಪ್ಪ ಶರೀಫ್ ಶಾಲಾ ಅಧ್ಯಾಪಕರುಗಳು ಹಾಜರಿದ್ದರು.

ಶಾಲಾ ವಿದ್ಯಾರ್ಥಿಗಳಿಂದ ಕನ್ನಡ ಗೀತ ಗಾಯನ ಕವನ ವಾಚನ ಕಾರ್ಯಕ್ರಮ ನಡೆಯಿತು. ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿತ್ತು ೧೫ ಶಾಲೆಗಳ ೩೦ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಹಾಕತ್ತೂರಿನ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ನಿತ್ಯಶ್ರೀ ಎಂ.ಎಸ್. ಮತ್ತು ಚೇತನ್ ಪಿ ಸಿ ಇವರು ಪ್ರಥಮ ಬಹುಮಾನಗಳಿಸಿದರು. ದ್ವಿತೀಯ ಬಹುಮಾನವನ್ನು ನಾಪೋಕ್ಲುವಿನ ಎಕ್ಸೆಲ್ ಎಜುಕೇಶನ್ ಶಾಲೆಯ ಸುಮಂತ್ ಟಿ.ಆರ್. ಮತ್ತು ದರ್ಶ ಪಡೆದುಕೊಂಡರು. ತೃತೀಯ ಬಹುಮಾನವನ್ನು ರಾಫೆಲ್ಸ್ ವಿದ್ಯಾಸಂಸ್ಥೆ ನಾಪೋಕ್ಲು ಶಾಲೆಯ ವಿದ್ಯಾರ್ಥಿಗಳಾದ ಮೆಹರೂಫ್ ಮತ್ತು ಸಲ್ಮಾನ್ ಫಾರಿಸ್ ಪಡೆದುಕೊಂಡರು.

ಕ್ರೆಸೆಂಟ್ ಶಾಲಾ ಅಧ್ಯಾಪಕಿ ಸುಲ್ಹತ್ ನಿರೂಪಿಸಿದರು ಕೊಡಗು ಬ್ಯಾರಿ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಎಸ್.ಐ. ಮುನೀರ್ ಅಹಮದ್ ಸ್ವಾಗತಿಸಿದರು. ಕೋಶಾಧಿಕಾರಿ ಸಂಪತ್ ಕುಮಾರ್ ವಂದಿಸಿದರು.