ಮಡಿಕೇರಿ, ನ. ೨೮: ನಗರದಲ್ಲಿ ಕೇರಳ ರಾಜ್ಯದ ಲಾಟರಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಂಟಿಕೊಪ್ಪ ನಿವಾಸಿ ಲತೀಫ್ (೪೦) ಬಂಧಿತ ಆರೋಪಿಯಾಗಿದ್ದು, ರೂ. ೪೦ ಮೌಲ್ಯದ ಒಟ್ಟು ೧೮೦೦ ಲಾಟರಿ ಟಿಕೆಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಸಮೀಪ ಲಾಟರಿ ಮಾರಾಟದ ಕುರಿತು ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸೆನ್ ಹಾಗೂ ಡಿಸಿಆರ್‌ಬಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಸೆನ್ ಪೊಲೀಸ್ ಠಾಣೆ ಡಿಎಸ್‌ಪಿ ರವಿ, ಡಿಸಿಆರ್‌ಬಿ ಸಿಪಿಐ ಐ.ಪಿ. ಮೇದಪ್ಪ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿಸಿಆರ್‌ಬಿ ಸಿಬ್ಬಂದಿಗಳು ಭಾಗವಹಿಸಿದ್ದರು.