ಸೋಮವಾರಪೇಟೆ, ನ. ೨೮: ಸಾವಯವ ಪದ್ಧತಿಯಡಿ ಗುಣಮಟ್ಟದ ಕಾಫಿ ಉತ್ಪಾದನೆ ಮಾಡಿದರೆ ಮಾತ್ರ ಸರಾಸರಿಗಿಂತ ಅಧಿಕ ಲಾಭ ಗಳಿಸಲು ಸಾಧ್ಯ ಎಂದು ಪ್ರಮುಖ ರಫ್ತುದಾರ ಮಹಮ್ಮದ್ ಸಾದಿಕ್ ಹೇಳಿದರು.

ಇಲ್ಲಿನ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆದ ಭುವನ ಮಂದಾರ ರೈತ ಉತ್ಪಾದಕರ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಅವರು ಬೆಳೆಗಾರರಿಗೆ ಕಿವಿಮಾತು ಹೇಳಿದರು. ಸಾವಯವ ಕೃಷಿಯಲ್ಲಿ ಕಾಫಿ ಬೆಳೆದಲ್ಲಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಪಡೆಯಲು ಸಾಧ್ಯ. ಸಾವಯವ ಕೃಷಿಯಲ್ಲಿ ಬೆಳೆದ ಕಾಫಿಗೆ ವಿದೇಶದಲ್ಲಿಯೂ ಉತ್ತಮ ಮಾರುಕಟ್ಟೆ ಇದ್ದು, ಎಲ್ಲರೂ ಸಾವಯವ ಕೃಷಿಯತ್ತ ಮುನ್ನಡೆಯಬೇಕೆಂದರು.

ಸಭೆಯನ್ನು ಸಂಸ್ಥೆಯ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ ಉದ್ಘಾಟಿಸಿ ಮಾತನಾಡಿ, ಸಂಸ್ಥೆಯ ಎಲ್ಲ ರೀತಿಯ ಚಟುವಟಿಕೆಗಳಲ್ಲಿ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳದಿದ್ದರೆ ಯಾವುದೇ ಸಂಸ್ಥೆ ಆರ್ಥಿಕವಾಗಿ ಸಬಲವಾಗುವುದಿಲ್ಲ. ಎಲ್ಲ ಸದಸ್ಯರು ತಮ್ಮ ಕೃಷಿ ಚಟುವಟಿಕೆಗೆ ಬೇಕಾದ ವಸ್ತುಗಳನ್ನು ಎಫ್‌ಪಿಓದಿಂದಲೇ ಪಡೆದುಕೊಳ್ಳಬೇಕು. ತಾವು ಬೆಳೆದ ಕಾಫಿಯನ್ನು ಸಂಸ್ಥೆಯ ಮೂಲಕವೇ ವ್ಯಾಪಾರ ಮಾಡಿದಲ್ಲಿ, ಮಾರುಕಟ್ಟೆ ದರಕ್ಕಿಂತಲೂ ಹೆಚ್ಚಿನ ಲಾಭಗಳಿಸಲು ಸಾಧ್ಯ ಎಂದು ಹೇಳಿದರು.

ಕಾಫಿ ಮಂಡಳಿಯ ಸಂಪರ್ಕಾಧಿಕಾರಿ ಲಕ್ಷಿö್ಮÃಕಾಂತ್ ಮಾತನಾಡಿ, ಸರ್ಕಾರ ಎಫ್‌ಪಿಓಗಳನ್ನು ರೈತರ ಅನುಕೂಲಕ್ಕಾಗಿ ಪ್ರಾರಂಭ ಮಾಡಿದೆ. ಆದರೆ, ಹೆಚ್ಚಿನ ರೈತರು ಇದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿಲ್ಲ. ಮುಂದಿನ ದಿನಗಳಲ್ಲಿ ಸಂಸ್ಥೆಯ ಸದಸ್ಯರು ತಮ್ಮ ವ್ಯವಹಾರವನ್ನು ಹೆಚ್ಚು ಮಾಡುವ ಮೂಲಕ ಲಾಭದಾಯಕವಾಗಿ ಬೆಳೆಯಬೇಕಿದೆ ಎಂದರು.

ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ಖಲಿಸ್ತ ಡಿಸಿಲ್ವ, ಪಿ.ಡಿ. ಮೋಹನ್‌ದಾಸ್, ಮಸಗೋಡು ಲೋಕೇಶ್, ಕವಿತಾ ವಿರೂಪಾಕ್ಷ, ಎಂ.ಬಿ. ಮಂದಣ್ಣ, ಕೆ.ಟಿ. ರಾಜಶೇಖರ್ ಉಪಸ್ಥಿತರಿದ್ದರು.