ವೀರಾಜಪೇಟೆ, ನ. ೨೮: ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ಆಯೋಜಿಸಿರುವ ಕೊಡವ ಸಮಾಜಗಳ ನಡುವಿನ ಹಾಕಿ ಪಂದ್ಯಾಟಕ್ಕೆ ಬಾಳುಗೋಡು ಮೈದಾನಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು.
ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಮೈದಾನದಲ್ಲಿ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಯಾವುದೇ ವಿಘ್ನ ಬಾರದ ರೀತಿಯಲ್ಲಿ ಯಶಸ್ವಿಯಾಗಿ ನಡೆಯುವಂತೆ ಪ್ರಾರ್ಥನೆ ಸಲ್ಲಿಸಿದರು.
ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿ, ಕಳೆದ ೧೧ ವರ್ಷಗಳಿಂದ ಕೊಡವ ಸಮಾಜಗಳ ನಡುವೆ ಹಾಕಿ ಪಂದ್ಯಾಟ ಹಾಗೂ ಇತರ ಸಾಂಸ್ಕೃತಿಕ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಹಾಕಿ ಪಂದ್ಯಾಟಗಳು ಕೊಡವ ಜನಾಂಗದ ಸಂಸ್ಕೃತಿಯ ಒಂದು ಭಾಗವಾಗಿದೆ ಎಂದ ಅವರು, ಫೇಡರೇಷನ್ ಆಫ್ ಕೊಡವ ಸಮಾಜ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಫೆಡರೇಷನ್ ಆಫ್ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಮಾತನಾಡಿ, ವಿವಿಧ ಭಾಗದಲ್ಲಿರುವ ೩೧ ಕೊಡವ ಸಮಾಜಗಳನ್ನು ಸೇರಿಸಿ ಒಕ್ಕೂಟವನ್ನು ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಮೈದಾನ ವಿಸ್ತರಣೆ, ತಡೆಗೋಡೆ, ಗ್ಯಾಲರಿ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ. ಸರ್ಕಾರ, ಇತರ ದಾನಿಗಳ ಸಹಕಾರದೊಂದಿಗೆ ಹಂತ ಹಂತವಾಗಿ ಅಭಿವೃದ್ದಿ ಕಾರ್ಯಗಳನ್ನು ನಡೆಸಲಾಗುವುದು ಎಂದರು. ಈ ಸಂದರ್ಭ ಕೊಡವ ಸಮಾಜಗಳ ಒಕ್ಕೂಟದ ಉಪಾಧ್ಯಕ್ಷ ಚೆರಿಯಪಂಡ ಕುಶಾಲಪ್ಪ, ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ
(ಮೊದಲ ಪುಟದಿಂದ) ಕಾಳಿಮಾಡ ಮೋಟಯ್ಯ, ಊಟೋಪಚಾರ ಸಮಿತಿ ಅಧ್ಯಕ್ಷ ಕುಂಬೆರ ಮನು ಕುಮಾರ್, ಕ್ರೀಡಾ ಸಮಿತಿ ಅಧ್ಯಕ್ಷ ತಂಬುಕುತ್ತಿರ ಮಧುಮಂದಣ್ಣ, ಕಂಬೀರAಡ ಕಿಟ್ಟು ಕಾಳಪ್ಪ, ಬೊಳಿಯಂಗಡ ದಾದು ಪೂವಯ್ಯ, ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಬಲ್ಲಣಮಾಡ ರೀಟಾ, ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡAಡ ನಾಣಯ್ಯ, ಆರಾಯಿರ ನಾಡು ಅಧ್ಯಕ್ಷ ಚೇಂದAಡ ಪೊನ್ನಪ್ಪ, ತಾಂತ್ರಿಕ ಸಮಿತಿಯ ಮಾದೇಯಂಡ ಸಂಪಿ ಪೂಣಚ್ಚ, ಪಂದ್ಯಾಟದ ಉಸ್ತುವಾರಿ ಬೆಂಗಳೂರು ಹಾಕಿ ಅಸೋಸಿಯೇಷನ್ ಅಧ್ಯಕ್ಷ ಅಚ್ಚಕಾಳೆರ ಪಳಂಗಪ್ಪ ಉಪಸ್ಥಿತರಿದ್ದರು. ಚೆಪ್ಪುಡಿರ ಕಾರ್ಯಪ್ಪ ಪಂದ್ಯಾಟದ ವೀಕ್ಷಕ ವಿವರಣೆಯನ್ನು ನೀಡಿದರು.ಕೊಡವ ಸಮಾಜಗಳ ನಡುವಿನ ಹಾಕಿ ಪಂದ್ಯಾಟದಲ್ಲಿ ಆರಾಯಿರನಾಡ್, ಹುದಿಕೇರಿ, ಮೂರ್ನಾಡು, ಕುಟ್ಟ ಮಡಿಕೇರಿ ಕೊಡವ ಸಮಾಜಗಳು ಮುಂದಿನ ಸುತ್ತಿನ ಅರ್ಹತೆ ಪಡೆದುಕೊಂಡವು.
ನಾಪೋಕ್ಲು ಕೊಡವ ಸಮಾಜ ಗೈರಿನಿಂದ ಆರಾಯಿರನಾಡು ಕೊಡವ ಸಮಾಜ ಮುಂದಿನ ಸುತ್ತಿಗೆ ಪ್ರವೇಶಿಸಿತು. ಹುದಿಕೇರಿ ಕೊಡವ ಸಮಾಜವು ೨-೦ ಗೋಲುಗಳಿಂದ ಶ್ರೀಮಂಗಲ ಕೊಡವ ಸಮಾಜ ತಂಡವನ್ನು ಮಣಿಸಿತು. ಹುದಿಕೇರಿ ತಂಡದ ಪರ ೧೬ನೇ ನಿಮಿಷದಲ್ಲಿ ನಿಶಿಕ್, ೨೯ನೇ ನಿಮಿಷದಲ್ಲಿ ಜಿತನ್ ಗೋಲು ಬಾರಿಸಿ ತಂಡದ ಗೆಲುವಿಗೆ ಕಾರಣರಾದರು.
ಪೊನ್ನಂಪೇಟೆ ಕೊಡವ ಸಮಾಜ ಗೈರಿನಿಂದ ಮೂರ್ನಾಡು ತಂಡಕ್ಕೆ ಮುಂದಿನ ಸುತ್ತಿಗೆ ಕಾಲಿಟ್ಟಿತು. ಕುಟ್ಟ ಕೊಡವ ಸಮಾಜ ಚೇರಂಬಾಣೆ ಕೊಡವ ಸಮಾಜವನ್ನು ೪-೨ ಗೋಲುಗಳಿಂದ ಪರಾಭವಗೊಳಿಸಿತು. ಕುಟ್ಟ ತಂಡದ ಪರ ೨೯ನೇ ನಿಮಿಷದಲ್ಲಿ ಅಖಿಲ್, ೩೨, ೪೧ನೇ ನಿಮಿಷದಲ್ಲಿ ಚೇತನ್ ಚಿಣ್ಣಪ್ಪ, ೪೩ನೇ ನಿಮಿಷದಲ್ಲಿ ಮಿಲನ್, ಚೇರಂಬಾಣೆ ತಂಡದ ಪರ ೩೦ನೇ ನಿಮಿಷದಲ್ಲಿ ಸೋಮಣ್ಣ, ೪೦ನೇ ನಿಮಿಷದಲ್ಲಿ ರೋಹನ್ ಗೋಲು ದಾಖಲಿಸಿದರು. ಮೈಸೂರು ತಂಡ ಗೈರಿನಿಂದ ಮಡಿಕೇರಿ ತಂಡ ಮುಂದಿನ ಸುತ್ತಿಗೆ ಲಗ್ಗೆಯಿಟ್ಟಿತ್ತು. ಪಂದ್ಯಾಟದ ತೀರ್ಪುಗಾರರಾಗಿ ಅರೆಯಡ ಚಿಣ್ಣಪ್ಪ, ಮೈಂದಪAಡ ಡ್ಯಾನ್, ಬಲ್ಲಚಂಡ ಸೋಮಣ್ಣ, ನೆಲ್ಲಮಕ್ಕಡ ಪವನ್, ಕನ್ನಂಬಿರ ಚಿಣ್ಣಪ್ಪ ತಾಂತ್ರಿಕ ನಿರ್ದೇಶಕ ಮಾದೇಯಂಡ ಸಂಪಿ ಪೂಣಚ್ಚ ಕಾರ್ಯನಿರ್ವಹಿಸಿದರು.