ಶನಿವಾರಸಂತೆ, ನ. ೨೮: ಸಮೀಪದ ಗುಡುಗಳಲೆ ಜಾತ್ರಾ ಮೈದಾನದಲ್ಲಿ ಶನಿವಾರಸಂತೆ ರೋಟರಿ ಸಂಸ್ಥೆ, ಬೆಂಗಳೂರಿನ ವುಡ್ ಕ್ರಾಫ್ಟ್ ಇಂಡಿಯಾ, ಸೋಮವಾರಪೇಟೆ ಪಶುಪಾಲನಾ ಇಲಾಖೆ ಹಾಗೂ ಹಂಡ್ಲಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ೮ನೇ ವರ್ಷದ ಉಚಿತ ಸಾಕುನಾಯಿ ಹಾಗೂ ಬೆಕ್ಕುಗಳಿಗೆ ರೇಬಿಸ್ ನಿಯಂತ್ರಣ ಲಸಿಕಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿ ಡಾ. ಬಿ.ಎಂ. ಸತೀಶ್ ಕುಮಾರ್ ಮಾತನಾಡಿ, ಪ್ರಾಣಿಯ ಜೊಲ್ಲಿನಿಂದ ಪ್ರಾಣಿಜನ್ಯ ಕಾಯಿಲೆ ಹರಡುತ್ತದೆ. ಈ ಜೊಲ್ಲಿನ ಸ್ಪರ್ಶದಿಂದ ಮಾನವರಿಗೂ ಕಾಯಿಲೆ ಹರಡುತ್ತದೆ. ಇದನ್ನು ತಡೆಗಟ್ಟುವ ಉದ್ದೇಶದಿಂದ ಸಾಕು ಪ್ರಾಣಿಗಳಾದ ನಾಯಿ -ಬೆಕ್ಕುಗಳಿಗೆ ಪ್ರತಿ ವರ್ಷ ರೇಬಿಸ್ ನಿಯಂತ್ರಣ ಲಸಿಕೆಯನ್ನು ಹಾಕಿಸಬೇಕು ಎಂದು ಮಾಹಿತಿ ನೀಡಿದರು. ಶಿಬಿರದಲ್ಲಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಕರೆತರಲಾಗಿದ್ದ ೨೩೧ ಸಾಕು ನಾಯಿಗಳು ಹಾಗೂ ೧೦ ಬೆಕ್ಕುಗಳಿಗೆ ಲಸಿಕೆ ಹಾಕಲಾಯಿತು. ಈ ಸಂದರ್ಭ ಕಳೆದ ವರ್ಷ ಹೃದಯಾಘಾತದಿಂದ ನಿಧನರಾಗಿದ್ದ ತಾಲೂಕು ಪಶುವೈದ್ಯಕೀಯ ಇಲಾಖೆ ನಿರ್ದೇಶಕ ಬಾದಾಮಿಯವರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ರೋಟರಿ ಸಂಸ್ಥೆ ಅಧ್ಯಕ್ಷ ವಿ.ಎಲ್. ವರ್ಷಿತ್ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶನಿವಾರಸಂತೆ ಪಶುವೈದ್ಯ ಆಸ್ಪತ್ರೆಯ ಪಶು ವೈದ್ಯಕೀಯ ಪರೀಕ್ಷಕ ಎಸ್.ಪಿ. ಧರ್ಮರಾಜ್, ಮಹಮ್ಮದ್ ಸರ್ವರ್ ಪಾಶ, ಬಿ.ಬಿ. ಲೋಕೇಶ್, ಕೊಡ್ಲಿಪೇಟೆಯ ಗಿರೀಶ್, ತಬ್ರೇಜ್ ಅಹಮ್ಮದ್, ಗೌಡಳ್ಳಿಯ ತೀರ್ಥಪ್ರಸಾದ್ ಹಾಗೂ ಐವರು ಪಶು ಸಖಿಯರು ಶಿಬಿರದಲ್ಲಿ ಕರ್ತವ್ಯ ನಿರ್ವಹಿಸಿದರು. ರೋಟರಿ ಸಂಸ್ಥೆ ಕಾರ್ಯದರ್ಶಿ ಶ್ವೇತಾ ವಸಂತ್, ರೊಟೇರಿಯನ್‌ಗಳಾದ ದಿವಾಕರ್, ಎ.ಡಿ. ಮೋಹನ್ ಕುಮಾರ್, ಶುಭು, ವಸಂತ್ ಕುಮಾರ್, ಚಂದನ್, ವಸಂತ್, ಸೋಮಶೇಖರ್ ಇತರರು ಹಾಜರಿದ್ದರು.