ಭಜನೆಗಳು ನಮ್ಮ ನಾಡಿನ ಅಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಗುರುತಿನ ಮಹತ್ವದ ಭಾಗವಾಗಿದೆ. ಲಕ್ಷಾಂತರ ಜನರ ಜೀವನದಲ್ಲಿ ಅಪಾರ ಪ್ರಾಮುಖ್ಯತೆಯನ್ನು ಹೊಂದಿರುವ ಭಜನೆ, ಮೂಲತಃ ದೇವರನ್ನು ಹೊಗಳುವಿಕೆ, ವರ್ಣಿಸುವಿಕೆ, ಪ್ರಾರ್ಥಿಸುವಿಕೆ, ಆರಾಧಿಸುವಿಕೆಯ ಅಂಶಗಳನ್ನು ಹೊಂದಿದ್ದಾಗಿವೆ.

ಜನತೆಯ ಧಾರ್ಮಿಕ ನಂಬಿಕೆ, ಭಕ್ತಿ ಮತ್ತು ಸಾಂಸ್ಕೃತಿಕ ಪರಂಪರೆಯ ಸಾರವನ್ನು ಕೂಡ ಭಜನೆ ಪ್ರತಿನಿಧಿಸುತ್ತದೆ. ಭಜನೆಯ ಮೂಲಕ ಭಕ್ತರು ದೈವಿಕ ಆರಾಧನೆಗಾಗಿ ಒಂದಾಗುತ್ತಾರೆ. ಕೆಲಕಾಲ ಇಹವನ್ನು ಮರೆತು ದೇವರ ಸ್ತುತಿಯಲ್ಲಿ ತಮ್ಮನ್ನು ತಾವೇ ಮರೆಯುವಂಥ ಗುಣ ಕೂಡ ಭಜನೆಯಲ್ಲಿದೆ

ಭಜನೆಗಳ ಮೂಲಕ ಭಕ್ತಾದಿಗಳು ದೇವರ ಬಗೆಗಿನ ತಮ್ಮ ಪ್ರೀತಿ, ಪೂಜ್ಯಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ದೈವಿಕತೆಗೆ ಶರಣಾಗಲು ಭಜನೆ ಸೂಕ್ತವಾದ ವಾಹಕವಾಗಿಯೂ ಪರಿಣಮಿಸಿದೆ.

ಭಕ್ತಿಯಿಂದ ಹಾಡಲ್ಪಡುವ ಗೀತೆಗಳು, ಮೌಲ್ಯಯುತವಾದ ಅಧ್ಯಾತ್ಮಿಕ ಬೋಧನೆಗಳು ಮತ್ತು ನೈತಿಕ ತತ್ವಗಳನ್ನು ಕೂಡ ಭಜನಾ ಪ್ರಕಾರಗಳು ಒಳಗೊಂಡಿರುತ್ತವೆ. ಭಜನೆಗಳನ್ನು ಆಲಿಸುವುದರಿಂದ ಜನರು ಸಮಗ್ರತೆ, ಸಹಾನುಭೂತಿ ಮತ್ತು ನಿಸ್ವಾರ್ಥತೆಯ ಜೀವನವನ್ನು ನಡೆಸಲು ಸಹಕಾರಿಯಾಗುತ್ತದೆ,

ಕೊಡಗಿನಲ್ಲಿ ಪ್ರಮುಖ ಭಜನಾ ಮಂಡಳಿಯಾಗಿ ಖ್ಯಾತವಾಗಿರುವ ಮಡಿಕೇರಿಯ ಶ್ರೀ ರಾಮಾಂಜನೇಯ ಭಜನಾ ಮಂಡಳಿಯು ಇದೀಗ ೩೪ನೇ ವರ್ಷಗಳನ್ನು ಪೂರೈಸುತ್ತಿದೆ.

ಮಡಿಕೇರಿಯಲ್ಲಿ ೩ ದಶಕಗಳ ಹಿಂದೆ ಶ್ರೀ ರಾಮನ ಸ್ತುತಿ ಗೀತೆಯ ಮೂಲಕ ಪ್ರಾರಂಭವಾದ ಈ ಭಜನಾ ತಂಡ ಏಕಾಹ ಭಜನೆಗಳ ಮೂಲಕ ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೂ ವಿವಿಧ ತಂಡಗಳ ಭಜನಾ ಕಾರ್ಯಕ್ರಮ ನೀಡುವಲ್ಲಿಗೆ ಯಶಸ್ವಿಯಾಗಿ ತನ್ನ ಧಾರ್ಮಿಕ ಪಯಣ ಮುಂದುವೆರೆಸಿದೆ.

ಶ್ರೀ ರಾಮಂಜನೇಯ ಭಜನಾ ಮಂಡಳಿಯ ಪ್ರಾರಂಭ

೧೯೯೦ ರಲ್ಲಿ ಶ್ರೀರಾಮನ ಮಂದಿರಕ್ಕಾಗಿ ದೇಶವ್ಯಾಪಿ ವಿಶ್ವ ಹಿಂದೂ ಪರಿಷತ್ ಆಂದೋಲನ ನಡೆಸುತ್ತಿದ್ದ ಸಂದರ್ಭ, ಉತ್ಥಾನ ಏಕಾದಶಿಯಂದು ಭಾರತದಾದ್ಯಂತ ದೇವಾಲಯಗಳಲ್ಲಿ ಶ್ರೀರಾಮ ಭಜನೆ ಆಯೋಜಿಸುವಂತೆ ಕರೆ ನೀಡಲಾಗಿತ್ತು.

ಈ ಕರೆಗೆ ಓಗೊಟ್ಟ ಮಡಿಕೇರಿಯ ಹಲವರು ಶ್ರೀ ಆಂಜನೇಯ ದೇವಾಲಯದಲ್ಲಿ ಏಕಾದಶಿಯಂದು ಭಜನೆ ಮಾಡಿ ಅಯೋಧ್ಯೆಯಲ್ಲಿ ಶ್ರೀ ರಾಮನಿಗೆ ಮಂದಿರ ನಿರ್ಮಾಣ ಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದರು. ಭಜನೆಗೆ ಸಿಕ್ಕಿದ ಉತ್ತಮ ಸ್ಪಂದನೆ ಗಮನಿಸಿದ ಆಂಜನೇಯ ದೇವಾಲಯ ವ್ಯಾಪ್ತಿಯ ಅನೇಕ ಮನೆಗಳ ಭಕ್ತರು ಪ್ರತೀ ಸೋಮವಾರ ದೇವಾಲಯದಲ್ಲಿಯೇ ಭಜನಾ ಕಾರ್ಯದ ಯೋಜನೆಗೆ ಮುಂದಾದರು. ಆ ದಿನಗಳಲ್ಲಿ ಮಡಿಕೇರಿ ನಗರದಲ್ಲಿ ಭಜನಾ ತಂಡಗಳು ಇರಲಿಲ್ಲ. ಹೀಗಿರುವಾಗಲೇ ಶ್ರೀ ಆಂಜನೇಯ ದೇವಾಲಯದಲ್ಲಿ ಪ್ರಾರಂಭವಾದ ಭಜನೆ ಒಂದು ರೀತಿಯಲ್ಲಿ ಧಾರ್ಮಿಕ ಮಹತ್ವದ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಪ್ರತೀ ಸೋಮವಾರ ನಡೆಯತೊಡಗಿತು.

ಅಂದು ಪ್ರಾರಂಭವಾದ ಭಜನಾ ಕಾರ್ಯಕ್ರಮ ೩೪ ವರ್ಷಗಳ ಕಾಲ ಸಾಂಗವಾಗಿ ನಡೆದು ಭಜನಾ ಪರಂಪರೆ ಇಂದಿಗೂ ಆಂಜನೇಯ ದೇವಾಲಯದಲ್ಲಿ ಪ್ರತೀ ಸೋಮವಾರ ಸಂಜೆ ೬ ಗಂಟೆಯಿAದ ೭.೩೦ ಗಂಟೆಯವರೆಗೆ ನಡೆಯುತ್ತಾ ಬಂದಿರುವುದು ವಿಶೇಷವೇ ಹೌದು.

ನವರಾತ್ರಿ ದಿನಗಳಲ್ಲಿ ಮಡಿಕೇರಿಯ ದಶಮಂಟಪಗಳಿಗೆ ತೆರಳಿ ಭಜನೆ ಮಾಡುವ ಸಂಪ್ರದಾಯ ಹೊಂದಿರುವ ಶ್ರೀ ರಾಮಾಂಜನೇಯ ಭಜನಾ ಮಂಡಳಿ ತಂಡವು, ಧನುರ್ಮಾಸದಲ್ಲಿ ಭಜನಾ ಸಪ್ತಾಹವನ್ನು ಕೂಡ ಆಯೋಜಿಸುತ್ತಾ ಬಂದಿದೆ. ಈ ಮೊದಲು ಮನೆ ಮನೆ ಭಜನೆ ಎಂದು ೧ ವರ್ಷ ಕಾಲ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಮಡಿಕೇರಿಯ ೯೦ ಮನೆಗಳಲ್ಲಿ ಈ ತಂಡವು ಭಜನೆ ಮಾಡಿದ್ದು ಇತಿಹಾಸವಾಗಿದೆ.

ಕೊಡಗಿನಲ್ಲಿ ಮಾತ್ರವಲ್ಲದೆ ಹೊರ ಜಿಲ್ಲೆಯಲ್ಲಿಯೂ ಭಕ್ತಿಸುಧೆಯ ಸಾಧನೆ

ಮಡಿಕೇರಿಗೆ ಮಾತ್ರ ಸೀಮಿತ ವಾಗಿದ್ದ ಶ್ರೀ ರಾಮಾಂಜನೇಯ ಭಜನಾ ಮಂಡಳಿಯ ಖ್ಯಾತಿ ಎಲ್ಲಾ ಕಡೆ ವ್ಯಾಪಿಸುತ್ತಿರುವಂತೆಯೇ ಕೊಡಗಿನ ಹಲವೆಡೆ ಧಾರ್ಮಿಕ ಕಾರ್ಯಕ್ರಮಗಳು ಆಯೋಜಿಸಲ್ಪಟ್ಟಾಗ ಈ ತಂಡಕ್ಕೆ ಭಜನೆ ನೆರವೇರಿಸುವಂತೆ ಕೋರಿಕೆ ಬರತೊಡಗಿತ್ತು, ಹೀಗಾಗಿ ಜಿಲ್ಲೆಯಾದ್ಯಂತ ಅನೇಕ ಭಜನಾ ಕಾರ್ಯಕ್ರಮಗಳನ್ನು ನೀಡಲು ಸಾಧ್ಯವಾಯಿತು. ಮೈಸೂರಿನಲ್ಲಿ ೨೦೧೩ ರಲ್ಲಿ ಆಯೋಜಿತ ದಕ್ಷಿಣ ಭಾರತ ಮಟ್ಟದ ಭಜನಾ ಸ್ಪರ್ಧೆಯಲ್ಲಿ ಶ್ರೀ ರಾಮಾಂಜನೇಯ ಭಜನಾ ಮಂಡಳಿಯು ದ್ವಿತೀಯ ಸ್ಥಾನ ಪಡೆಯುವ ಮೂಲಕ ಮತ್ತಷ್ಟು ಪ್ರೋತ್ಸಾಹವನ್ನು ತನ್ನದಾಗಿಸಿ ಕೊಂಡಿತ್ತು. ಅಂತೆಯೇ ೨೦೧೪ ರಲ್ಲಿ ಶಂಕರ ಟಿವಿ ವಾಹಿನಿಯು ಆಯೋಜಿಸಿದ್ದ ಭಜನಾ ಸಾಮ್ರಾಟ್ ಸ್ಪಧೆಯ ಅಂತಿಮ ಹಂತಕ್ಕೂ ಪ್ರವೇಶ ಪಡೆಯುವಲ್ಲಿ ಈ ತಂಡವು ಸಫಲವಾಯಿತು.

ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಗಳಲ್ಲಿಯೂ ಅನೇಕ ಭಜನ ಕಾರ್ಯಕ್ರಮ ನೀಡಿದ ಹೆಮ್ಮೆ ಈ ತಂಡದ್ದಾಗಿದೆ.

ಭಜನಾ ಮಂದಿರದ ಬೇಡಿಕೆ ಈಡೇರಿಸುವವರಾರು?

ಶ್ರೀ ಆಂಜನೇಯ ದೇವಾಲಯ ದಲ್ಲಿ ಅನೇಕ ವರ್ಷಗಳ ಕಾಲ ವಿಸ್ತಾರವಾದ ಒಳಾಂಗಣದಲ್ಲಿ ಭಜನೆ ನಿರ್ವಹಿಸುತ್ತಿದ್ದ ತಂಡವು ದೇವಾಲಯ ಜೀರ್ಣೋದ್ಧಾರದ ಬಳಿಕ ಕೊಂಚ ನಿರಾಶೆ ಎದುರಿಸುವಂತಾಯಿತು. ಭಜನಾ ಮಂದಿರ ನಿರ್ಮಾಣ ಮಾಡಿ ಎಂಬ ತಂಡದ ಬೇಡಿಕೆಗೆ ಪ್ರಾರಂಭಿಕ ಹಂತದಲ್ಲಿ ಪೂರಕ ಸ್ಪಂದನ ದೊರಕಿತ್ತಾದರೂ ದೇವಾಲಯ ನಿರ್ಮಾಣ ಮುಗಿದ ಬಳಿಕ ಯಾವುದೇ ಸ್ಪಂದನ ದೊರಕಲಿಲ್ಲ. ಹೀಗಾಗಿ ಆಂಜನೇಯ ದೇವಾಲಯದ ಕಿರಿದಾದ ಒಳಾಂಗಣದಲ್ಲಿಯೇ ಧಾರ್ಮಿಕ ಮಹತ್ವದ ಭಜನೆಗಳನ್ನು ಹಾಡುವ ಈ ತಂಡ ಇಂದಿಗೂ ತಮಗೊಂದು ಭಜನಾ ಮಂದಿರ ಇಂದಲ್ಲ ನಾಳೆ ದೊರಕೀತು ಎಂಬ ಆಶಾಭಾವನೆಯಲ್ಲಿದೆ.

ಹಲವು ವರ್ಷಗಳ ಕಾಲ ೨೪ ಗಂಟೆಗಳ ಕಾಲ ವಿವಿಧ ಭಜನಾ ತಂಡಗಳಿAದ ಏಕಾಹ ಭಜನೆಯನ್ನೂ ವಾರ್ಷಿಕೋತ್ಸವದ ಸಂದರ್ಭ ಶ್ರೀ ರಾಮಾಂಜನೇಯ ಭಜನಾ ಮಂಡಳಿ ಆಯೋಜಿಸುತಿತ್ತು. ಆದರೆ ಆಂಜನೇಯ ದೇವಾಲಯದಲ್ಲಿ ಸ್ಥಳಾವಕಾಶದ ಕೊರತೆ ಹಿನ್ನಲೆಯಲ್ಲಿ ೨೦೧೭ ರಿಂದ ೧೨ ಗಂಟೆಗಳ ಭಜನೆಗೆ ಸೀಮಿತವಾಗಿದೆ, ಸೂರ್ಯೋದಯ ದೊಂದಿಗೆ ಪ್ರಾರಂಭವಾಗುವ ಭಜನೆ ಸೂರ್ಯಾಸ್ತದವರೆಗೂ ಸಾಂಗವಾಗಿ ನಡೆಯುತ್ತಾ ಜಿಲ್ಲೆಯಾದ್ಯಂತಲಿನ ಭಜನಾ ಮಂಡಳಿಗಳಿಗೆ, ಭಜನಾ ಕಾರರಿಗೆ ಉತ್ತಮ ವೇದಿಕೆ ಕಲ್ಪಿಸುತ್ತಾ ಧಾರ್ಮಿಕ ಪರಂಪರೆಯನ್ನು ಮುಂದುವರೆಸುತ್ತಾ ಬಂದಿದೆ.

ಪ್ರಸ್ತುತ ಶ್ರೀ ರಾಮಾಂಜನೇಯ ಭಜನಾ ಮಂಡಳಿಯಲ್ಲಿ ೪೦ ಮಂದಿ ಭಜನೆ ಹಾಡುವವರಿದ್ದು, ಯಾವುದೇ ಸಂದರ್ಭವೂ ಹಾಡುಗಾರರಿಗೆ ಕೊರತೆ ಯಾಗಿಲ್ಲ. ಅನೇಕ ಉದ್ಯೋಗಸ್ಥರು ಪರ ಊರಿಗೆ ವರ್ಗಾವಣೆಯಾದರೂ ಹೊಸ ಗಾಯಕರು ಬಂದು ತಂಡಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಹೆಸರಾಂತ ಗಾಯಕ ರವಿ ಭೂತನಕಾಡು ಮಾರ್ಗ ದರ್ಶನದಲ್ಲಿ ಭಜನೆಗೆ ಸಂಗೀತದ ಸ್ವರೂಪ ದೊರಕಿದೆ ಎಂದು ತಂಡದ ಸದಸ್ಯ ಕೆ.ಕೆ. ಮಹೇಶ್ ಕುಮಾರ್ ಹೆಮ್ಮೆಯಿಂದ ಹೇಳಿದರು. ಶ್ರೀ ರಾಮಾಂಜನೇಯ ಭಜನಾ ತಂಡಕ್ಕೆ ಸ್ಫೂರ್ತಿ ನೀಡುವಂತೆ ಡಾ. ಪಾಟ್ಕರ್ ಮತ್ತು ಜಯಲಕ್ಷಿö್ಮÃ ಪಾಟ್ಕರ್ ದಂಪತಿ ಸದಾ ನಮ್ಮೊಂದಿಗೆ ೩೪ ವರ್ಷಗಳಿಂದ ಇರುವುದು ನಮಗೆ ನಿಜವಾದ ಬಲ ತಂದಿದೆ ಎಂದೂ ಮಹೇಶ್ ಸ್ಮರಿಸಿಕೊಂಡರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತೀ ಗ್ರಾಮ ದಲ್ಲಿಯೂ ಭಜನಾ ಮಂದಿರಗಳಿದೆ. ನೂರಾರು ಸಂಖ್ಯೆಯಲ್ಲಿ ಜನರು ಪ್ರತೀ ವಾರದ ನಿಗದಿತ ದಿನ ಮಂದಿರಕ್ಕೆ ಬಂದು ಭಜನಾ ಕಾರ್ಯಕ್ರಮದಲ್ಲಿ ಸಕ್ರಿಯರಾಗಿ ತೊಡಗಿಸಿಕೊಳ್ಳುತ್ತಾರೆ. ಇದೇ ರೀತಿ ಕೊಡಗಿನಲ್ಲಿಯೂ ಮಂದಿರಗಳಿಗೆ ಜಾಗ ದೊರಕಿ ಭಕ್ತರು ಧಾರ್ಮಿಕ ಮಹತ್ವದ ಭಜನಾ ಕಾರ್ಯಕ್ರಮಗಳಲ್ಲಿ ತೊಡಗಿಸಿ ಕೊಳ್ಳುವಂತಾಗಬೇಕು ಎಂದು ಹೇಳುತ್ತಾರೆ ಮಹೇಶ್ ಕುಮಾರ್.

ಜಾತಿ, ಪಂಥ ಬೇಧವಿಲ್ಲದೆ ಎಲ್ಲರನ್ನೂ ಒಳಗೊಂಡ ಭಜನಾ ತಂಡ ಇದಾಗಿದ್ದು ಭಜನೆ ಜತೆ ದೇವರ ಕೀರ್ತನೆ, ದಾಸವಾಣಿಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಕೇಳುಗರನ್ನು ಭಕ್ತಸಾಗರದಲ್ಲಿ ತೇಲುವಂತೆ ಮಾಡುವುದೇ ಶ್ರೀ ರಾಮಾಂಜನೇಯ ಭಜನಾ ಮಂಡಳಿ ವಿಶೇಷ.

ಭಜನಾ ಮಂಡಳಿಯ ಸಾಮಾಜಿಕ ಮಂದಿರಗಳಿಗೆ ಜಾಗ ದೊರಕಿ ಭಕ್ತರು ಧಾರ್ಮಿಕ ಮಹತ್ವದ ಭಜನಾ ಕಾರ್ಯಕ್ರಮಗಳಲ್ಲಿ ತೊಡಗಿಸಿ ಕೊಳ್ಳುವಂತಾಗಬೇಕು ಎಂದು ಹೇಳುತ್ತಾರೆ ಮಹೇಶ್ ಕುಮಾರ್.

ಜಾತಿ, ಪಂಥ ಬೇಧವಿಲ್ಲದೆ ಎಲ್ಲರನ್ನೂ ಒಳಗೊಂಡ ಭಜನಾ ತಂಡ ಇದಾಗಿದ್ದು ಭಜನೆ ಜತೆ ದೇವರ ಕೀರ್ತನೆ, ದಾಸವಾಣಿಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಕೇಳುಗರನ್ನು ಭಕ್ತಸಾಗರದಲ್ಲಿ ತೇಲುವಂತೆ ಮಾಡುವುದೇ ಶ್ರೀ ರಾಮಾಂಜನೇಯ ಭಜನಾ ಮಂಡಳಿ ವಿಶೇಷ.

ಭಜನಾ ಮಂಡಳಿಯ ಸಾಮಾಜಿಕ ಕಳಕಳಿ

ಭಜನೆಯ ಜತೆಗೇ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಶ್ರೀ ರಾಮಾಂಜನೇಯ ಭಜನಾ ಮಂಡಳಿ ಸಕ್ರಿಯವಾಗಿದೆ, ೨೦೧೮ ರಲ್ಲಿ ಭೂಕುಸಿತ ಸಂಭವಿಸಿದಾಗ ಎರಡನೇ ಮೊಣ್ಣಂಗೇರಿಯಲ್ಲಿ ಇದ್ದ ಭಜನಾ ಮಂದಿರ ಹಾನಿಗೊಳಗಾಗಿತ್ತು. ಮತ್ತೆ ಭಜನಾ ಮಂದಿರದ ನಿರ್ಮಾಣಕ್ಕಾಗಿ ಶ್ರೀ ರಾಮಾಂಜನೇಯ ಭಜನಾ ಮಂಡಳಿ ಸದಸ್ಯರು ಯೋಜನೆ ರೂಪಿಸಿ ೨.೩೫ ಲಕ್ಷ ರೂಪಾಯಿ ಸಂಗ್ರಹಿಸಿ ಕೇವಲ ೪ ತಿಂಗಳಿನಲ್ಲಿಯೇ ಎರಡನೇ ಮೊಣ್ಣಂಗೇರಿಯಲ್ಲಿ ನೂತನವಾಗಿ ಭಜನಾ ಮಂದಿರ ನಿರ್ಮಾಣವಾಗಲು ಸಹಕಾರ ನೀಡಿತ್ತು. ಅಂತೆಯೇ ಭಜನಾ ಮಂಡಳಿಯ ಸದಸ್ಯರಿಗೆ ಆರ್ಥಿಕ ಸಮಸ್ಯೆ, ಅನಾರೋಗ್ಯ ಉಂಟಾದ ಸಂದರ್ಭ ಚಿಕಿತ್ಸೆಗಾಗಿ ಆರ್ಥಿಕ ನೆರವನ್ನೂ ನೀಡುವ ವ್ಯವಸ್ಥೆ ಇರುವುದು ಈ ತಂಡದ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದೆ.

ಕೊಡಗಿನಲ್ಲಿ ೩೪ ವರ್ಷಗಳಿಂದ ಸಕ್ರಿಯವಾಗಿ ಭಜನಾ ತಂಡದ ಮೂಲಕ ಭಜನೆಯ ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದಿರುವ ಏಕೈಕ ದೊಡ್ಡ ಭಜನಾ ತಂಡವಾಗಿ ಹೊರ ಹೊಮ್ಮಿರುವ ಶ್ರೀ ರಾಮಾಂಜನೇಯ ಭಜನಾ ಮಂಡಳಿಯಲ್ಲಿ ಇದೀಗ ಮಹಿಳಾ ತಂಡವು ಪ್ರತ್ಯೇಕವಾಗಿ ರೂಪುಗೊಂಡು ಸಾಧನೆಯ ಹಾದಿಯಲ್ಲಿದೆ.

ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಮಂದಿರ ನಿರ್ಮಾಣವಾಗಬೇಕೆಂಬ ಸಂಕಲ್ಪದಿAದ ಮಡಿಕೇರಿಯ ಶ್ರೀ ಆಂಜನೇಯ ದೇವಾಲಯದಲ್ಲಿ ಪ್ರಾರಂಭವಾದ ಭಜನಾ ತಂಡಕ್ಕೆ ಶ್ರೀ ರಾಮಾಂಜನೇಯ ಎಂಬ ಅರ್ಥಪೂರ್ಣ ಹೆಸರಿದೆ. ಇದೇ ಭಾನುವಾರ ೩೪ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಈ ಹೆಮ್ಮೆಯ ಭಜನಾ ಮಂಡಳಿ ಜಿಲ್ಲೆಯಲ್ಲಿ ಮತ್ತಷ್ಟು ಭಜನಾ ಮಂಡಳಿಗಳ ಹುಟ್ಟಿಗೆ ಕಾರಣವಾಗಲಿ.

- ಅನಿಲ್ ಎಚ್.ಟಿ., ಮಡಿಕೇರಿ