ಕರಿಕೆ, ನ. ೨೯: ಜಿಲ್ಲೆಯ ಗಡಿ ಭಾಗವಾದ ಕರಿಕೆ ಮೂಲಕ ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಭಾಗಮಂಡಲ- ಕರಿಕೆ - ಪಾಣತ್ತೂರು ರಸ್ತೆ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಭೂಮಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು ರಾಜ್ಯ ಹೆದ್ದಾರಿಯಾಗಿ ಈ ರಸ್ತೆ ಯನ್ನು ಅಭಿವೃದ್ಧಿಪಡಿಸ ಲಾಗುವುದು. ಇದೀಗ ಮೊದಲ ಹಂತದಲ್ಲಿ ರೂ. ೧೨ಕೋಟಿ ವೆಚ್ಚದಲ್ಲಿ ಆಯ್ದ ಭಾಗದಲ್ಲಿ ರಸ್ತೆ ಮರು ನಿರ್ಮಾಣ ಕಾಮಗಾರಿ ಮಾಡಲಾಗುವುದು ನಂತರ ಹಂತ ಹಂತವಾಗಿ ರಸ್ತೆ ಅಭಿವೃದ್ಧಿಗೆ ಕ್ರಮವಹಿಸ ಲಾಗುವುದೆಂದರು, ಗ್ರಾಮದ ಚೆತ್ತುಕಾಯ ಭಾಗದಲ್ಲಿ ಚಿರತೆ ಉಪಟಳ ಕುರಿತು ಸ್ಥಳದಲ್ಲಿದ್ದ ಉಪ ವಲಯ ಅರಣ್ಯ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು ಕೂಡಲೇ ಸೆರೆಹಿಡಿದು ಬೇರೆಡೆ ಸ್ಥಳಾಂತರ ಮಾಡಲು ಸೂಚನೆ ನೀಡಿದರಲ್ಲದೆ ಅಗತ್ಯವಿದ್ದಲ್ಲಿ ಮತ್ತೊಂದು ಬೋನ್ ಅಳವಡಿಸಲು ತಿಳಿಸಿದರು.

ನಂತರ ಗಡಿ ಭಾಗವಾದ ಚೆಂಬೇರಿ ಬಸ್ ನಿಲ್ದಾಣ ಜಾಗ ಪರಿಶೀಲನೆ ನಡೆಸಿ ಗಡಿಯಲ್ಲಿ ಬಸ್ ನಿಲ್ದಾಣ ಹಾಗೂ ವಾಣಿಜ್ಯ ಮಳಿಗೆ ನಿರ್ಮಿಸಲು ಅನುದಾನ ಮಂಜೂರು ಮಾಡುವ ಭರವಸೆ ನೀಡಿದರು. ಮಾತ್ರವಲ್ಲದೆ ಗಡಿಯಲ್ಲಿ ಸ್ವಾಗತ ಗೋಪುರ ನಿರ್ಮಿಸಲು ಕ್ರಮವಹಿಸುವುದಾಗಿ ತಿಳಿಸಿದರು.

ಕರಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎನ್.ಬಾಲಚಂದ್ರನ್ ನಾಯರ್, ಸಹಕಾರ ಬ್ಯಾಂಕ್ ಅಧ್ಯಕ್ಷರಾದ ಬಿ.ಡಿ ದೇವರಾಜ್, ಜಿಲ್ಲಾ ಸರಕಾರಿ ವಕೀಲರಾದ ಎನ್.ಶ್ರೀಧರನ್ ನಾಯರ್, ಕರಿಕೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಕಲ್ಪನಾ ಜಗದೀಶ್, ನಾಪೋಕ್ಲು ಬ್ಲಾಕ್ ಕಾಂಗ್ರೇಸ್ಸಿನ ಅಧ್ಯಕ್ಷರಾದ ಇಸ್ಮಾಯಿಲ್, ಕರಿಕೆ ಗ್ರಾಮ ಪಂಚಾಯಿತಿ ಪಿಡಿಓ ಪಿ.ಪಿ ಗಣಪತಿ, ಪಂಚಾಯಿತಿ ಸದಸ್ಯರುಗಳಾದ. ಆಯಿಷಾ ಎಂ. ಹೆಚ್, ಪಿ.ಪಿ ರಾಜಕುಮಾರ, ಕೆ.ಎ. ದೇವದತ್ತ, ಜಯಶ್ರೀ, ಕೆ.ಎ. ನಾರಾಯಣ, ಸಹಕಾರ ಬ್ಯಾಂಕ್ ನಿರ್ದೇಶಕರು, ಇತರೆ ಪ್ರಮುಖರು ಹಾಜರಿದ್ದರು.