ವೀರಾಜಪೇಟೆ, ನ. ೨೯: ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ದೇಶದ ಪ್ರತಿಯೊಬ್ಬ ನಾಗರಿಕರಿಗೆ ಒಂದೇ ನ್ಯಾಯವಿದ್ದು, ಗಣ್ಯ ವ್ಯಕ್ತಿಗಳು ಯಾರೇ ಆಗಿದ್ದರು ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು.

ಮಡಿಕೇರಿಯ ವಕೀಲ ವಿದ್ಯಾಧರ್ ಅವರು ಬೇನಾಮಿ ಹೆಸರಿನಲ್ಲಿ ಕೊಡಗಿನ ಹೆಮ್ಮೆಯ ಪುತ್ರರಾದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಯುದ್ಧ ಪ್ರವೀಣ ಕೆ.ಎಸ್. ತಿಮ್ಮಯ್ಯ ಅವರ ಬಗ್ಗೆ ಅವಹೇಳನಕಾರಿ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವಿಚಾರ ಕೊಡಗು ಜಿಲ್ಲೆಯ ಎಲ್ಲಾ ಮಾಜಿ ಹಾಗೂ ಹಾಲಿ ಸೈನಿಕರುಗಳಿಗೆ, ವೀರನಾರಿಯರಿಗೆ ಮತ್ತು ಅವರ ಅವಲಂಬಿತರಿಗೆ ತುಂಬಾ ನೋವುಂಟು ಮಾಡಿದ್ದು, ಡಿಸೆಂಬರ್ ೬ ರಂದು ಮಡಿಕೇರಿಯಲ್ಲಿ ಬೃಹತ್ ಶಾಂತಿಯುತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕೊಟ್ಟ್ಕತ್ತಿರ ಸೋಮಣ್ಣ ತಿಳಿಸಿದ್ದಾರೆ.

ವೀರಾಜಪೇಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೇನೆಗೆ ಯಾವುದೇ ಜಾತಿ, ಧರ್ಮ, ಮತ, ಭೇದ, ವರ್ಣ ಇಲ್ಲ. ರಾಷ್ಟçದ ಸಾರ್ವಭೌಮತ್ವವನ್ನು ರಕ್ಷಣೆ ಮಾಡಲು ನಿಸ್ವಾರ್ಥ ಸದೃಢ ಸೇನೆಯಿಂದ ಮಾತ್ರ ಸಾಧ್ಯ. ಅಂತಹ ಸೇನೆಯಲ್ಲಿ ಸೇವೆ ಸಲ್ಲಿಸಿ ವಿಶ್ವದರ್ಜೆಯಲ್ಲಿ ಹೆಸರು ಗಳಿಸಿದ ಮಹಾನ್ ನಾಯಕರ ವಿರುದ್ಧ ಅವಹೇಳನಕಾರಿ ಬರವಣಿಗೆಯನ್ನು ನಮಗೆ ಸಹಿಸಲು ಸಾಧ್ಯವಿಲ್ಲ. ಈ ಕಾರಣದಿಂದ ಶಾಂತಿಯುತ ಪ್ರತಿಭಟನೆ ನಡೆಯಲಿದೆ ಎಂದರು.

ಗೋಷ್ಠಿಯಲ್ಲಿ ಸಹ ಸಂಚಾಲಕ ಬಾಳೆಕುಟ್ಟಿರ ದಿನಿ ಬೋಪಯ್ಯ, ಜಿಲ್ಲಾ ಸಮಿತಿ ಭವಾನಿ, ಸಮಿತಿ ಸದಸ್ಯರಾದ ಅಣ್ಣಳಮಾಡ ಬೋಪಯ್ಯ, ಸಿ.ಡಿ. ಸೋಮಯ್ಯ ಉಪಸ್ಥಿತರಿದ್ದರು.