*ಗೋಣಿಕೊಪ್ಪ, ನ. ೨೯: ಭಾಗಮಂಡಲ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಮೂಲಕ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ೧ ಲಕ್ಷಗಳ ದತ್ತಿನಿಧಿಯನ್ನು ಮೊಟ್ಟನ ಸಿ. ರವಿಕುಮಾರ್ ಸ್ಥಾಪಿಸಿದ್ದಾರೆ.
ಶ್ರೀ ಕಾವೇರಿ ವಿದ್ಯಾ ಸಂಘದ ನಿರ್ದೇಶಕ ಕುಯ್ಯಮುಡಿ ಮನೋಜ್ ಅಧ್ಯಕ್ಷತೆಯಲ್ಲಿ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಶ್ರೀ ಕಾವೇರಿ ಜನ್ಮ ಭೂಮಿ ಟ್ರಸ್ಟ್ನ ಸ್ಥಾಪಕರು ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ವಕೀಲ ಚೇರಂಗಾಲ ಗ್ರಾಮದ ನಿವಾಸಿ, ಮೊಟ್ಟನ ಸಿ ರವಿಕುಮಾರ್ ನೀಡಿದ ದೇಣಿಗೆಯನ್ನು ಪಿಯುಸಿ ವಿಭಾಗದ ಒಟ್ಟು ೧೨ ವಿದ್ಯಾರ್ಥಿಗಳಿಗೆ ಒಂದು ವರ್ಷದ ಶೈಕ್ಷಣಿಕ ವೆಚ್ಚವಾಗಿ ನೀಡಲಾಯಿತು.
ಈ ಸಂದರ್ಭ ಮಾತನಾಡಿದ ಶ್ರೀ ಕಾವೇರಿ ವಿದ್ಯಾ ಸಂಘದ ನಿರ್ದೇಶಕ ಕುಯ್ಯಮುಡಿ ಮನೋಜ್, ಮೊಟ್ಟನ ಸಿ. ರವಿಕುಮಾರ್ರವರ ಉದಾರತೆ, ವಿದ್ಯಾರ್ಥಿಗಳ ಶೈಕ್ಷಣಿಕ ಸಾಂಸ್ಕೃತಿಕ ಮತ್ತು ಕ್ರೀಡಾಚಟುವಟಿಕೆಗಳಿಗೆ ಸ್ಫೂರ್ತಿಯಾಗಲಿದೆ ಎಂದರು.
ಈ ರೀತಿಯ ಪ್ರೋತ್ಸಾಹದಿಂದ ಕಳೆದ ಸಾಲಿನಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇ ೧೦೦ ಫಲಿತಾಂಶ ದಾಖಲಿಸಿರುವುದಕ್ಕೆ ಸಾಧ್ಯವಾಗಿದೆ ಎಂದು ದಾನಿಗಳ ಸೇವಾ ಮನೋಭಾವವನ್ನು ಶ್ಲಾಘಿಸಿದರು.
ಕಾಲೇಜಿನ ಪ್ರಾಂಶುಪಾಲ ದಿವಾಕರ ಕೆ.ಜೆ ಪ್ರಾಸ್ತಾವಿಕ ನುಡಿಗಳನ್ನಾಡಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡುವ ಉದ್ದೇಶದಿಂದ ಸಂಜೆ ನಾಲ್ಕು ಗಂಟೆ ನಂತರವೂ ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ತಿಳಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ನಡೆಸಲಾದ ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಮತ್ತು ಈ ಬಾರಿ ರಾಜ್ಯಮಟ್ಟವನ್ನು ಪ್ರತಿನಿಧಿಸಿದ ೬ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶರತ್ ಎ.ಈ., ವೇದಾವತಿ ಎ.ಆರ್., ಡಿಂಪಲ್ ಕೆ.ಜಿ., ಕನ್ನಿಕ ಎಂ.ಜೆ. ಕಾರ್ಯಕ್ರಮದ ಜವಾಬ್ದಾರಿ ನಿಭಾಯಿಸಿದರು. ಈ ಸಂದರ್ಭ ಉಪನ್ಯಾಸಕರು, ವಿದ್ಯಾರ್ಥಿ, ಪೋಷಕರು ಇದ್ದರು.