ಕೊಡ್ಲಿಪೇಟೆ, ನ. ೨೯: ಇಲ್ಲಿನ ಕೂರ್ಗ್ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಕನ್ನಡಪರವಾದ ವಿವಿಧ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ನಡೆಯಿತು. ಆಟೋ ನಿಲ್ದಾಣದಲ್ಲಿ ಶನಿವಾರಸಂತೆ ಆರಕ್ಷಕ ಉಪ ನಿರೀಕ್ಷಕ ಗೊವಿಂದ್‌ರಾಜ್ ಮತ್ತು ಚಂದ್ರು ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ನಿರ್ಮಿಸಲಾಗಿದ್ದ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ನೃತ್ಯ ಸ್ಪರ್ಧೆ ನಡೆಯಿತು. ಕೊಡ್ಲಿಪೇಟೆ ಗ್ರಾಮ ಪಂಚಾಯತ್ ಸದಸ್ಯ ಕೆ.ಆರ್. ಚಂದ್ರಶೇಖರ್ ಅವರು ಕಾರ್ಯಕ್ರಮ ಉದ್ಘಾಟಿಸಿದರು.

ಪ್ರಾಥಮಿಕ ಮತ್ತು ಪ್ರೌಡಶಾಲೆ ಹಾಗೂ ಕಾಲೇಜು ವಿಭಾಗದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ನ್ಯತ್ಯ ಪ್ರದರ್ಶನ ನೀಡಿ ಗಮನ ಸೆಳೆದರು. ಪ್ರೌಢಶಾಲಾ ವಿಭಾಗದ ನ್ಯತ್ಯ ಸ್ಪರ್ಧೆಯಲ್ಲಿ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ ಪ್ರಥಮ, ಸೆಂಟ್ ಆ್ಯನ್ಸ್ ಕಾನ್ವೆಂಟ್ ದ್ವಿತೀಯ, ಸರಕಾರಿ ಪ್ರೌಡಶಾಲೆ ತೃತೀಯ ಸ್ಥಾನ ಗಳಿಸಿದವು. ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕ್ರಮವಾಗಿ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ, ಎಸ್.ಕೆ.ಎಸ್. ಕಲ್ಲುಮಠ ಶಾಲೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡ್ಲಿಪೇಟೆ ತಂಡಗಳು ಬಹುಮಾನ ಪಡೆದವು.

ಕಾಲೇಜು ವಿಭಾಗದಲ್ಲಿ ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆ ಪ್ರಶಸ್ತಿಗೆ ಭಾಜನವಾಯಿತು. ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಕೆ.ಸಿ. ವಿಜಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಇದರೊಂದಿಗೆ ಅಥ್ಲೆಟಿಕ್ಸ್ನಲ್ಲಿ ಹಾಗೂ ವೈಟ್ ಲಿಫ್ಟಿಂಗ್‌ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ಸ್ಥಳೀಯ ಕ್ರೀಡಾಪಟುಗಳಾದ ಹರ್ಷಿತ್ ಮತ್ತು ಅಮೃತಾ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ವಲಯ ಕಾಂಗ್ರೆಸ್ ಅಧ್ಯಕ್ಷ ಔರಂಗಜೇಬ್, ರಾಜ್ಯ ಪ್ರಶಸ್ತಿ ವಿಜೇತ ಶಿಲ್ಪಿ ವರಪ್ರಸಾದ್, ಹೇಮಾವತಿ ರೋಟರಿ ಸಂಸ್ಥೆಯ ಪ್ರಮುಖರಾದ ದಿನೇಶ್, ಹೋಬಳಿ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಕೆ.ಎ. ನಾಗೇಶ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಜೆ.ಎಲ್. ಜನಾರ್ದನ್, ಸಹಕಾರ ಬ್ಯಾಂಕ್ ಅಧ್ಯಕ್ಷ ಕೆ.ಸಿ. ಪ್ರಸನ್ನ, ಮೊಬ್ಯೆಲ್ ವರ್ತಕರ ಸಂಘದ ಅಧ್ಯಕ್ಷ ಫೈಝಾನ್, ಆಟೋ ಚಾಲಕರ ಸಂಘದ ಮಾಜಿ ಅಧ್ಯಕ್ಷರುಗಳಾದ ಡಿ.ವಿ. ಜಗದೀಶ್, ಡಿ.ಸಿ. ಸೋಮಣ್ಣ, ಉಪಾಧ್ಯಕ್ಷ ಕೆ.ಹೆಚ್. ಹರೀಶ್ ಮತ್ತು ಅಬ್ದುಲ್ಲಾ, ಕಾರ್ಯದರ್ಶಿ ಷಂಶುದ್ದೀನ್, ಖಜಾಂಚಿ ಹರೀಶ್, ಉದ್ಯಮಿ ಮಧು ಬಾಗೇರಿ, ಯತೀಶ್ ಕ್ಯಾತೆ, ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಸದಸ್ಯ ಹನೀಫ್, ಪ್ರಮುಖರಾದ ಪಿ.ಸಿ. ಪ್ರೆಡ್ಡಿ ಮತ್ತು ರಘು ಸೇರಿದಂತೆ ಇತರರು ಉಪಸ್ಥಿತರಿದ್ದರು.

ನಂತರ ಭದ್ರಾವತಿ ಬ್ರದರ್ಸ್ ತಂಡದವರಿAದ ಮೂಡಿಬಂದ ಸಂಗೀತ ರಸಮಂಜರಿ ಸಾಂಸ್ಕೃತಿಕ ಕಾರ್ಯಕ್ರಮ ಜನಮನಸೂರೆಗೊಂಡಿತು.