ಮಡಿಕೇರಿ, ನ. ೨೯: ಮನೆಯ ಆವರಣದಲ್ಲಿ ಗಾಂಜಾ ಗಿಡ ಬೆಳೆಸಿದ್ದ ಆರೋಪಿಯನ್ನು ವೀರಾಜಪೇಟೆ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಮಾಡು ಗ್ರಾಮದ ಮುಕ್ಕಾಟಿಕೊಪ್ಪಲು ನಿವಾಸಿ ವಿ.ಬಿ. ಮುತ್ತಣ್ಣ (೬೮) ಬಂಧಿತ ಆರೋಪಿ.

ಕಾರ್ಮಾಡು ಗ್ರಾಮದ ಮುತ್ತಣ್ಣ ಅವರ ಮನೆಯ ಆವರಣದಲ್ಲಿ ೫ ಕೆಜಿ ೫೦೦ ಗ್ರಾಂ ತೂಕದ ಗಾಂಜಾ ಗಿಡ ಬೆಳೆಸಿರುವ ಕುರಿತು ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ಮಾದಕ ವಸ್ತು ಬಳಕೆ, ಮಾರಾಟ ತಡೆಗಟ್ಟುವ ನಿಟ್ಟಿನಲ್ಲಿ ವೀರಾಜಪೇಟೆ ಡಿವೈಎಸ್‌ಪಿ ಆರ್. ಮೋಹನ್ ಕುಮಾರ್, ಸಿಪಿಐ ಅನೂಪ್ ಮಾದಪ್ಪ, ಪಿಎಸ್‌ಐ ವಾಣಿಶ್ರೀ ನೇತೃತ್ವದಲ್ಲಿ ರಚನೆಯಾಗಿರುವ ಗ್ರಾಮಾಂತರ ಠಾಣಾ ಸಿಬ್ಬಂದಿಗಳ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.