ಕೊಡಗು ವಿದ್ಯಾಲಯ ತಂಡ, ವೀರಾಜಪೇಟೆ ಪ್ರಗತಿ ಶಾಲೆ ತಂಡಕ್ಕೆ ಜಯ

ಮಡಿಕೇರಿ, ನ. ೨೯: ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ೧೦ನೆ ವರ್ಷದ ಡಾ.ಅಖಿಲ್ ಕುಟ್ಟಪ್ಪ-ಅಶ್ವತ್ ಅಯ್ಯಪ್ಪ ಸ್ಮರಣಾರ್ಥ ಲೆದರ್ ಬಾಲ್ ಕ್ರಿಕೆಟ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಕೊಡಗು ವಿದ್ಯಾಲಯ ಎ ತಂಡ ಹಾಗೂ ವೀರಾಜಪೇಟೆ ಪ್ರಗತಿ ಶಾಲೆ ತಂಡ ಜಯ ಸಾಧಿಸಿದವು.

ಮೊದಲನೆಯ ಪಂದ್ಯವು ಕೊಡಗು ವಿದ್ಯಾಲಯ ಎ ತಂಡ ಹಾಗೂ ಮಡಿಕೇರಿ ಸಂತ ಮೈಕಲರ ತಂಡಗಳ ನಡುವೆ ನಡೆಯಿತು. ಇದರಲ್ಲಿ ಮೊದಲು ಬ್ಯಾಟ್ ಮಾಡಿದ ಕೊಡಗು ವಿದ್ಯಾಲಯ ಎ ತಂಡ ನಿಗದಿತ ೨೦ ಓವರ್ ಗಳಲ್ಲಿ ೧೪೯ ರನ್ ಗಳನ್ನು ಗಳಿಸಿತು. ೧೫೦ ರ ಗುರಿಯನ್ನು ಬೆನ್ನಟ್ಟಿದ ಮಡಿಕೇರಿ ಸಂತ ಮೈಕಲರ ತಂಡವು ೨೦ ಓವರ್ ಗಳಲ್ಲಿ ೧೦೮ ರನ್ ಗಳನ್ನಷ್ಟೆ ಗಳಿಸಿ ಸೋಲನುಭವಿಸಿತು. ಕೊಡಗು ವಿದ್ಯಾಲಯದ ನಿಲೇಶ್ ಅವರು ೩ ವಿಕೆಟ್ ಗಳನ್ನು ಪಡೆದುಕೊಂಡರು. ೨ ನೆ ಪಂದ್ಯವು ಮಡಿಕೇರಿ ಕ್ರೆಸೆಂಟ್ ಶಾಲೆ ಹಾಗೂ ಪ್ರಗತಿ ಶಾಲೆ ವೀರಾಜಪೇಟೆ ನಡುವೆ ಜರುಗಿತು.

ಇದರಲ್ಲಿ ಮೊದಲು ಬ್ಯಾಟ್ ಮಾಡಿದ ಪ್ರಗತಿ ಶಾಲೆ ೨೦ ಓವರ್ ಗಳಲ್ಲಿ ೨೦೮ ರನ್‌ಗಳನ್ನು ಗಳಿಸಿತು. ಇದನ್ನು ಬೆನ್ನಟ್ಟಿದ ಕ್ರೆಸೆಂಟ್ ಶಾಲೆ ತಂಡ ೪೧ ರನ್‌ಗಳಿಗೆ ಆಲ್‌ಔಟ್ ಆಗಿ ಸೋಲನುಭವಿಸಿತು. ಪ್ರಗತಿ ಶಾಲೆಯ ವೃತಾನ್ ೮೦ ರನ್ ಗಳನ್ನು ಗಳಿಸಿದರು. ಯಶಸ್ ೪೯ ರನ್ ಮಾಡಿದರು. ಕ್ರೆಸೆಂಟ್ ಶಾಲೆಯ ಮೋಕ್ಷಿತ್ ಹ್ಯಾಟ್ರಿಕ್ ವಿಕೆಟ್ ನೊಂದಿಗೆ ಒಟ್ಟು ೫ ವಿಕೆಟ್‌ಗಳನ್ನು ಕಬಳಿಸಿದರು.