ಶನಿವಾರಸಂತೆ, ನ. ೨೯: ಪಟ್ಟಣದ ಶ್ರೀವಿಘ್ನೇಶ್ವರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಾಗೂ ಶಾಲಾ-ಕಾಲೇಜುಗಳ ವಿದ್ಯಾರ್ಥಿ ಗಳಿಗಾಗಿ ಏರ್ಪಡಿಸಿದ್ದ ಕುಣಿಯೋಣ ಬಾರಾ’ ನೃತ್ಯ ಸ್ಪರ್ಧೆಯನ್ನು ಕಸಾಪ ಹೋಬಳಿ ಘಟಕದ ಅಧ್ಯಕ್ಷ ಬಿ.ಬಿ. ನಾಗರಾಜ್ ಉದ್ಘಾಟಿಸಿದರು.

ಮುಖ್ಯ ಅತಿಥಿ ಭಾರತಿ ವಿದ್ಯಾಸಂಸ್ಥೆ ಪದವಿ ಕಾಲೇಜಿನ ಉಪನ್ಯಾಸಕ ಹರೀಶ್ ಮಾಗಲು ಮಾತನಾಡಿ, ಕನ್ನಡಕ್ಕೆ ೮ ಜ್ಞಾನಪೀಠ ಪ್ರಶಸ್ತಿ ಲಭಿಸಿದ್ದು ಕನ್ನಡ ಭಾಷೆಗೆ ೨ ಸಾವಿರ ವರ್ಷಗಳ ಇತಿಹಾಸವಿದೆ. ರಾಜ್ಯದಲ್ಲಿ ಕನ್ನಡಾಭಿಮಾನದ ಕೊರತೆಯಿಂದ ಪರಭಾಷೆಗಳ ಹಾವಳಿ ಹೆಚ್ಚಾಗಿದೆ ಎಂದರು.

ಶ್ರೀ ವಿಘ್ನೇಶ್ವರ ಬಾಲಕಿಯರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಸರ್ಪ್ ರಾಜ್ ಅಹಮ್ಮ್ ಮಾತನಾಡಿ, ಕನ್ನಡಿಗರಾದ ನಾವೆಲ್ಲಾ ಕನ್ನಡ ಭಾಷೆಗೆ ಆದ್ಯತೆ ನೀಡಿ ಒಗ್ಗಟ್ಟಿ ನಿಂದ ಕನ್ನಡತನವನ್ನು ಬೆಳೆಸಿಕೊಳ್ಳ ಬೇಕು ಎಂದರು. ಕಾವೇರಿ ವಿದ್ಯಾಸಂಸ್ಥೆ ಉಪನ್ಯಾಸಕ ಕಾಂತರಾಜ್ ಮತ್ತು ವಿಘ್ನೇಶ್ವರ ವಿದ್ಯಾಸಂಸ್ಥೆಯ ಶಿಕ್ಷಕ ಅಂಜನಪ್ಪ ಮಾತನಾಡಿದರು. ಶ್ರೀ ವಿಘ್ನೇಶ್ವರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಬಿ.ಸಿ. ರವಿ ಅಧ್ಯಕ್ಷತೆ ವಹಿಸಿದ್ದರು. ಭಾರತಿ ವಿದ್ಯಾಸಂಸ್ಥೆಯ ಉಪನ್ಯಾಸಕ ಸೋಮಶೇಖರ್, ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಯ ಉಪನ್ಯಾಸಕ ಅಶೋಕ್, ವಿವಿಧ ಶಾಲೆಗಳ ಶಿಕ್ಷಕರಾದ ಜುರಾಬಿ, ಭವಾನಿ, ವಿಶ್ವನಾಥ್, ಪುಟ್ಟಸ್ವಾಮಿ, ಕೆಂಚಮ್ಮ, ಜಯಮ್ಮ, ಮಲ್ಲೇಶ್ ಇತರರು ಹಾಜರಿದ್ದರು. ಶಿಕ್ಷಕರಾದ ಜೆಸಿಂತಾ ಸಿಕ್ವೆರಾ ಹಾಗೂ ಕೆ.ಪಿ. ಜಯಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು. ಹೋಬಳಿ ವ್ಯಾಪ್ತಿಯ ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿಜೇತ ವಿದ್ಯಾರ್ಥಿಗಳಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಯಿತು.

ಸಮಾರೋಪ ಸಮಾರಂಭ

ಕನ್ನಡ ನಾಡಿನಲ್ಲಿ ಕನ್ನಡದ ಅಸ್ಮಿತೆಯೇ ಕಣ್ಮರೆಯಾಗಿದೆ ಎಂದು ಚಿಕ್ಕ ಅಳುವಾರ ಕೊಡಗು ವಿಶ್ವ ವಿದ್ಯಾಲಯ ಜ್ಞಾನ ಕಾವೇರಿ ಕ್ಯಾಂಪಸ್‌ನ ಉಪನ್ಯಾಸಕ ಡಾ. ಜಮೀರ್ ಅಹಮ್ಮದ್ ವಿಷಾದ ವ್ಯಕ್ತಪಡಿಸಿದರು. ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಶ್ರೀ ವಿಘ್ನೇಶ್ವರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಸಮಾರೋಪ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಭಾಷೆಯ ಬಗ್ಗೆ ಅಭಿಮಾನವಿರ ಬೇಕು. ಎಲ್ಲಾ ನೋವುಗಳನ್ನು ನುಂಗುವ ಸಹನಶೀಲತೆ ಕನ್ನಡಿಗರಿಗೆ ಮಾತ್ರವಿದೆ.ಕನ್ನಡ ನಾಡಿನಲ್ಲಿ ೮ ಕೋಟಿ ಜನರಿದ್ದರೂ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆ. ಹೊರ ರಾಜ್ಯಗಳಲ್ಲಿ ಕಂಡುಬರುವ ಭಾಷಾಭಿಮಾನ ಕನ್ನಡಿಗರಲ್ಲೂ ಕಂಡುಬರಬೇಕು ಎಂದರು. ಶನಿವಾರಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಹರೀಶ್, ಸದಸ್ಯರಾದ ಎಸ್.ಎನ್.ರಘು, ಆದಿತ್ಯ ಗೌಡ, ದುಂಡಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸಿ.ಜೆ. ಗಿರೀಶ್, ಕೆ.ಪಿ.ಸಿ.ಸಿ. ಸದಸ್ಯ ಯಾಕೂಬ್, ಮಲೆನಾಡು ರಕ್ಷಣಾ ವೇದಿಕೆ ಅಧ್ಯಕ್ಷ ರಕ್ಷಿತ್ ಗೌಡ, ಶುಶ್ರೂಷ ಅಧಿಕಾರಿ ಲೋಲಾಕ್ಷಿ ಹಾಗೂ ಶೋಷಿತ ಸಮುದಾಯಗಳ ವೇದಿಕೆ ಅಧ್ಯಕ್ಷ ಸುರೇಶ್ ಮಾತನಾಡಿ, ಕನ್ನಡ ಸಂಸ್ಕೃತಿ-ಪರAಪರೆಯನ್ನು ಎತ್ತಿ ಹಿಡಿದು ಇಲ್ಲಿನ ಸಾಹಿತ್ಯ, ನೆಲ-ಜಲ, ಸಂಪತ್ತನ್ನು ಉಳಿಸಲು ಶ್ರಮಿಸ ಬೇಕು ಎಂದರು. ಸಮಾರಂಭದಲ್ಲಿ ಸಾಧಕರಾದ ವೈದ್ಯ ಡಾ.ಪುಟ್ಟರಾಜ್, ಸಾಹಿತಿ ಹಾಗೂ ಪತ್ರಕರ್ತೆ ಶ.ಗ. ನಯನತಾರಾ, ಕಾಫಿ ಬೆಳೆಗಾರ ಆದಿತ್ಯಗೌಡ ಹಾಗೂ ಹಾಸನದ ಶುಶ್ರೂಷ ಅಧಿಕಾರಿ ಲೋಲಾಕ್ಷಿ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಫಾ. ಡಾ. ಫ್ರಾನ್ಸಿಸ್ ಚಿರಯ್ಕಲ್ ಅವರ ಅನುವಾದಿತ ಕೃತಿ “ಉತ್ತಮ ತಂದೆ ಯೊಬ್ಬರ ಅಂತಿಮ ಹಿತನುಡಿಗಳು’’ ಪುಸ್ತಕವನ್ನು ಲೋಕಾರ್ಪಣೆ ಗೊಳಿಸಲಾಯಿತು.

ಸಾಹಿತಿ ಶ.ಗ. ನಯನತಾರಾ ಮಾತನಾಡಿ, ಕನ್ನಡ ಭಾಷಾಭಿಮಾನ ವನ್ನು ಮನೆಯೊಳಗೇ ಮಾತೆ ಯಾದವಳು ಮಕ್ಕಳಲ್ಲಿ ಮೂಡಿಸಬೇಕು ಎಂದರು. ಶ್ರೀ ವಿಘ್ನೇಶ್ವರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಬಿ.ಸಿ. ರವಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ಉಪಾಧ್ಯಕ್ಷ ಸರ್ದಾರ್ ಅಹಮ್ಮದ್, ಸದಸ್ಯರಾದ ಎಸ್.ಸಿ. ಶರತ್ ಶೇಖರ್, ಎಸ್.ಆರ್. ಮಧು, ಸರಸ್ವತಿ, ಕಾಫಿ ಲಿಂಕ್ಸ್ ಅಶೋಕ್, ದಸಂಸ ಜಿಲ್ಲಾ ಸಂಚಾಲಕ ಈರಪ್ಪ, ದಾನಿಗಳಾದ ಸೂರ್ಯ ಟಿಂಬರ್ ಮಾಲೀಕ ಹಮೀದ್, ವರ್ತಕ ಮಹಮ್ಮದ್ ಸರ್ವರ್ ಪಾಶ, ಅರುಣ್ ಮಾದ್ರೆ, ಪವನ್ ದೇವಯ್ಯ, ಬಾಗೇರಿ ಮಧು, ತೃಪ್ತಿ, ಬಸವರಾಜ್, ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಗೌರವಾಧ್ಯಕ್ಷ ಶುಕ್ಲಾಂಬರ್, ಕಾರ್ಯದರ್ಶಿ ಮಹಮ್ಮದ್ ಅಶ್ರಫ್, ಖಜಾಂಚಿ ಇನ್ನಾ, ಸದಸ್ಯರು ಹಾಜರಿದ್ದರು. ವಿಘ್ನೇಶ್ವರ ವಿದ್ಯಾಸಂಸ್ಥೆ ಶಿಕ್ಷಕ ಕೆ.ಪಿ. ಜಯಕುಮಾರ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ರಾತ್ರಿ ನೇಸರ ಆರ್ಟ್ಸ್ ವತಿಯಿಂದ ಜೇನುಕಲ್ ಮೆಲೋಡಿಸ್‌ನ ತರುಣ್ ಮತ್ತು ಕಿರಣ್, ಜೂನಿಯರ್ ಶಂಕರ್ ನಾಗ್, ಇತರ ನೃತ್ಯಪಟುಗಳಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಿತು.