ಶನಿವಾರಸಂತೆ, ನ. ೨೯: ಸಮೀಪದ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಲುವಾಗಿಲು -ಬೆಸೂರು ಅವಳಿ ಗ್ರಾಮಗಳ ಶ್ರೀ ಬಾಲತ್ರಿಪುರ ಸುಂದರಿ ಅಮ್ಮನವರ ೧೨ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.
ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಸಾವಿರಾರು ಭಕ್ತರು ಶ್ರೀಕ್ಷೇತ್ರಕ್ಕೆ ಬಂದು ದೇವಿಯ ಅನುಗ್ರಹಕ್ಕೆ ಪಾತ್ರರಾದರು. ಬೆಳಿಗ್ಗೆ ದೇವಸ್ಥಾನ ಅರ್ಚಕರಾದ ದರ್ಶನ್, ಸುನೀಲ್ ಹಾಗೂ ಶರಣಯ್ಯ ನೇತೃತ್ವದಲ್ಲಿ ನಿರ್ಮಲ ದರ್ಶನ, ಮಂಗಳಾರತಿ, ಗಣಹೋಮ ನಡೆಯಿತು.
ಮಧ್ಯಾಹ್ನ ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿನಿಯೋಗ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಸಂಜೆ ದೀಪಾರಾಧನೆ ಮಹಾ ಮಂಗಳಾರತಿ ನಡೆದು ಅನ್ನ ದಾಸೋಹ ನಡೆಯಿತು. ರಾತ್ರಿ ಲೇಖಕ ಹಾಗೂ ಗಾಯಕ ಸುರೇಂದ್ರ ಅವರು ಸಾಹಿತ್ಯ ರಚಿಸಿ, ಹಾಡಿರುವ “ಬಂದು ನೋಡಿ ಪುಣ್ಯ ಕ್ಷೇತ್ರವ ಓ ಭಕ್ತ ಜನರೆ, ಬಾಲ ತ್ರಿಪುರ ಸುಂದರಿ ಕ್ಷೇತ್ರವಾ’’ ಹಾಡಿನ ಕ್ಯಾಸೆಟ್ ಬಿಡುಗಡೆಯಾಯಿತು. ಸಹಗಾಯಕರಿಂದ ಭಕ್ತಿ-ಭಾವಗೀತೆಗಳ ರಸಮಂಜರಿ ಕಾರ್ಯಕ್ರಮ ನಡೆಯಿತು. ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಹೆಚ್.ಬಿ. ಧರ್ಮಪ್ಪ, ಕಾರ್ಯದರ್ಶಿ ಬಿ.ಈ. ಲೋಕೇಶ್, ನಿರ್ದೇಶಕರು, ಸದಸ್ಯರು ಹಾಜರಿದ್ದರು.