ಕೂರ್ಗ್ ವೆಲ್‌ನೆಸ್ ಫೌಂಡೇಶನ್ ಆಯೋಜನೆ
ಪಾಲಿಬೆಟ್ಟ, ಡಿ. ೪: ಕೂರ್ಗ್ ವೆಲ್‌ನೆಸ್ ಫೌಂಡೇಶನ್ ವತಿಯಿಂದ ೮ನೇ ಆವೃತ್ತಿಯ ಬರಿಗಾಲು ಮ್ಯಾರಥಾನ್ ಸ್ಪರ್ಧೆಗೆ ತಾ. ೮ ರ ಭಾನುವಾರದಂದು ಟಾಟಾ ಕಾಫಿ ಸಂಸ್ಥೆಯ ಮೈದಾನದಲ್ಲಿ ಚಾಲನೆ ದೊರಕಲಿದೆ. ಬಾಲಿವುಡ್ ನಟ ಮಿಲಿಂಡ್ ಸೋಮನ್ ಅವರು ಮ್ಯಾರಥಾನ್ ಉದ್ಘಾಟಿಸಲಿದ್ದಾರೆ.
ಸುಮಾರು ೩೦೦ ರಿಂದ ೫೦೦ ಸ್ಪರ್ಧಾರ್ಥಿಗಳು ಮ್ಯಾರಥಾನ್‌ನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ರಾಜ್ಯದ ಸ್ಪರ್ಧಾರ್ಥಿಗಳನ್ನು ಹೊರತುಪಡಿಸಿ ದೆಹಲಿ, ಬಾಂಬೆ, ಕಲ್ಕತ್ತ, ತಮಿಳುನಾಡು, ಕೇರಳ ರಾಜ್ಯ ಸೇರಿದಂತೆ ಹೊರರಾಷ್ಟçದವರೂ ಕೂಡ ಭಾಗವಹಿಸಲಿದ್ದಾರೆ.
೪೨ ಕಿ.ಮೀ. ಓಟ ಒಂದು ವಿಭಾಗವಾದರೆ, ೨೧ ಕಿ.ಮೀ., ೧೦ಕಿ.ಮೀ., ೫ ಕಿ.ಮೀ. ವಿಭಾಗಗಳಲ್ಲಿಯೂ ಓಟದ ಸ್ಪರ್ಧೆ ನಡೆಯಲಿದೆ. ಕೊಡಗಿನ ವಿಜೇತ ಸ್ಪರ್ಧಾರ್ಥಿಗಳಿಗೆ ಮಾತ್ರ ನಗದು ಬಹುಮಾನ ನೀಡಲಾಗುವುದು. ೪೨ ಕಿ.ಮೀ. ಓಟದಲ್ಲಿ ಮೊದಲ ಬಹುಮಾನ ರೂ. ೧೫,೦೦೦, ೨ನೆ ಬಹುಮಾನ ರೂ. ೮,೦೦೦, ೨೧ ಕಿ.ಮೀ. ಓಟದಲ್ಲಿ ಮೊದಲ ಬಹುಮಾನ ರೂ. ೧೦,೦೦೦ ಹಾಗೂ ೨ನೆ ಬಹುಮಾನ ರೂ. ೫,೦೦೦, ೧೦ ಕಿ.ಮೀ. ಓಟದಲ್ಲಿ ವಿಜೇತರಾದವರಿಗೆ ಪ್ರಥಮ ರೂ. ೭,೦೦೦ ಹಾಗೂ ದ್ವಿತೀಯ ರೂ. ೩,೦೦೦ ಬಹುಮಾನ, ೫ ಕಿ.ಮೀ. ಓಟz ಸ್ಪರ್ಧಾ ವಿಜೇತರಿಗೆ ಸ್ಮರಣಿಕೆಗಳನ್ನು ನೀಡಲಾಗುವುದು. ವಿಜೇತ ಹಿರಿಯ ನಾಗರಿಕರಿಗೂ ಸ್ಮರಣಿಕೆಗಳನ್ನು ನೀಡಲಾಗುವುದು.
ಕೊಡಗನ್ನು ಪ್ಲಾಸ್ಟಿಕ್ ಮುಕ್ತ ಮಾಡುವುದು, ಕ್ಲೀನ್ ಕೊಡಗು ಮತ್ತು ಕೊಡಗಿನ ನೈಸರ್ಗಿಕ ಸಂಪತ್ತು ಉಳಿಸಿಕೊಳ್ಳಲು ಕೊಡಗನ್ನು ಶೂನ್ಯ ತ್ಯಾಜ್ಯ ಮಾಡುವ ಸಲುವಾಗಿ ಜನರಿಗೆ ಜಾಗೃತಿ ಮೂಡಿಸಲು ಈ ಮ್ಯಾರಥಾನ್‌ಅನ್ನು ೮ ವರ್ಷದಿಂದ ಮಾಡಿಕೊಂಡು ಬರುತ್ತಿದ್ದೇವೆ ಎಂದು ಕೂರ್ಗ್ ವೆಲ್‌ನೆಸ್ ಫೌಂಡೇಶನ್‌ನ ಸ್ಥಾಪಕ ಅಧ್ಯಕ್ಷರಾದ ಚೆಪ್ಪುಡಿರ ನಿಕ್ಕಿ ಪೊನ್ನಪ್ಪ ಅವರು ಮಾಹಿತಿ ಇತ್ತಿದ್ದಾರೆ.