ಪೊನ್ನಂಪೇಟೆ, ಡಿ. ೪: ಕಳೆದ ಕೆಲವು ತಿಂಗಳುಗಳಿAದ ಹತ್ತು ಹಲವು ಸಂಕಷ್ಟದ ನಡುವೆ ಭತ್ತದ ಕೃಷಿಯನ್ನು ಮಾಡಿ ಇದೀಗ ಧಾನ್ಯಲಕ್ಷಿö್ಮಯನ್ನು ಮನೆ ತುಂಬಿಸಿಕೊಳ್ಳುವ ಸಂದರ್ಭದಲ್ಲಿ ಎದುರಾಗಿರುವ ಹವಾಮಾನದ ವೈಪರೀತ್ಯ ರೈತರಿಗೆ ಭಾರೀ ಪ್ರಹಾರವನ್ನೇ ನೀಡಿದೆ. ಪುತ್ತರಿ (ಹುತ್ತರಿ) ಹಬ್ಬವೂ ಹೊಸ್ತಿಲಲ್ಲಿದ್ದು ಭತ್ತದ ಕಟಾವು ಕೆಲಸ ಕೆಲವೆಡೆ ನಡೆದಿತ್ತು. ಹಲವಾರು ಭಾಗಗಳಲ್ಲಿ ಕಟಾವು ಆರಂಭಗೊಳ್ಳಬೇಕಿರುವ ಈ ಸಂದರ್ಭದಲ್ಲಿ ಫೆಂಗಲ್ ಚಂಡಮಾರುತದಿAದ ಅಕಾಲಿಕ ಮಳೆಯಾಗುತ್ತಿದೆ. ಈಗಾಗಲೇ ಕುಯಿಲು ಮಾಡಿರುವ ಫಸಲು ಸೇರಿದಂತೆ ಕಟಾವಿನ ಹಂತದಲ್ಲಿರುವ ಫಸಲು ನೀರಿಗಾಹುತಿಯಾಗಿದೆ. ಜಿಲ್ಲೆಯಲ್ಲಿ ಕೆಲವಾರು ಸಮಸ್ಯೆಗಳ ಕಾರಣದಿಂದಾಗಿ ವರ್ಷಂಪ್ರತಿ ಭತ್ತದ ಕೃಷಿ ಕುಂಠಿತವಾಗುತ್ತಲೇ ಬರುತ್ತಿದೆ. ಆದರೂ ಸಮಸ್ಯೆಗಳ ನಡುವೆಯೇ ಕೆಲವಾರು ಕೃಷಿಕರು ಸಾಂಪ್ರದಾಯಿಕವಾದ ಭತ್ತದ ಕೃಷಿಯತ್ತ ಆಸಕ್ತಿ ತೋರಿ ಭತ್ತ ಬೆಳೆಯುತ್ತಿದ್ದಾರೆ. ಆದರೆ ಇಂತಹ ರೈತರಿಗೆ ಪ್ರಕೃತಿಯ ಮುನಿಸು ಪ್ರತಿವರ್ಷ ಒಂದಲ್ಲಾ ಒಂದು ಹೊಡೆತ ನೀಡುತ್ತಿರುವುದು ವಿಪರ್ಯಾಸವಾಗಿದೆ.
ಫೆಂಗಲ್ ಚಂಡಮಾರುತದ ಪರಿಣಾಮ ಪೊನ್ನಂಪೇಟೆ ಭಾಗದಲ್ಲಿ ಸುರಿದ ವಿಪರೀತ ಮಳೆಗೆ ಸಿಲುಕಿ ಕಟಾವು ಮಾಡಿದ್ದ ಭತ್ತದ ತೆನೆಗಳು ನೀರು ಪಾಲಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರಿಗೆ ಅಪಾರ ನಷ್ಟ ಸಂಭವಿಸಿದೆ.
ಪೊನ್ನಂಪೇಟೆ ಸಮೀಪದ ಹುದೂರು ಗ್ರಾಮದಲ್ಲಿ ಕೃಷಿ ಮೇಲಿನ ಪ್ರೀತಿಯಿಂದ ಲಾಭ ನಷ್ಟ ಲೆಕ್ಕ ಹಾಕದೇ, ಪ್ರತಿ ವರ್ಷವೂ ಹೆಚ್ಚಿನ ಪ್ರಮಾಣದಲ್ಲಿ ನಿರಂತರವಾಗಿ ಭತ್ತದ ಬೆಳೆಯನ್ನು ಬೆಳೆಯುತ್ತಿರುವ ಪ್ರಗತಿ ಪರ ರೈತ, ಮಾದರಿ ಕೃಷಿಕ ಬಿ. ಪಿ. ರವಿಶಂಕರ್ ಅವರು ಕಟಾವು ಮಾಡಿದ್ದ ಭತ್ತದ ತೆನೆಗಳ ಮೇಲೆ ಮಳೆನೀರು ನಿಂತ ಪರಿಣಾಮ, ಇನ್ನೇನು ಒಂದೆರಡು ದಿನದಲ್ಲಿ ಮನೆಗೆ ಕೊಂಡೊಯ್ಯಬೇಕಾಗಿದ್ದ ಕಟಾವು ಮಾಡಿದ್ದ ಭತ್ತದ ತೆನೆಗಳು ನೀರಿನಲ್ಲಿ ಮುಳುಗಿ ಭತ್ತ ಮೊಳಕೆಯೊಡೆಯುವ ಸ್ಥಿತಿಯಲ್ಲಿದೆ. ಮಳೆಯಿಂದ ನೀರು ತುಂಬಿದ ಪರಿಣಾಮ ಸುಮಾರು ೧೫ ಎಕರೆ ಗದ್ದೆಯಲ್ಲಿ ಬೆಳೆಯಲಾಗಿದ್ದ ೧೭ ಬಗೆಯ ವಿಧದ ಭತ್ತದ ತಳಿಗಳು ನೀರು ಪಾಲಾಗಿವೆ. ತಮ್ಮಲ್ಲಿಗೆ ಬಿತ್ತನೆ ಬೀಜಕ್ಕಾಗಿ ಬರುವ ನೂರಾರು ರೈತರಿಗೆ ಬಿತ್ತನೆ ಬೀಜ ಪೂರೈಸುವ ಸಲುವಾಗಿ ರವಿಶಂಕರ್ ಅವರು ವಿವಿಧ ಭತ್ತದ ತಳಿಗಳನ್ನು ಬೆಳೆಯುತ್ತಾರೆ. ಆದರೆ ಈ ಬಾರಿ ಅವರಿಗೆ ಬಿತ್ತನೆ ಬೀಜ ಹೇಗೆ ಪೂರೈಸುವುದು ಎಂಬ ಚಿಂತೆ ಅವರನ್ನು ಕಾಡುತ್ತಿದೆ. ಕೆಲಸಕ್ಕೆ ಕಾರ್ಮಿಕರು ಸಿಗದಿರುವ ಪರಿಸ್ಥಿತಿ ಇದ್ದರೂ ಕೂಡ ಪ್ರತಿ ದಿನ ೩೫ಕ್ಕೂ ಹೆಚ್ಚು ಜನರಿಂದ ಭತ್ತ ಕಟಾವು ಮಾಡಿಸಿದ್ದರು. ಈಗ ಅಕಾಲಿಕ ಮಳೆಯಿಂದಾಗಿ ಇವರಿಗೆ ಅಪಾರ ನಷ್ಟ ಉಂಟಾಗಿದೆ.
ರಾಜ್ಯ ಸರ್ಕಾರದಿಂದ ೨೦೨೨-೨೦೨೩ನೇ ಸಾಲಿನ ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪಡೆದುಕೊಂಡಿರುವ ರವಿಶಂಕರ್ ಪ್ರತಿ ವರ್ಷ ಹೊಸ ಭತ್ತದ ತಳಿಯ ಅಭಿವೃದ್ಧಿಯನ್ನು ಪಡಿಸಿ, ರೈತರಿಗೆ ಉಪಯುಕ್ತ ಮಾಹಿತಿಯನ್ನು ಕೂಡ ನೀಡುತ್ತಿದ್ದಾರೆ. - ಚನ್ನನಾಯಕ