ಶನಿವಾರಸಂತೆ, ಡಿ. ೪: ಇಲ್ಲಿನ ಶ್ರೀಗಣಪತಿ ಪಾರ್ವತಿ ಚಂದ್ರೌಳೇಶ್ವರ ದೇವಾಲಯದಲ್ಲಿ ದೇವಾಲಯ ಸೇವಾ ಸಮಿತಿ ವತಿಯಿಂದ ಲಕ್ಷ ದೀಪೋತ್ಸವದ ಅಂಗವಾಗಿ ಶನಿವಾರ ರಾತ್ರಿ ದೀಪೋತ್ಸವ ಕಾರ್ಯಕ್ರಮ ನೆರವೇರಿತು.

ದೇವಾಲಯದಲ್ಲಿ ದೀಪೋತ್ಸವದ ಅಂಗವಾಗಿ ಅರ್ಚಕರಾದ ಶೇಷಾಚಲ ಭಟ್, ಮಾಲತೇಶ್ ಭಟ್ ಹಾಗೂ ಸುಹಾಸ್ ಭಟ್ ಅವರಿಂದ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ದೇವಾಲಯ ಸಮಿತಿ ಅಧ್ಯಕ್ಷ ಎಸ್.ಸಿ. ಶರತ್ ಶೇಖರ್ ದೀಪ ಬೆಳಗಿಸಿ ದೀಪೋತ್ಸವಕ್ಕೆ ಚಾಲನೆ ನೀಡಿದರು.

ಪೂಜಾ ಕಾರ್ಯಕ್ರಮದ ನಂತರ ತೀರ್ಥ ಪ್ರಸಾದ ವಿತರಣೆಯಾಗಿ, ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.ನಂತರ ದೇವಾಲಯ ಹೊರ ಆವರಣದಲ್ಲಿ ಆಕರ್ಷಕ ಸಿಡಿಮದ್ದಿನ ಪ್ರದರ್ಶನವಾಯಿತು. ರಾಕಿಂಗ್ ಸ್ಟಾರ್ ಆರ್ಕೆಸ್ಟ್ರಾದ ಸೋಮಶೇಖರ್ ತಂಡದವರಿAದ ರಸಮಂಜರಿ ಕಾರ್ಯಕ್ರಮ ನಡೆಯಿತು. ದೇವಾಲಯ ಸೇವಾ ಸಮಿತಿ ಕಾರ್ಯದರ್ಶಿ ಎನ್.ಪಿ. ರವಿ, ನಿರ್ದೇಶಕರು ಹಾಜರಿದ್ದರು.

ಪಟ್ಟಣದ ಶ್ರೀಬೀರಲಿಂಗೇಶ್ವರ ಪ್ರಬಲ ಭೈರವಿ ಹಾಗೂ ಪರಿವಾರ ದೇವತೆಗಳ ದೇವಾಲಯದಲ್ಲೂ ಕಾರ್ತಿಕ ಅಮಾವ್ಯಾಸೆಯ ಪ್ರಯುಕ್ತ ಲಕ್ಷ ದೀಪೋತ್ಸವ ವಿಶೇಷ ಪೂಜಾ ಕೈಂಕರ್ಯಗಳು ಅರ್ಚಕ ಲಿಂಗರಾಜ ಅವರಿಂದ ನೆರವೇರಿತು.ದೇವಾಲಯ ಸಮಿತಿ ಅಧ್ಯಕ್ಷ ಎಂ.ಸಿ. ಕಾಂತರಾಜ್, ಸ್ಥಾಪಕ ಅಧ್ಯಕ್ಷ ಶರತ್ ಶೇಖರ್, ಉಪಾಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ದಿವಾಕರ್, ನಿರ್ದೇಶಕರು ಹಾಜರಿದ್ದರು.