ಕೂಡಿಗೆ, ಡಿ. ೫: ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಿಳಾ ಗ್ರಾಮಸಭೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಲತಾಬಾಯಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಹಾಜರಿದ್ದ ಮಹಿಳೆಯರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಪ ರಸ್ತೆಗಳ ದುರಸ್ತಿ ಪಡಿಸುವಿಕೆ ಸೇರಿದಂತೆ ಇನ್ನೂ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಸಭೆಯಲ್ಲಿ ತಿಳಿಸಿದರು. ಅಧ್ಯಕ್ಷೆ ಲತಾಬಾಯಿ ನವರು ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವಸಹಾಯ ಗುಂಪು ಮತ್ತು ಮಹಿಳೆಯರಿಗೆ ವಿವಿಧ ಯೋಜನೆಯ ಸವಲತ್ತುಗಳನ್ನು ಈಗಾಗಲೇ ಒದಗಿಸಲಾಗಿದೆ. ಅಲ್ಲದೆ ಸರಕಾರದ ವಿವಿಧ ಯೋಜನೆಗಳ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ಸಭೆಗೆ ತಿಳಿಸಿದರು.
ಗ್ರಾಮ ಪಂಚಾಯತಿ ವ್ಯಾಪ್ತಿಯ ಸ್ವಸಹಾಯ ಗುಂಪು, ಮಹಿಳಾ ಸಂಘಟನೆಯ ಗುಂಪುಗಳಿAದ ಮಹಿಳಾ ಗ್ರಾಮಸಭೆಯ ಅಂಗವಾಗಿ ಮಹಿಳಾಸಂತೆ ನಡೆಯಿತು. ಸಂತೆಯಲ್ಲಿ ಮಹಿಳೆಯರು ಸಿದ್ದಪಡಿಸಿದ ಗೃಹೋಪಯೋಗಿ ವಸ್ತುಗಳು, ತಿಂಡಿ-ತಿನಿಸುಗಳು ಹಾಗೂ ವಿವಿಧ ಬಗೆಯ ತರಕಾರಿಗಳ ಮಾರಾಟ ಮಹಿಳೆಯರಿಂದ ನಡೆಯಿತು.
ಈ ಸಂದರ್ಭ ಸದಸ್ಯರಾದ ಸವಿತಾ, ಭಾಗೀರತಿ, ಅಭಿವೃದ್ಧಿ ಅಧಿಕಾರಿ ಹೇಮಲತಾ ಸೇರಿದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವಸಹಾಯ ಗುಂಪುಗಳ ಸದಸ್ಯರು ಮತ್ತು ವಿವಿಧ ಮಹಿಳಾ ಸಂಘಟನೆಯ ಸದಸ್ಯರು ಗ್ರಾಮ ಪಂಚಾಯಿತಿ ನೂರಾರು ಮಹಿಳೆಯರು ಭಾಗವಹಿಸಿದ್ದರು.