ಸೋಮವಾರಪೇಟೆ, ಡಿ. ೫: ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಜೀವಿನಿ ಒಕ್ಕೂಟದಿಂದ ಮಾಸಿಕ ಸಂತೆ ಮೇಳ ಕಾರ್ಯಕ್ರಮ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆಯಿತು.

ಮಹಿಳೆಯರ ಆರ್ಥಿಕ ಸ್ವಾವಲಂಬನೆಯ ಉದ್ದೇಶದಿಂದ ಸರ್ಕಾರವು ನೆರವು ಒದಗಿಸುತ್ತಿದ್ದು, ತಮ್ಮ ಆರ್ಥಿಕ ಚಟುವಟಿಕೆಗಳಿಗೆ ಸ್ಥಳೀಯ ಮಟ್ಟದಲ್ಲಿ, ಮಹಿಳಾ ಸ್ವಸಹಾಯ ಸಂಘಗಳಿಗೆ ಒಕ್ಕೂಟದಿಂದ ಸಾಲ ಸೌಲಭ್ಯ ನೀಡಲಾಗುತ್ತಿದೆ. ಆ ಮೂಲಕ ಆರ್ಥಿಕ ಶಕ್ತಿ ತುಂಬಲಾಗುತ್ತಿದೆ ಎಂದು ಒಕ್ಕೂಟದ ಅಧ್ಯಕ್ಷೆ ಹೆಚ್.ಆರ್. ಮೀರಾ ತಿಳಿಸಿದರು.

ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಂತೆ ೩೦ ಮಹಿಳಾ ಸ್ವಸಹಾಯ ಸಂಘಗಳಿದ್ದು, ಕ್ರಿಯಾಶೀಲವಾಗಿರುವ ಸಂಘಗಳಿಗೆ ಈಗಾಗಲೇ ಒಕ್ಕೂಟದಿಂದ ಸಾಲ ಸೌಲಭ್ಯ ನೀಡಲಾಗಿದೆ. ಗ್ರಾಮೀಣ ಭಾಗದ ಮಹಿಳೆಯರೂ ಸಹ ಹಣಕಾಸಿನ ಜ್ಞಾನದೊಂದಿಗೆ ವ್ಯಾಪಾರ, ಸ್ವ ಉದ್ಯೋಗ ಸೇರಿದಂತೆ ರಚನಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ಜೀವನ ಮಟ್ಟವನ್ನು ಸುಧಾರಿಸಿಕೊಳ್ಳುವಂತೆ ಮಾಡುವ ಉದ್ದೇಶ ಸಂಜೀವಿನಿ ಒಕ್ಕೂಟ ಹೊಂದಿದೆ ಎಂದು ಕಾರ್ಯದರ್ಶಿ ಮಮತ ಚಂದ್ರಶೇಖರ್ ಹೇಳಿದರು.

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆಯ ಮೂಲಕ ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಸಹಕಾರ ಹೊಂದಿರುವ ಸಂಜೀವಿನಿ ಒಕ್ಕೂಟಗಳು ಬಲ ವರ್ಧನೆಗೊಂಡರೆ ಮಹಿಳೆಯರು ಮುಖ್ಯವಾಹಿನಿಗೆ ಬರಲಿದ್ದಾರೆ. ಈ ನಿಟ್ಟಿನಲ್ಲಿ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದರು.

ಮಾಸಿಕ ಸಂತೆ ಮೇಳದಲ್ಲಿ ಭಾಗಿಯಾಗಿದ್ದ ಒಕ್ಕೂಟದ ಮಹಿಳೆಯರು ವಿವಿಧ ತರಕಾರಿ, ವೈನ್, ಬ್ಯಾಗ್‌ಗಳು, ಬಟ್ಟೆ, ಹಣ್ಣು ಹಂಪಲು, ಉಪ್ಪಿನಕಾಯಿ, ಗೃಹೋಪಯೋಗಿ ವಸ್ತುಗಳು, ಅಲಂಕಾರಿಕಾ ಸಾಮಗ್ರಿಗಳನ್ನು ಮಾರಾಟ ಮಾಡಿ ಲಾಭ ಗಳಿಸಿದರು.

ಸಂತೆ ಮೇಳದಲ್ಲಿ ಹಾನಗಲ್ಲು ಗ್ರಾಮದ ಈಶ್ವರ ಹಾಗೂ ಬಸವೇಶ್ವರ ಸ್ವಸಹಾಯ ಸಂಘ, ಮಾಟ್ನಳ್ಳಿ ಬಸವೇಶ್ವರ ಸಂಘ, ಹಾನಗಲ್ಲು ಶೆಟ್ಟಳ್ಳಿಯ ಸರಸ್ವತಿ ಸಂಘ, ಯಡೂರಿನ ಪ್ರಕೃತಿ ಸಂಘದ ಪದಾಧಿಕಾರಿಗಳು ಭಾಗಿಯಾಗಿದ್ದರು.

ಕಾರ್ಯಕ್ರಮಕ್ಕೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್ ಚಾಲನೆ ನೀಡಿದರು.

ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷ ಯಶಾಂತ್‌ಕುಮಾರ್, ಉಪಾಧ್ಯಕ್ಷೆ ರೇಣುಕಾ ವೆಂಕಟೇಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಸ್ಮಾ, ಸಂಜೀವಿನಿ ಒಕ್ಕೂಟದ ಉಪಾಧ್ಯಕ್ಷೆ ಯಡೂರು ಶೈಲಾ, ಒಕ್ಕೂಟದ ಎಂಬಿಕೆ ಚಂದ್ರಾವತಿ, ಎಲ್‌ಸಿಆರ್‌ಪಿ ಚಂದ್ರಿಕ ಧರ್ಮೇಶ್, ಖಜಾಂಚಿ ಸಂಧ್ಯಾ, ಗ್ರಾ.ಪಂ. ಸದಸ್ಯರುಗಳಾದ ಮಿಥುನ್ ಹಾನಗಲ್, ಸುದೀಪ್, ರಘು, ಪ್ರಕಾಶ್, ಸುಶೀಲಾ, ಅನ್ನಪೂರ್ಣ, ಲಲಿತ, ಉಷಾ ಸೇರಿದಂತೆ ಇತರರು ಉಪಸ್ಥಿತರಿದ್ದರು.