ಮಡಿಕೇರಿ, ಡಿ. ೬: ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಇದೇ ಮೊದಲ ಬಾರಿಗೆ ಪತ್ರಕರ್ತರಿಗಾಗಿ ಜಿಲ್ಲಾಮಟ್ಟದ ಪತ್ರಕರ್ತರ ವಾಲಿಬಾಲ್ ವೈಭವ ಪಂದ್ಯಾವಳಿ ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಮೈದಾನದಲ್ಲಿ ತಾ.೮ರಂದು ಆಯೋಜಿಸಲಾಗಿದೆ ಎಂದು ಕೊಡಗು ಪ್ರೆಸ್ ಕ್ಲಬ್‌ನ ಪ್ರದಾನ ಕಾರ್ಯದರ್ಶಿ ಆದರ್ಶ್ ಅದ್ಕಲೇಗಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಜಿಲ್ಲೆಯ ಪತ್ರಕರ್ತರಿಗಾಗಿ ಫುಟ್ಬಾಲ್, ಷೆಟಲ್ ಬ್ಯಾಡ್ಮಿಂಟನ್, ಕೇರಂ, ಟಿಟಿ, ಚೆಸ್, ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಇದೇ ಪ್ರಥಮ ಬಾರಿಗೆ ಆಯೋಜಿಸಿರುವ ವಾಲಿಬಾಲ್ ವೈಭವದಲ್ಲಿ ೪೨ ಪತ್ರಕರ್ತರು ಪಾಲ್ಗೊಳ್ಳಲಿದ್ದಾರೆ. ೫ ತಂಡಗಳ ನಡುವೆ ಲೀಗ್ ಮಾದರಿಯಲ್ಲಿ ಪಂದ್ಯಾಟ ನಡೆಯಲಿದ್ದು, ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ತಂಡಕ್ಕೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.
ಆಟಗಾರರ ಆಯ್ಕೆ ಪ್ರಕ್ರಿಯೆಯನ್ನು ಈಗಾಗಲೇ ನಡೆಸಲಾಗಿದ್ದು, ಕ್ರೀಡಾಕೂಟದ ತಂಡದ ನಾಯಕತ್ವವನ್ನು ಶಿವು ಕಾಂತ್‌ರಾಜ್, ಲೋಕೇಶ್ ಕಾಟಕೇರಿ, ಇಸ್ಮಾಯಿಲ್ ಕಂಡಕೆರೆ, ಪ್ರೇಮ್ ಕುಮಾರ್, ಆದರ್ಶ್ ಅದ್ಕಲೇಗಾರ್ ವಹಿಸಿದ್ದಾರೆ. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ದೈಹಿಕ ಶಿಕ್ಷಕ ರಮೇಶ್ ಅವರ ನೇತೃತ್ವದಲ್ಲಿ ಶುಕ್ರವಾರ ಮೈದಾನದ ಸಿದ್ಧತೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಉದ್ಘಾಟನಾ ಕಾರ್ಯಕ್ರಮ: ತಾ.೮ರ ಬೆಳಿಗ್ಗೆ ೧೧.೪೫ ಗಂಟೆಗೆ ಕೊಡಗು ಪ್ರೆಸ್ ಕ್ಲಬ್‌ನ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಉದ್ಘಾಟನಾ ಕಾರ್ಯಕ್ರಮವನ್ನು ನಗರಸಭೆ ಪೌರಾಯುಕ್ತ ಎಚ್.ಎಂ. ರಮೇಶ್ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ, ಮಡಿಕೇರಿ ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಂದ್ರೀರ ಮೋಹನ್‌ದಾಸ್, ಹೊಟೇಲ್ ಉದ್ಯಮಿ ಶಂಕರ್ ಪೂಜಾರಿ, ಕೊಡಗು ಪ್ರೆಸ್ ಕ್ಲಬ್‌ನ ಪ್ರದಾನ ಕಾರ್ಯದರ್ಶಿ ಆದರ್ಶ್ ಅದ್ಕಲೇಗಾರ್, ಕ್ಲಬ್ ನಿರ್ದೇಶಕ ಮತ್ತು ವಾಲಿಬಾಲ್ ವೈಭವದ ಸಂಚಾಲಕ ಲೋಹಿತ್ ಮಾಗಲು, ಸದಸ್ಯರಾದ ಜೈರಸ್ ಥಾಮಸ್ ಅಲೆಕ್ಸಾಂಡರ್ ಪಾಲ್ಗೊಳ್ಳಲಿದ್ದಾರೆ.
ಸಮಾರೋಪ ಸಮಾರಂಭ: ಅಂದು ಸಂಜೆ ೪ ಗಂಟೆಗೆ ಕೊಡಗು ಪ್ರೆಸ್ ಕ್ಲಬ್‌ನ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ, ಉದ್ಯಮಿಗಳಾದ ಕೆ.ಎಂ.ಬಿ. ಗಣೇಶ್, ಪಿ.ವಿಷ್ಣು, ಕೌಶಿಕ್ ಪೊಕ್ಕುಳಂಡ್ರ, ಸುಂಟಿಕೊಪ್ಪ ಗ್ರಾ.ಪಂ. ಸದಸ್ಯ ಜಿನಾಸುದ್ದಿನ್, ಕ್ಲಬ್ ಸದಸ್ಯ ಮತ್ತು ವಾಲಿಬಾಲ್ ವೈಭವದ ಸಂಚಾಲಕ ಶಿವ ಕಾಂತ್‌ರಾಜು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.