ಗೋಣಿಕೊಪ್ಪಲು, ಜ. ೯: ಇತ್ತೀಚೆಗೆ ಕೊಡವ ಜನಾಂಗದ ತೇಜೋವಧೆ, ಅವಮಾನಗೊಳಿಸುವದು ಮತ್ತು ಮತೀಯ ಸಂಘರ್ಷಕ್ಕೆ ಪ್ರಚೋದನೆ ನೀಡುತ್ತಿರುವದು ಜಿಲ್ಲೆಯಲ್ಲಿ ಅಧಿಕವಾಗುತ್ತಿರುವದು ಅಕ್ಷಮ್ಯ ಎಂದು ಟಿ.ಶೆಟ್ಟಿಗೇರಿ ಸಿಎನ್‌ಸಿ ಸದಸ್ಯ ಬೊಟ್ಟಂಗಡ ಗಿರೀಶ್ ಪೆಮ್ಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಪೊನ್ನಂಪೇಟೆಯಲ್ಲಿ ಮಾತನಾಡಿದ ಅವರು, ಕೊಡವ ಜನಾಂಗದ ಶ್ರೀಮಂತ ಸಂಸ್ಕೃತಿಗೆ ದೇಶ ವಿದೇಶದಲ್ಲಿ ಹೆಚ್ಚಿನ ಮನ್ನಣೆ ಇದೆ. ಕಟ್ಟೆಮಾಡು ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿ ಕೆಲವು ವ್ಯಕ್ತಿಗಳು ತಮ್ಮ ಇಷ್ಟ ಪ್ರಕಾರ ಮಾಡಿಕೊಂಡ ಬೈಲಾದಲ್ಲಿ ಕೊಡವರ ಕುಪ್ಯ- ಚ್ಯಾಲೆ ಹಾಗೂ ಕೊಡವತಿ ಪೊಡಿಯ (ಸೀರೆ) ಧರಿಸಿ ದೇವಸ್ಥಾನ ಪ್ರವೇಶ ಮಾಡಬಾರದೆಂಬುದು ನಮ್ಮ ಸಂಸ್ಕೃತಿಗೆ ಮಾಡಿದ ಅವಮಾನವಾಗಿದೆ ಎಂದರು. ಕೊಡವರು ಇತರೆ ಯಾವದೇ ಜನಾಂಗದ ಭಾವನಾತ್ಮಕ ವಿಚಾರದಲ್ಲಿ ಹಸ್ತಕ್ಷೇಪ ಮಾಡದಿದ್ದರೂ ಇಂದು ನಿರಂತರ ಅಪಪ್ರಚಾರದಲ್ಲಿ ಒಂದು ಜನಾಂಗದ ಕೆಲವು ವ್ಯಕ್ತಿಗಳು ತೊಡಗಿರುವದು ಸರಿಯಲ್ಲ ಎಂದು ಹೇಳಿದರು.
ಕೊಡವರ ಪುಣ್ಯಕ್ಷೇತ್ರ ತಲಕಾವೇರಿ ಪ್ರವೇಶಕ್ಕೆ ನಿರ್ಬಂಧ ಯತ್ನ, ದೇವಾಟ್‌ಪರಂಬು ಕೊಡವ ನರಮೇಧ ಸ್ಮಾರಕ ಭಗ್ನ, ಎಫ್.ಎಂ.ಕಾರ್ಯಪ್ಪ ಪ್ರತಿಮೆಗೆ ಚಪ್ಪಲಿ ಹಾರ ಹಾಕಿದ್ದು, ಕೊಡವರ ನಾಮಪದವನ್ನು ರಾಜ್ಯ ಪತ್ರದಲ್ಲಿ ಪ್ರಕಟವಾಗದಂತೆ ತಡೆದದ್ದು, ಕೊಡವರ ವಿಶೇಷ ತೋಕ್ ಹಕ್ಕನ್ನು ಕಸಿಯಲು ನ್ಯಾಯಾಲಯದಲ್ಲಿ ತಕರಾರು ಹಾಕಿದ್ದು, ಕೊಡವ ಬೈರೇಸ್ ವಿನಾಯತಿಯನ್ನು ಗೌಡ ಬೈರೇಸ್ ಮಾಡಲು ಹೊರಟಿದ್ದು, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿರುವದು, ಕೊಡವ ರೈತರಿಗೆ ನಕ್ಸಲ್ ಬೆದರಿಕೆ ಹಾಗೂ ಅಟ್ರಾಸಿಟಿ ಕೇಸು ದಾಖಲಿಸಿದ್ದು, ಕೊಡವರ ಎಸ್‌ಟಿ ಬೇಡಿಕೆಗೆ ನಿರಂತರ ತಡೆ ಒಡ್ಡಿದ್ದು ಒಳಗೊಂಡAತೆ ಸುಮಾರು ೨೪ ವಿವಿಧ ಪ್ರಕರಣಗಳಲ್ಲಿ ಕೊಡವ ಮಹಿಳೆಯರನ್ನು ಸೇರಿದಂತೆ ತೇಜೋವಧೆಗೆ ನಿರಂತರ ಯತ್ನಿಸಿರುವದು ಮುಂದೆ ಜಾತಿ ಸಂಘರ್ಷಕ್ಕೆ ಕಾರಣವಾಗಲಿದೆ ಎಂದು ಅವರು ಹೇಳಿದರು.
ಕಳೆದ ೩೫ ವರ್ಷದಿಂದ ಕೊಡವರ ವಿರುದ್ಧ ನಿರಂತರ ಪಿತೂರಿ ನಡೆಯುತ್ತಾ ಬಂದಿದ್ದು, ಕಟ್ಟೆಮಾಡು ಮೃತ್ಯುಂಜಯ ದೇವಸ್ಥಾನವನ್ನು ಸರ್ಕಾರ ಮುಜರಾಯಿ ಇಲಾಖೆಯ ವಶಕ್ಕೆ ತೆಗೆದುಕೊಂಡು ಎಲ್ಲಾ ಜನಾಂಗಕ್ಕೂ ತಮ್ಮ ಸಂಸ್ಕೃತಿಯ ವಸ್ತçದೊಂದಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕೆಂದು ಗಿರೀಶ್ ಪೆಮ್ಮಯ್ಯ ಒತ್ತಾಯಿಸಿದರು.
ಸಿಎನ್‌ಸಿ ಮತ್ತೋರ್ವ ಸದಸ್ಯ ಅಜ್ಜಿಕುಟ್ಟೀರ ಲೋಕೇಶ್ ಕೊಡವ ಮಾತನಾಡಿ, ಸಿಎನ್ ಸಿ ನಾಚಪ್ಪ ಅವರು ಕೊಡವ ಲ್ಯಾಂಡ್ ಅಸ್ತಿತ್ವಕ್ಕೆ ತರಲು ಸುಪ್ರೀಂ ಕೋರ್ಟ್ ವಕೀಲ ಸುಬ್ರಮಣ್ಯ ಸ್ವಾಮಿ ಮೂಲಕ ನಿರಂತರ ಹೋರಾಟ ನಡೆಸಿದ್ದಾರೆ. ಇದೀಗ ಕೊಡಗಿನಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದೆ. ಕೊಡವರ ಹಕ್ಕು ಬಾಧ್ಯತೆಗಳಿಗೆ ಹೋರಾಡುತ್ತಿರುವ ನಾಚಪ್ಪ ಅವರನ್ನು ಗಡಿಪಾರು ಮಾಡಲು ಒತ್ತಾಯಿಸುತ್ತಿರುವ ಇವರಿಗೆ ಈ ಮಣ್ಣಿನಲ್ಲಿ ವಾಸಿಸುವ ಯೋಗ್ಯತೆ ಇಲ್ಲ ಎಂದು ಟೀಕಿಸಿದರು.
ಗೋಷ್ಠಿಯಲ್ಲಿ ಕಿರಿಯಮಾಡ ಶರೀನ್ ಕೊಡವ ಹಾಗೂ ಟಿ. ಶೆಟ್ಟಿಗೇರಿಯ ಮಚ್ಚಾಮಾಡ ರಂಜಿ ಉಪಸ್ಥಿತರಿದ್ದರು.