ಸುಂಟಿಕೊಪ್ಪ, ಜ.೯ : ಮನೆಯ ಕೊಟ್ಟಿಗೆ ಒಳಗೆ ಅಪರೂಪದ ಅತಿಥಿ ಕಾಲಿಟ್ಟಿತ್ತು. ಕಾಡು ಮತ್ತು ಕಾಫಿ ತೋಟಗಳಲ್ಲಿ ನೆಲೆಸಿರುವ ಹುಲಿ ಮತ್ತು ಚಿರತೆಯನ್ನು ಹೋಲಿಕೆ ಹೊಂದಿರುವ ಕಾಡುಬೆಕ್ಕು (ಪೆರ್ಪಣ) ಪ್ರತ್ಯಕ್ಷವಾಗಿ ಮನೆಯ ಮಂದಿಯಲ್ಲಿ ಆತಂಕ, ಭಯ ಮೂಡಿಸಿತ್ತು.

ತಾ. ೮ ರಂದು ರಾತ್ರಿ ೮.೩೦ ರ ಸಮಯದಲ್ಲಿ ತನ್ನ ಬಿಡಾರದಿಂದ ತಪ್ಪಿಸಿಕೊಂಡ ಕಾಡುಬೆಕ್ಕು (ಪೆರ್ಪಣ) ಸುಂಟಿಕೊಪ್ಪ ಗದ್ದೆಹಳ್ಳದ ನಿವಾಸಿ ಎಂ.ಎ. ಸತೀಶ್ ಎಂಬುವವರ ಮನೆ ಬಳಿಗೆ ಬಂದು ಸಾಕುಬೆಕ್ಕಿನೊಂದಿಗೆ ಕಾದಾಟಕ್ಕಿಳಿದಿದೆ. ನಂತರ ಕೊಟ್ಟಿಗೆ ಒಳಗೆ ನುಸುಳಿ ಸದ್ದು ಮಾಡತೊಡಗಿದೆ. ಅದನ್ನು ಕಂಡ ಮನೆಯವರು ಹುಲಿ ಕಂಡವರAತೆ ಹೌಹಾರಿದ್ದಾರೆ.

ಮನೆಗೆ ಬಂದ ಅಪರೂಪದ ಅತಿಥಿ ಹುಲಿ ಮರಿ ಅಲ್ಲ ಪೆರ್ಪಣ ಎಂದು ತಿಳಿದ ಮೇಲೆ ನಿಟ್ಟುಸಿರು ಬಿಟ್ಟಿದ್ದಾರೆ. ಸತೀಶ್ ಅವರ ಪತ್ನಿ ಸೆಲ್ವಿ ಅವರು ಉರಗ ತಜ್ಞ ಹಾಗೂ ಪ್ರಾಣಿಪ್ರಿಯ ಪಿ. ಬಾಲಚಂದ್ರರವರಿಗೆ ಕರೆಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಬಾಲಚಂದ್ರ ಅವರು ಪೆರ್ಪಣವನ್ನು ಸುರಕ್ಷಿತವಾಗಿ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು. ನಂತರ ಕುಶಾಲನಗರ ಆರಣ್ಯ ಇಲಾಖೆಯ ಉಮೇಶ್ ಅವರಿಗೆ ಮಾಹಿತಿ ನೀಡಿ, ಸತೀಶ್ ಅವರೊಂದಿಗೆ ತೆರಳಿ ಅರಣ್ಯ ಇಲಾಖೆಯ ಗಾರ್ಡ್ ಸಮ್ಮುಖದಲ್ಲಿ ಸುರಕ್ಷಿತವಾಗಿ ಆನೆಕಾಡು ಅರಣ್ಯದ ಒಳಗೆ ಬಿಟ್ಟಿದ್ದಾರೆ.