ಸೋಮವಾರಪೇಟೆ, ಜ. ೧೦: ಶಾಂತಳ್ಳಿ ಹೋಬಳಿಯ ಮೂಲಕ ಕೂತಿ ಮಾರ್ಗವಾಗಿ ಹಾದು ಹೋಗುವ ಎಸ್.ಎಚ್. ೮೫ ಹೆದ್ದಾರಿಯಲ್ಲಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ವತಿಯಿಂದ ನಿರ್ಮಾಣವಾಗುತ್ತಿರುವ ಕಾಮಗಾರಿಗೆ ರಾಜ್ಯದ ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೋಳಿ ಭೂಮಿ ಪೂಜೆ ನೆರವೇರಿಸಲಿದ್ದಾರೆ ಎಂದು ತೋಳೂರುಶೆಟ್ಟಳ್ಳಿ ಕಾಂಗ್ರೆಸ್ ವಲಯ ಸಮಿತಿ ಅಧ್ಯಕ್ಷ ಕೆ.ಯು. ಜಗದೀಶ್ ತಿಳಿಸಿದರು.

ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಗಡಿಯಿಂದ ಬೈಂದೂರಿಗೆ ಸಂಪರ್ಕಿಸುವ ರಾಜ್ಯ ಹೆದ್ದಾರಿ ಕೂಡು ರಸ್ತೆ, ಕಲ್ಕಂದೂರು, ಹೊಸಬೀಡು, ಕೂತಿ ಮಾರ್ಗವಾಗಿ ಹಾಸನ ಜಿಲ್ಲೆಗೆ ಸಂಪರ್ಕಿಸಲಿದ್ದು, ಈ ರಸ್ತೆಯು ಕಿರಿದಾಗಿದ್ದು, ಸಾಕಷ್ಟು ವರ್ಷಗಳಿಂದ ರಸ್ತೆ ಅಭಿವೃದ್ಧಿಪಡಿಸುವಂತೆ ಸಂಬAಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಲ್ಲಿ ಮನವಿ ಮಾಡಿದರೂ, ಸರಿಪಡಿಸಿರಲಿಲ್ಲ. ಈಗ ಕ್ಷೇತ್ರದ ಶಾಸಕರ ಪ್ರಯತ್ನದಿಂದ ರಸ್ತೆ ವಿಸ್ತರಣೆ ಸೇರಿದಂತೆ ರೂ. ೨೦ ಕೋಟಿ ವೆಚ್ಚದ ಕಾಮಗಾರಿ ನಡೆಯಲಿದ್ದು, ತಾ. ೧೧ರಂದು (ಇಂದು) ಲೋಕೋಪಯೋಗಿ ಸಚಿವರು ಭೂಮಿ ಪೂಜೆ ನೆರವೇರಿಸಲಿದ್ದಾರೆ. ಈ ಸಂದರ್ಭ ಕ್ಷೇತ್ರದ ಜಿಲ್ಲೆಯ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು, ಶಾಸಕ ಡಾ. ಮಂತರ್ ಗೌಡ, ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ವಿಧಾನ ಪರಿಷತ್ ಸದಸ್ಯ ಸುಜಾಕುಶಾಲಪ್ಪ, ಎಸ್.ಎಲ್. ಬೋಜೇಗೌಡ, ಡಾ. ಧನಂಜಯ ಸರ್ಜಿ ಸೇರಿದಂತೆ ಹಲವರು ಉಪಸ್ಥಿತರಿರುವರು ಎಂದು ತಿಳಿಸಿದರು.

ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎಂ. ಲವ ಮಾತನಾಡಿ, ಈ ಭಾಗದಲ್ಲಿ ರಸ್ತೆ ಸರಿ ಇರದ ಕಾರಣ ಸಾಕಷ್ಟು ಸಮಸ್ಯೆಯಾಗಿತ್ತು. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳೆದಂತೆ ಸಾಕಷ್ಟು ವಾಹನಗಳ ಸಂಖ್ಯೆಯೂ ಹೆಚ್ಚಾಗಿದೆ. ಮಳೆಗಾಲದಲ್ಲಿ ರಸ್ತೆಯ ಮೇಲೆಯೇ ಒಂದು ಅಡಿಯಷ್ಟು ನೀರು ಹರಿಯುವುದರಿಂದ ಸಾಕಷ್ಟು ವಾಹನ ಸವಾರರು ಅಪಘಾತಕ್ಕೀಡಾಗಿದ್ದಾರೆ. ಈಗ ರಸ್ತೆ ಸರಿಪಡಿಸುತ್ತಿರುವುದರಿಂದ ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿಗೆ ನಾಂದಿಯಾಗಲಿದೆ. ಅಲ್ಲದೆ, ಧರ್ಮಸ್ಥಳ, ಸುಬ್ರಹ್ಮಣ್ಯ ಹಾಗೂ ಮಂಗಳೂರಿಗೆ ತೆರಳಲು ಸಮೀಪದ ರಸ್ತೆಯು ಆಗಿರುವುದರಿಂದ ಹೊರ ಜಿಲ್ಲೆಯ ಪ್ರವಾಸಿಗರಿಗೂ ಅನುಕೂಲವಾಗಲಿದೆ ಎಂದರು.

ಗೋಷ್ಠಿಯಲ್ಲಿ ಕಾಂಗ್ರೆಸ್ ಬೆಟ್ಟದಳ್ಳಿ ವಲಯ ಅಧ್ಯಕ್ಷ ಜಿ.ಆರ್. ಸುರೇಶ್, ಬ್ಲಾಕ್ ಕಾಂಗ್ರೆಸ್ ಸದಸ್ಯ ಶಿವರಾಜು, ತೋಳೂರುಶೆಟ್ಟಳ್ಳಿ ಬೂತ್ ಅಧ್ಯಕ್ಷ ಎಚ್.ಡಿ. ಶಾಂತಪ್ಪ, ಕಂಬಳ್ಳಿ ಕೆ.ಎಂ. ರವಿ ಉಪಸ್ಥಿತರಿದ್ದರು.