ಸೋಮವಾರಪೇಟೆ, ಜ. ೧೦: ಸುಮಾರು ೯೦೦ಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿರುವ ಶಾಂತಳ್ಳಿ ಗ್ರಾಮದಲ್ಲಿ ನೆಲೆಯಾಗಿರುವ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ದೇವಾಲಯದ ೬೬ನೇ ವರ್ಷದ ಮಹಾ ರಥೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗಿದ್ದು, ತಾ. ೧೬ ರಂದು ೬೬ನೇ ಮಹಾ ರಥೋತ್ಸವ ನಡೆಯಲಿದೆ ಎಂದು ದೇವಾಲಯ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಕೆ.ಎಂ. ಲೋಕೇಶ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಬರೂರು ಶ್ರೀ ಗೋಪಾಲಕೃಷ್ಣ ತಂತ್ರಿಗಳ ಪೌರೋಹಿತ್ವದಲ್ಲಿ ೬೬ನೇ ವಾರ್ಷಿಕ ಮಹಾ ರಥೋತ್ಸವ ಅಂಗವಾಗಿ ತಾ. ೧೩ ರಿಂದಲೇ ದೇವಾಲಯದಲ್ಲಿ ವಿಶೇಷ ಪೂಜೆಗಳು ಆರಂಭಗೊಳ್ಳಲಿವೆ. ತಾ. ೧೩ ರಂದು ಬೆಳ್ಳಿ ಬಂಗಾರ ದಿನದ ಅಂಗವಾಗಿ ಸಂಜೆ ೬.೩೦ ರಿಂದ ೭.೩೦ ರವರೆಗೆ ಜಾತ್ರಾ ಪ್ರಾರಂಭೋತ್ಸವ ಪೂಜೆ, ತಾ. ೧೪ ರಂದು ಮಕರ ಸಂಕ್ರಮಣ ಕರುವಿನ ಹಬ್ಬದ ಅಂಗವಾಗಿ ಸಂಜೆ ೭ ಗಂಟೆಗೆ ದೇವಾಲಯದ ಗರುಡ ಕಂಬದ ಅಗ್ರಪೀಠದಲ್ಲಿ ತುಪ್ಪದ ನಂದಾದೀಪ ಬೆಳಗಿಸುವುದು, ಅಂಕುರಾರ್ಪಣ ಪೂಜೆ, ಮಹಾಮಂಗಳಾರತಿ ನೆರವೇರಲಿದೆ ಎಂದರು.

ತಾ. ೧೫ ರಂದು ಅರಸು ಬಲ ಸೇವೆ ನಡೆಯಲಿದ್ದು, ಕೊತ್ತನಳ್ಳಿ, ಬೀದಳ್ಳಿ, ಹೆಗ್ಗಡಮನೆ, ಕುಮಾರಳ್ಳಿ, ಬಾಚಳ್ಳಿ, ಜಕ್ಕನಳ್ಳಿ, ಇನಕನಹಳ್ಳಿ, ಕೂತಿ ನಾಡು, ತೋಳುನಾಡು, ಯಡೂರು, ತಲ್ತರೆಶೆಟ್ಟಳ್ಳಿ ಗ್ರಾಮದಿಂದ ಭಕ್ತಾದಿಗಳು ಸೇವೆಯಲ್ಲಿ ಭಾಗವಹಿಸಲಿದ್ದಾರೆ. ರಾತ್ರಿ ೭.೩೦ ರಿಂದ ದೇವಾಲಯದಲ್ಲಿ ಗಣಹೋಮ, ರಂಗಪೂಜೆ, ಬೀದಿ ಉತ್ಸವ ಜರುಗಲಿವೆ ಎಂದು ಮಾಹಿತಿ ನೀಡಿದರು.

ಮಹಾ ರಥೋತ್ಸವ: ತಾ. ೧೬ ರಂದು ಮಧ್ಯಾಹ್ನ ೧೨.೫ಕ್ಕೆ ಕುಮಾರಲಿಂಗೇಶ್ವರ ಸ್ವಾಮಿಯ ೬೬ನೇ ಮಹಾರಥೋತ್ಸವ ಜರುಗಲಿದೆ. ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಂಸದ ಯದುವೀರ್ ಒಡೆಯರ್, ಶಾಸಕರಾದ ಡಾ. ಮಂತರ್ ಗೌಡ, ಎ.ಎಸ್. ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್, ಸುಜಾ ಕುಶಾಲಪ್ಪ, ಮಾಜಿ ಸಚಿವರಾದ ಬಿ.ಎ. ಜೀವಿಜಯ, ಎಂ.ಪಿ. ಅಪ್ಪಚ್ಚು ರಂಜನ್, ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ದಾನಿಗಳಾದ ಚಂದ್ರಕಲಾ ರಾಮಚಂದ್ರ, ‘ಶಕ್ತಿ’ ಪ್ರಧಾನ ಸಂಪಾದಕ ಜಿ. ರಾಜೇಂದ್ರ, ಪ್ರಮುಖರಾದ ಎನ್.ಎಂ. ಮುತ್ತಪ್ಪ, ಸದಾಶಿವ ಕಣವೆ, ಎ.ಆರ್. ಮುತ್ತಣ್ಣ, ಎಸ್.ಎಂ. ಚಂಗಪ್ಪ, ಅರುಣ್ ಕಾಳಪ್ಪ, ಕೆ.ಟಿ. ಸತೀಶ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದರು.

ಭಕ್ತಾದಿಗಳಿಗೆ ದೇವಾಲಯ ಸಮಿತಿ ವತಿಯಿಂದ ಅನ್ನಸಂತರ್ಪಣೆ ನಡೆಯಲಿದೆ. ರಥೋತ್ಸವದ ನಂತರ ಸಂಜೆ ದೇವಾಲಯದಲ್ಲಿ ಪಲ್ಲಕ್ಕಿ ಉತ್ಸವ ಜರುಗಲಿದೆ. ತಾ. ೧೭ ರಂದು ಮಹಾ ಸಂಪ್ರೋಕ್ಷಣೆ, ಪಂಚಾಮೃತಾಭಿಷೇಕ, ಕ್ಷೀರಾಭಿಷೇಕ, ನಾರಿಕೇಳ ಜಲಾಭಿಷೇಕ, ಮಹಾಮಂಗಳಾರತಿ ನಂತರ ಮಂಗಳ ಪ್ರಾರ್ಥನೆ ನಡೆಯಲಿದೆ ಎಂದು ಕೆ.ಎಂ. ಲೋಕೇಶ್ ತಿಳಿಸಿದರು.

ವಸ್ತುಪ್ರದರ್ಶನ: ಜಾತ್ರೋತ್ಸವದ ಅಂಗವಾಗಿ ತಾಲೂಕಿನ ಕೃಷಿ ಇಲಾಖೆ, ತೋಟಗಾರಿಕೆ, ಸಂಬಾರ ಮಂಡಳಿ ಸೇರಿದಂತೆ ಇತರ ಇಲಾಖೆಗಳ ವತಿಯಿಂದ ರೈತರು ಬೆಳೆದ ಬೆಳೆಗಳ ಪ್ರದರ್ಶನ, ಆಕರ್ಷಕ ವಸ್ತುಗಳಿಗೆ ಬಹುಮಾನ ವಿತರಣೆ ಮಾಡಲಾಗುವುದು ಎಂದರು.

ಕ್ರೀಡಾಕೂಟ: ಜಾತ್ರೋತ್ಸವ ಅಂಗವಾಗಿ ತಾ. ೧೫ ಮತ್ತು ೧೬ ರಂದು ಶ್ರೀ ಕುಮಾರಲಿಂಗೇಶ್ವರ ಯುವಕ ಸಂಘದ ಆಶ್ರಯದಲ್ಲಿ ಪುರುಷರ ಮುಕ್ತ ಕಬಡ್ಡಿ ಮತ್ತು ವಾಲಿಬಾಲ್, ಮಹಿಳೆಯರಿಗೆ ಥ್ರೋಬಾಲ್ ಸೇರಿದಂತೆ ಹಗ್ಗಜಗ್ಗಾಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಶಾಂತಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಂದ್ಯಾಟಗಳು ನಡೆಯಲಿದ್ದು, ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವುದು ಎಂದರು.

ಸಮಾರೋಪ: ತಾ. ೧೭ ರಂದು ಜಾತ್ರಾ ಸಮಾರೋಪ ಸಮಾರಂಭ ಶಾಂತಳ್ಳಿಯ ಪ್ರಶಾಂತ ವೇದಿಕೆಯಲ್ಲಿ ನಡೆಯಲಿದೆ. ಅಂದು ಅಪರಾಹ್ನ ೩ ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ದೇವಾಲಯ ಸಮಿತಿ ಮಾಜಿ ಅಧ್ಯಕ್ಷ ರಾಮಚಂದ್ರ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ನಂತರ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮೂಡಿಬರಲಿದೆ ಎಂದು ಲೋಕೇಶ್ ತಿಳಿಸಿದರು.

ಗೋಷ್ಠಿಯಲ್ಲಿ ದೇವಾಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಕೆ. ಮುತ್ತಣ್ಣ, ಪದಾಧಿಕಾರಿಗಳಾದ ಜಿ.ಎಸ್. ಮಧುಕುಮಾರ್, ಕೆ.ಈ. ಲಿಖಿತ್, ಕೆ.ಪಿ. ಚಂಗಪ್ಪ ಅವರುಗಳು ಉಪಸ್ಥಿತರಿದ್ದರು.