ಸೋಮವಾರಪೇಟೆ, ಜ. ೧೦ : ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯ ನಿಯೋಗವೊಂದು ಜಿಲ್ಲೆಯ ಸಿ ಮತ್ತು ಡಿ ಜಾಗ ಸಮಸ್ಯೆ ಬಗ್ಗೆ ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದ್ದು, ಸ್ಥಳೀಯವಾಗಿ ರೈತರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಗಮನ ಸೆಳೆದಿದೆ.
ಬೆಂಗಳೂರಿನ ವಿಕಾಸ ಸೌಧದ ಬಳಿಯಿರುವ ಕಂದಾಯ ಇಲಾಖೆಯ ಪ್ರಧಾನ ಕಚೇರಿಯಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅವರನ್ನು ಭೇಟಿ ಮಾಡಿದ ಪದಾಧಿಕಾರಿಗಳು, ಸಿ ಮತ್ತು ಡಿ ಜಾಗದಲ್ಲಿ ಹಲವಾರು ವರ್ಷಗಳಿಂದ ಕೃಷಿ ಮಾಡಿಕೊಂಡಿರುವ, ಮನೆ ನಿರ್ಮಿಸಿಕೊಂಡಿರುವ ಮಂದಿಗೆ ಹಕ್ಕುಪತ್ರ ಒದಗಿಸಲು ಕಂದಾಯ ಇಲಾಖೆಯ ಮೂಲಕ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದರು. ಕಳೆದ ೧೯೭೮ನೇ ಸಾಲಿನ ಸರಕಾರದ ಪ್ರಕಟಣೆಯಂತೆ ಕೊಡಗು
ಜಿಲ್ಲೆಯಲ್ಲಿ ೬೪,೧೩೭ ಏಕ್ರೆ ಸಿ ಮತ್ತು ಡಿ ಜಮೀನೆಂದು ಗುರುತಿಸಿದ್ದು, ಈ ಜಮೀನಿನ ಶೇ. ೯೫ ರಷ್ಟು ಭಾಗ ಸಾಗುವಳಿಗೆ ಯೋಗ್ಯವಾಗಿದೆ. ಈಗಾಗಲೇ ರೈತರು ಸಾಗುವಳಿ ಮಾಡಿಕೊಂಡು ಬರುತ್ತಿದ್ದು ಕೆಲವು ರೈತರು ಭೂ ಮಂಜೂರಾತಿ ಕಾಯಿದೆಯಡಿ ಜಮೀನು ಮಂಜೂರಾತಿ ಮಾಡಿಸಿಕೊಂಡಿರುತ್ತಾರೆ. ನಂತರದಲ್ಲಿ ಅನೇಕ ರೈತರು ಭೂ ಮಂಜೂರಾತಿ ಕೋರಿ ನಮೂನೆ ೫೦, ೫೩ ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ೯೪ ಸಿ, ೯೪ ಸಿ.ಸಿ. ಅಡಿಯಲ್ಲಿ ವಾಸದ ಮನೆಗಳಿಗೆ ಹಕ್ಕು ಪತ್ರ ಕೋರಿ ಅರ್ಜಿ ಸಲ್ಲಿಸಿದ್ದು, ಇವರುಗಳಿಗೆ ಹಕ್ಕುಪತ್ರ ಒದಗಿಸಬೇಕೆಂದು ಸಮಿತಿಯ ಅಧ್ಯಕ್ಷ ಅರುಣ್ ಕೊತ್ನಳ್ಳಿ ಗಮನ ಸೆಳೆದರು.
೧೯೭೮ನೇ ಸಾಲಿನಲ್ಲಿ ಕೃಷಿ ಯೋಗ್ಯ ಜಾಗವನ್ನು ಸಿ ಮತ್ತು ಡಿ ಜಮೀನೆಂದು ಗುರುತಿಸಿರುವುದು ತಪ್ಪಾಗಿದೆ. ಈ ಜಮೀನಿನಲ್ಲಿ ರೈತರು ಸಾಗುವಳಿ ಮಾಡಿದ್ದಾರೆ. ಇಂತಹ ಜಮೀನುಗಳನ್ನು ಕಂದಾಯ ಇಲಾಖೆ ಲ್ಯಾಂಡ್ ಬ್ಯಾಂಕಿನಿAದ ಹಿಂದಕ್ಕೆ ಪಡೆದು ರೈತರಿಗೆ ಹಕ್ಕುಪತ್ರ ನೀಡಿ, ಉಳಿದ ಜಮೀನನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸಿಕೊಳ್ಳಬೇಕೆಂದು ಮನವಿ ಮಾಡಿದರು. ಕೊಡಗು ಜಿಲ್ಲೆಯಲ್ಲಿ ಸಿ ಮತ್ತು ಡಿ ಜಮೀನೆಂದು ವರ್ಗೀಕರಿಸಿರುವ ಜಮೀನುಗಳು ಅರಣ್ಯ ಜಮೀನೆಂದು ಅಧಿಸೂಚನೆ ಆಗಿರುವುದಿಲ್ಲ ಮತ್ತು ಭೌತಿಕವಾಗಿ ಯಾವುದೇ ಸರ್ವೆ ಕಾರ್ಯ ನಡೆಸಿ ಅರಣ್ಯ ಇಲಾಖೆಗೆ ಹಸ್ತಾಂತರವಾಗಿರುವುದಿಲ್ಲ. ಈ ಜಮೀನುಗಳ ಪಹಣಿ ಕಲಂ ೬ರಲ್ಲಿ ಪೈಸಾರಿ ಎಂದು ಕಲಂ ೯ ರಲ್ಲಿ ಸರಕಾರ ಎಂದು, ಪಹಣಿ ಕಲಂ ೧೧ ರಲ್ಲೂ ಲ್ಯಾಂಡ್ ಬ್ಯಾಂಕ್ ನಿರ್ಮಾಣ ಮಾಡಲು ಎಂದು ದಾಖಲಾಗಿದೆ. ಆದುದರಿಂದ ಈ ಜಮೀನಿಗಳು ಕಂದಾಯ ಇಲಾಖೆಗೆ ಸೇರಿದ ಜಮೀನುಗಳೇ ಆಗಿರುತ್ತದೆ. ಇಂತಹ ಜಾಗಕ್ಕೆ ರೈತರು ಸಾಗುವಳಿ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅಂತವರಿಗೆ ಸಾಗುವಳಿ ಚೀಟಿ ನೀಡಲು ಸರ್ಕಾರದ ಸ್ಪಷ್ಟ ಆದೇಶವಿದ್ದರೂ ಕೂಡ ಕೊಡಗು ಜಿಲ್ಲೆಯಲ್ಲಿ ಈ ಜಮೀನು ಸಿ ಮತ್ತು ಡಿ ಜಮೀನಿಗೆ ಬರುತ್ತದೆ ಎಂದು ಸಾಗುವಳಿ ಚೀಟಿ ಮತ್ತು ಹಕ್ಕುಪತ್ರ ನೀಡಿರುವುದಿಲ್ಲ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.
ನಿಯೋಗದ ಮನವಿ ಸ್ವೀಕರಿಸಿದ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅವರು, ಈಗಾಗಲೇ ಸಿ ಮತ್ತು ಡಿ ಜಾಗವನ್ನು ಲ್ಯಾಂಡ್ ಬ್ಯಾಂಕಿಗೆ ಹಸ್ತಾಂತರಿಸಲಾಗಿದೆ. ಈ ಜಾಗವನ್ನು ಅರಣ್ಯಕ್ಕೆ ಒಳಪಡಿಸುವ ಸಂಬAಧ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಬಾಕಿಯಿದೆ. ಅಲ್ಲಿಂದ ನಿರ್ದೇಶನವನ್ನು ಎದುರು ನೋಡುತ್ತಿದ್ದೇವೆ. ನ್ಯಾಯಾಲಯದ ತೀರ್ಪು ಹಾಗೂ ಕೇಂದ್ರ ಸರ್ಕಾರದ ನಿರ್ದೇಶನ ಬಂದ ನಂತರ ಜಂಟಿ ಸರ್ವೆಗೆ ಕ್ರಮವಹಿಸುತ್ತೇವೆ ಎಂದರು. ಈಗಾಗಲೇ ವರ್ಗಾವಣೆಯಾಗಿರುವ ಜಾಗದಲ್ಲಿ ಯಾವ ಜಾಗಗಳನ್ನು ಉಳಿಸಿಕೊಳ್ಳಬಹುದು ಎಂಬುದನ್ನು ಪರಿಶೀಲಿಸುತ್ತೇವೆ. ಸರ್ಕಾರಿ ಅಂಗನವಾಡಿ, ಶಾಲಾ ಕಾಲೇಜು, ಮೈದಾನಗಳಿಗೂ ಜಾಗವಿಲ್ಲದಂತಾಗಿದೆ. ಮಲೆನಾಡು, ಪಶ್ಚಿಮಘಟ್ಟದಲ್ಲಿ ಈ ಸಮಸ್ಯೆ ಹೆಚ್ಚಿದೆ ಎಂದರು. ಕಳೆದ ೨೦೧೭ ರಲ್ಲಿ ನಮೂನೆ ೫೦ ಹಾಗೂ ೫೩ ಅಡಿಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಹಕ್ಕುಪತ್ರ ನೀಡಲು ಸರ್ಕಾರವೇ ಆದೇಶ ಮಾಡಿದೆ. ಇದರೊಂದಿಗೆ ೨೦೧೮ ರಲ್ಲಿ ೯೪ ಸಿ ಹಾಗೂ ೯೪ ಸಿ.ಸಿ. ಅಡಿಯಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೆ ಹಕ್ಕುಪತ್ರ ನೀಡಲು ಸರ್ಕಾರ ಆದೇಶ ಮಾಡಿತ್ತು ಎಂದು ಸಮಿತಿಯ ಸಂಚಾಲಕ ಜಯರಾಂ ಅವರು ಗಮನಕ್ಕೆ ತಂದರು. ಹಿಂದಿನ ಆದೇಶಕ್ಕೆ ಇದೀಗ ಮಾನ್ಯತೆ ಇಲ್ಲದಂತಾಗಿದೆ. ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಪೂರ್ಣಗೊಂಡು ಬರುವ ವರದಿಯನ್ನಾಧರಿಸಿ ಕ್ರಮ ಕೈಗೊಳ್ಳುತ್ತೇವೆ. ಕಂದಾಯ ಹಾಗೂ ಸರ್ವೆ ಇಲಾಖೆಯನ್ನು ಒಳಗೊಂಡAತೆ ರಾಜ್ಯಾದ್ಯಂತ ವಿಶೇಷ ಜಂಟಿ ಸರ್ವೆ ಮಾಡುತ್ತೇವೆ. ರಾಜ್ಯದಲ್ಲಿ ಹೆಚ್ಚಿನ ಜಾಗ ಸಿ ಮತ್ತು ಡಿ. ಗೆ ಹೋಗಿದೆ. ಕೊಡಗೂ ಸೇರಿದಂತೆ ಚಿಕ್ಕಮಗಳೂರಿನಲ್ಲಿ ಹೆಚ್ಚಿನ ಸಮಸ್ಯೆ ಇದೆ ಎಂದು ರಾಜೇಂದರ್ ಕುಮಾರ್ ಕಟಾರಿಯಾ ಹೇಳಿದರು.
ಕೊಡಗಿನಲ್ಲಿ ಸಿ ಮತ್ತು ಡಿ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸವಿದ್ದಾರೆ. ರೈತರು ಕೃಷಿ ಮಾಡಿದ್ದಾರೆ. ಎಲ್ಲಾ ಜಾಗವನ್ನು ಅರಣ್ಯಕ್ಕೆ ಒಳಪಡಿಸಿದರೆ ಬಡವರಿಗೆ ಸಮಸ್ಯೆಯಾಗುತ್ತದೆ ಎಂದು ಸಮಿತಿ ಅಧ್ಯಕ್ಷ ಅರುಣ್ ಕೊತ್ನಳ್ಳಿ ಹೇಳಿದರು. ಈ ಬಗ್ಗೆ ನಮಗೂ ಅರಿವಿದೆ. ವಿಶೇಷ ಸಭೆಯೊಂದಿಗೆ ಸರ್ವೆ ಮಾಡಿಸಲು ಕ್ರಮ ಕೈಗೊಳ್ಳುತ್ತೇವೆ. ಜನರಿಗೆ ಒಳ್ಳೆಯದನ್ನು ಮಾಡುವ ಮನಸ್ಸು ನಮಗೂ ಇದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕಾನೂನು ತೊಡಕಿದೆ. ಮುಂದಿನ ಎರಡು-ಮೂರು ತಿಂಗಳೊಳಗೆ ಮರು ಸರ್ವೆಗೆ ಕ್ರಮವಹಿಸಲಾಗುವುದು ಎಂದು ಪ್ರಧಾನ ಕಾರ್ಯದರ್ಶಿಗಳು ನಿಯೋಗಕ್ಕೆ ಭರವಸೆ ನೀಡಿದರು.
ನಂತರ ಬೆಂಗಳೂರಿನಲ್ಲಿರುವ ಶಾಸಕರ ಗೃಹ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಶಾಸಕರು, ಸಿ ಮತ್ತು ಡಿ ಸಮಸ್ಯೆ ಬಗ್ಗೆ ವಿಸ್ತçತ ಚರ್ಚೆ ಮಾಡಬೇಕಿದ್ದು, ಸಮಿತಿಯಿಂದ ರಾಜ್ಯ ಅರ್ಜಿ ಸಮಿತಿಗೆ ಪತ್ರ ಸಲ್ಲಿಸುವಂತೆ ತಿಳಿಸಿದರು. ಸಮಸ್ಯೆ ಬಗ್ಗೆ ಅರ್ಜಿ ಸಮಿತಿಯಲ್ಲಿ ಚರ್ಚೆಗೆ ತೆಗದುಕೊಳ್ಳಲಾಗುವುದು ಎಂದರು.
ನಿಯೋಗದಲ್ಲಿ ಸಮಿತಿಯ ಉಪಾಧ್ಯಕ್ಷ ಕೆ.ಎನ್. ದೀಪಕ್, ಕಾರ್ಯದರ್ಶಿ ಆದರ್ಶ್ ತಮ್ಮಯ್ಯ, ಸಂಚಾಲಕರಾದ ಹೂವಯ್ಯ ಮಾಸ್ಟರ್, ಮಂಜೂರು ತಮ್ಮಣ್ಣಿ, ಜಯರಾಂ, ಪದಾಧಿಕಾರಿಗಳಾದ ಪ್ರಕಾಶ್ ಬೆಂಬಳೂರು, ಅನಂತ್ ಕಲ್ಕಂದೂರು, ಅಂಕುಶ್, ಸಂದೀಪ್ ಯಡವಾರೆ, ವಸಂತ್ ಕಾಜೂರು, ಅವಿನ್ ಚಿಣ್ಣಪ್ಪ ಅವರುಗಳು ಇದ್ದರು.