ಚೆಯ್ಯಂಡಾಣೆ, ಜ. ೨೨: ಎಡಪಾಲ ಅಂಡತ್ ಮಾನಿ ದರ್ಗಾ ಷರೀಫ್‌ನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಔಲಿಯಾಗಳ ಹೆಸರಿನಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಉರೂಸ್ ಕಾರ್ಯಕ್ರಮಕ್ಕೆ ತಾ.೧೯ರಂದು ಪೊಯಾಪಳ್ಳಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಎ.ಬಷೀರ್ ಧ್ವಜಾರೋಹಣ ನೆರವೇರಿಸುವುದರ ಮೂಲಕ ಚಾಲನೆ ನೀಡಲಾಗಿತ್ತು.

ಸೋಮವಾರ ನಡೆದ ಸನ್ಮಾನ ಹಾಗೂ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವನ್ನು ನೆಲ್ಯಹುದಿಕೇರಿ ಖತೀಬ್ ಅಬ್ದುಲ್ ರೌಫ್ ಹುದವಿ ಉದ್ಘಾಟಿಸಿ ಮಾತನಾಡಿ, ವಿಶ್ವಶಾಂತಿಯ ಸೌಹಾರ್ದತೆ ಸಾರುವ ಪ್ರತ್ಯೇಕತೆ ಉರೂಸ್ ಕಾರ್ಯಕ್ರಮಕ್ಕೆ ಇದೆ, ಮುಹಮ್ಮದ್ (ಸ.ಅ) ರವರ ಜೀವನ ಚರಿತ್ರೆಯನ್ನು ಎಲ್ಲರೂ ಜೀವನದಲ್ಲಿ ಪಾಲಿಸುವಂತಾಗಲಿ ಎಂದರು.

ಯುವ ವಾಗ್ಮಿ ರಾಫಿ ಹಿಮಮಿ ಕಾಮಿಲ್ ಸಖಾಫಿ ದೇರಳಕಟ್ಟೆ ಧಾರ್ಮಿಕ ಉಪನ್ಯಾಸಕ್ಕೆ ನೇತೃತ್ವ ನೀಡಿ ಮಾತನಾಡಿ, ಇಸ್ಲಾಂನ ಆಚಾರ ವಿಚಾರಗಳನ್ನು ಸವಿಸ್ತಾರವಾಗಿ ಮನದಟ್ಟಾಗುವ ರೀತಿಯಲ್ಲಿ ವಿವರಿಸಿ, ಮಹಮ್ಮದ್ ಪೈಗಂಬರ್ (ಸ.ಅ) ಜೀವನ ಚರಿತ್ರೆಯನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಸನ್ಮಾನ

ಉನ್ನತ ವಿದ್ಯಾಭ್ಯಾಸ ಮಾಡಿ ಬಿರುದು ಪಡೆದ ಎಡಪಾಲ ಗ್ರಾಮದ ವಿದ್ಯಾರ್ಥಿಗಳಾದ ಶಬೀರ್ ಮಹ್ಬರಿ,ಸಿನಾನ್ ಶರಫಿ, ಶಫೀಕ್ ಆಝಹರಿ,ತಾಜುದ್ದೀನ್ ಝಹರಿ,ಫಯಾಜ್ ಫೈಝಿ, ಅಶ್ಪಾಕ್ ಸಅದಿ ಯವರನ್ನು ಪೊಯಾಪಳ್ಳಿ ಜಮಾಅತ್ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ರಾತ್ರಿ ನಡೆದ ಮತಪ್ರವಚನ ಕಾರ್ಯಕ್ರಮವನ್ನು ಮುದರ್ರಿಸ್ ಅಲ್ ಹಾಜ್ ನಿಝಾರ್ ಫೈಝಿ ಉದ್ಘಾಟಿಸಿ ಮಾತನಾಡಿದರು. ಕೇರಳದ ವಾಗ್ಮಿ ಹಂಝ ಮಿಸ್ಬಾಹಿ ಓಟಪಡವ್ ಮತಪ್ರವಚನ ನಡೆಸಿದರು.

ಸಮಾರೋಪ ಸಮಾರಂಭ

ಇAದಿನ ಆಧುನಿಕ ಯುಗದಲ್ಲಿ ಯುವಸಮೂಹ ಮಾದಕ ವ್ಯಸನಕ್ಕೆ ಬಲಿಯಾಗದಿರಿ ಎಂದು ಕೇರಳ ಹಾಗೂ ಕರ್ನಾಟಕದಲ್ಲಿ ಧಾರ್ಮಿಕ ಪ್ರವಚನಕ್ಕೆ ನೇತೃತ್ವ ನೀಡಿ ಖ್ಯಾತಿ ಪಡೆದ ವಾಗ್ಮಿ ಶಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಹೇಳಿದರು.

ಇಂದಿನ ಪೀಳಿಗೆ ಹೆತ್ತವರನ್ನೇ ಕೊಲೆ ಮಾಡುವ ಹಂತಕ್ಕೆ ತಲುಪಿದೆ. ಇದನ್ನು ಸಮಾಜದಿಂದ ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಇಸ್ಲಾಂ ಧರ್ಮದ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ದಿನನಿತ್ಯದ ನಮಾಜ್ ಅನ್ನು ಯಾರೂ ನಿರ್ಲಕ್ಷಿಸಬೇಡಿ. ಸೃಷ್ಟಿಕರ್ತನಾದ ಅಲ್ಲಾಹನಿಗೆ ಏನು ಬೇಕಾದರೂ ಮಾಡಲು ಸಾಧ್ಯವಿದೆ. ಒಬ್ಬ ಶ್ರೀಮಂತನಾಗಿದ್ದರೆ ಅವನನ್ನು ಬಡವನಾಗಿ ಮಾಡಲು, ಒಬ್ಬ ಬಡವನಾಗಿದ್ದರೆ ಅವನನ್ನು ಶ್ರೀಮಂತನಾಗಿ ಮಾಡಲು ಸಾಧ್ಯವಿದೆ ಎಂದರು. ಪ್ರಾರ್ಥನೆಗೆ ಫಲವಿದೆ ಶುದ್ಧ ಮನಸ್ಸಿನಿಂದ ಪ್ರಾರ್ಥಿಸಿದರೆ ಖಂಡಿತ ಫಲ ಸಿಗುತ್ತದೆ ಎಂದರು. ಪೋಯಾಪಳ್ಳಿ ಜಮಾಅತ್ ಅಧ್ಯಕ್ಷ ಕೆ.ಎ. ಬಷೀರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭವನ್ನು ಕೊಡಗು ಜಿಲ್ಲಾ ನಾಯಿಬ್ ಖಾಝಿ ಹಾಗೂ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಎಂ.ಎA. ಅಬ್ದುಲ್ಲ ಫೈಝಿ ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಸದಸ್ಯ ಯಾಕೂಬ್, ಡಿಸಿಸಿ ಉಪಾಧ್ಯಕ್ಷ ಅಬ್ದುಲ್ ರಹ್ಮನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಲತೀಫ್ ಸುಂಟಿಕೊಪ್ಪ, ಅಲ್ಪಸಂಖ್ಯಾತ ಜಿಲ್ಲಾಧ್ಯಕ್ಷ ಹನೀಫ್, ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಂಸ ಕೊಟ್ಟಮುಡಿ, ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ಮೊಹಮ್ಮದ್ ರಾಫಿ, ವೀರಾಜಪೇಟೆ ಶಾಫಿ ಜುಮಾ ಮಸೀದಿಯ ಅಧ್ಯಕ್ಷ ರಶೀದ್, ನರಿಯಂದಡ ಗ್ರಾಮ ಪಂಚಾಯಿತಿ ಸದಸ್ಯರಾದ ಮೊಹಮ್ಮದ್, ಸುಬೈರ್, ನಾಪೋಕ್ಲು ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹಾಗೂ ಜಮಾಅತ್ ಉಪಾಧ್ಯಕ್ಷ ಉಮ್ಮರ್, ಜಮಾಅತ್ ಮಾಜಿ ಅಧ್ಯಕ್ಷರುಗಳಾದ ಕೆ.ಯು.ಶಾಫಿ, ಮೊಹಮ್ಮದ್ ಹಾಜಿ, ನಿವೃತ್ತ ಸೈನಿಕ ಅಬ್ದುಲ್ ಸಲಾಂ ಕಡಂಗ, ಕಡಂಗ ಬದ್ರಿಯಾ ಮಸೀದಿಯ ಅಧ್ಯಕ್ಷ ಉಸ್ಮಾನ್, ನಿವೃತ್ತ ರಾಷ್ಟç ಪ್ರಶಸ್ತಿ ವಿಜೇತ ಪೊಲೀಸ್ ಅಧಿಕಾರಿ ಹಂಝ, ನಿವೃತ್ತ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಹಮೀದ್ ಕೆ.ವೈ, ಡಾ. ಬಾದಷಾ, ಎನ್ ಹೆಚ್ ವೈ ಎ ಅಧ್ಯಕ್ಷ ರಿಯಾಜ್, ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಉಮ್ಮರ್ ಮಾಸ್ಟರ್, ಜಮಾಅತ್ ಸದಸ್ಯರಾದ ಯೂಸುಫ್, ರಫೀಕ್ ಮತ್ತಿತರರು ಉಪಸ್ಥಿತರಿದ್ದರು.

ತಾ.೨೦ರ ಸೋಮವಾರ ಸಂಜೆ ಹಾಗೂ ೨೧ ಮಂಗಳವಾರ ರಾತ್ರಿ ನೆರದಿದ್ದ ಸಾವಿರಾರು ಮಂದಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು. ಎಡಪಾಲ ಮಸೀದಿಯ ಮುದರ್ರಿಸ್ ಅಲ್ ಹಾಜ್ ನಿಝಾರ್ ಫೈಝಿ ಪ್ರಾರ್ಥಿಸಿ, ಪೋಯಾಪಳ್ಳಿ ಜಮಾಅತ್ ಪ್ರಧಾನ ಕಾರ್ಯದರ್ಶಿ ಶರೀಫ್ ಝೃನಿ ಸ್ವಾಗತಿಸಿ, ಹನೀಫಾ ಹಾಗೂ ಅಬೂಬಕ್ಕರ್ ಸಿದ್ದಿಕ್ ನಿರೂಪಿಸಿ, ಕೆ.ಎಂ. ಹನೀಫಾ ವಂದಿಸಿದರು. -ಅಶ್ರಫ್