ವೀರಾಜಪೇಟೆ, ಜ. ೨೨: ಪಟ್ಟಣದ ಕೂರ್ಗ್ ವ್ಯಾಲಿ ಶಾಲೆಯ ವಾರ್ಷಿಕೋತ್ಸವವನ್ನು ಕಾವೇರಿ ಕಲ್ಯಾಣ ಮಂಟಪದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಬಿಂದು ಕೆ.ಆರ್. ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿ ಕ್ರೀಡೆ, ಯೋಗ, ಸಂಗೀತ, ನೃತ್ಯ ಹೀಗೆ ಹಲವಾರು ಚಟುವಟಿಕೆಗಳನ್ನು ಕಲಿಸಲಾಗುತ್ತಿದೆ ಮತ್ತು ಶಿಕ್ಷಣದೊಂದಿಗೆ ಜೀವನ ಮೌಲ್ಯಗಳು ಕಲಿಸಿಕೊಡುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ. ಕೆಲವು ವರ್ಷಗಳಿಂದ ಸಂಸ್ಥೆಯು ನೂರರಷ್ಟು ಫಲಿತಾಂಶವನ್ನು ದಾಖಲಿಸುತ್ತಿದೆ. ಅದೇ ರೀತಿಯಾಗಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರೊಂದಿಗೆ ಪೋಷಕರು ಸಹ ಪ್ರೋತ್ಸಾಹ ನೀಡಬೇಕೆಂದು ಕಿವಿಮಾತು ಹೇಳಿದರು.
ಮತ್ತೋರ್ವ ಅತಿಥಿಗಳಾಗಿ ಆಗಮಿಸಿದ ರೊಟೇರಿಯನ್ ಡಾ. ನರಸಿಂಹನ್ ಮಾತನಾಡಿ, ಮಕ್ಕಳ ಆರೋಗ್ಯಕ್ಕೆ ಧಕ್ಕೆ ಬರುವಂತಹ ತಿನಿಸುಗಳನ್ನು ತಿನ್ನದೇ ಮನೆಯಲ್ಲೇ ತಯಾರಿ ಮಾಡಿದ ಆಹಾರ ಪದಾರ್ಥಗಳನ್ನು ಸೇವನೆ ಮಾಡುವ ರೀತಿಯಲ್ಲಿ ಪೋಷಕರು ಕಾಳಜಿ ವಹಿಸಬೇಕೆಂದು ತಿಳಿ ಹೇಳಿದರು.
ವಾರ್ಷಿಕ ವರದಿಯನ್ನು ಶಾಲೆಯ ನಿರ್ವಾಹಕರು ಮತ್ತು ಮುಖ್ಯ ಶಿಕ್ಷಕಿ ಸುಮಾ ಚಿತ್ರ ಬಾನು ವಾಚಿಸಿದರು. ಇದೇ ಸಂದರ್ಭ ಶೈಕ್ಷಣಿಕ ಸಾಧನೆಯನ್ನು ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ವೇದಿಕೆಯ ಮೇಲೆ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷೆ ಚಿತ್ರ ಬಾನು ಎಂ.ಕೆ. ಮತ್ತು ಕಾರ್ಯದರ್ಶಿಗಳಾದ ಪ್ರಣವ್ ಚಿತ್ರಬಾನು ಮತ್ತು ಸಂಘಟಕರಾದ ಅನ್ನಮ್ಮ ಮೇರಿ ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ರೀತಿಯ ಸಾಂಸ್ಕöÈತಿಕ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು, ಕೂರ್ಗ್ ವ್ಯಾಲಿ ವಿದ್ಯಾಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.