ಮಡಿಕೇರಿ, ಜ. ೨೨: ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಮತ್ತು ನಾಗರಿಕರ ಕಾರ್ಯಗಳನ್ನು ನೋಡಿಕೊಳ್ಳುವುದರೊಂದಿಗೆ ಆಡಳಿತ ಯಂತ್ರ ಸುಲಭವಾಗಿ ಜನಸಾಮಾನ್ಯರಿಗೆ ಹತ್ತಿರವಾಗ ಬೇಕೆಂಬ ಉದ್ದೇಶದಿಂದ ೧೯೮೭ರ ಮಾರ್ಚ್ನಲ್ಲಿ ಜಿಲ್ಲಾ ಪರಿಷತ್ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿತ್ತು.
ನಂತರ ಜಿಲ್ಲಾ ಪರಿಷತ್ ೧೯೯೫ರಲ್ಲಿ ಜಿಲ್ಲಾ ಪಂಚಾಯಿತಿ ಆಗಿ ಹೆಸರು ಬದಲಾಯಿತು. ೧೯೮೭ರ ಪ್ರಥಮ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಒಟ್ಟು ೩೧ ಜಿಲ್ಲಾ ಪರಿಷತ್ ಸ್ಥಾನಗಳಿತ್ತು.
೧೯೮೭ರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಜನಪ್ರತಿನಿಧಿಗಳು ಇಂದಿಗೂ ಕೂಡ ಕೊಡಗಿನ ರಾಜಕೀಯ ಮತ್ತು ಕರ್ನಾಟಕ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ, ಅದಲ್ಲದೇ ಹಲವು ಹುದ್ದೆಗಳನ್ನು ಕೂಡ ಅಲಂಕರಿಸಿದ್ದಾರೆ.
೧೯೮೭ರ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ದಿ. ಡಿ.ಎಸ್. ಮಾದಪ್ಪನವರು ೧೯೯೯ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದಿಂದ ಮಡಿಕೇರಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ೧೯೮೭ರಲ್ಲಿ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಎಸ್.ಜಿ. ಮೇದಪ್ಪ ಕೊಡಗಿನಿಂದ ವಿಧಾನಪರಿಷತ್ಗೆ ಆಯ್ಕೆಯಾಗಿದ್ದರು.
೧೯೮೭ರ ಅವಧಿಯಲ್ಲಿ ಜಿಲ್ಲಾ ಪರಿಷತ್ ಸದಸ್ಯೆಯಾಗಿದ್ದ ವೀಣಾ ಅಚ್ಚಯ್ಯನವರು ೨೦೧೬ರಲ್ಲಿ ವಿಧಾನಸಭೆಯಿಂದ ವಿಧಾನ ಪರಿಷತ್ಗೆ ಆಯ್ಕೆಯಾಗಿದ್ದರು.
೧೯೮೭ರ ಪ್ರಥಮ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಗುಂಡೂರಾವ್ ಕಾಂಗ್ರೆಸ್ನಿAದ ಸುಂಟಿಕೊಪ್ಪ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಕೆ.ಎಂ. ಇಬ್ರಾಹಿಂ ಮಾಸ್ಟರ್ ೧೯೯೯ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ್ದರು.
ಇಬ್ರಾಹಿಂ ಮಾಸ್ಟರ್ ಮಾಜಿ ಸಿಎಂ ಗುಂಡೂರಾವ್ ಅವರ ಆಪ್ತರಾಗಿದ್ದರು. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿರುವ ಇಬ್ರಾಹಿಂ ರಾಜ್ಯ ಕಾಂಗ್ರೆಸ್ನಲ್ಲಿ ಹಲವು ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇಂದಿಗೂ ಕೂಡ ಇಬ್ರಾಹಿಂ ಮಾಸ್ಟರ್ ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವೀ ಮುಖಂಡ.
೧೯೮೭ರ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಸದಸ್ಯರಲ್ಲಿ ಹಲವು ವಿಶೇಷತೆಗಳು ಮತ್ತು ಹಲವು ಮಂದಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ.
ಪ್ರಥಮ ಅಧ್ಯಕ್ಷ ಜೆ.ಎ. ಕರುಂಬಯ್ಯ
ಕೊಡಗು ಜಿಲ್ಲಾ ಪರಿಷತ್ ಪ್ರಥಮ ಅಧ್ಯಕ್ಷರಾಗಿ ೧೯೮೭ರಿಂದ ೯೨ ರವರೆಗೆ ಸೇವೆ ಸಲ್ಲಿಸಿದ್ದ ಕೀರ್ತಿ ದಿ. ಜಮ್ಮಡ ಎ. ಕರುಂಬಯ್ಯ ಅವರಿಗೆ ಸಲ್ಲುತ್ತದೆ. ಜೆ.ಎ. ಕರುಂಬಯ್ಯ ಅವರು ಕಾಂಗ್ರೆಸ್ ಪಕ್ಷದಿಂದ ಗೋಣಿಕೊಪ್ಪ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇದೇ ಅವಧಿಯಲ್ಲಿ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದಿಂದ ನಾಪೋಕ್ಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಪಿ.ಎಂ. ಖಾಸಿಂ ಸೇವೆ ಸಲ್ಲಿಸಿದ್ದರು. ವಿಶೇಷವೇನೆಂದರೆ ೧೯೮೭ರಿಂದ ೯೨ ರವರೆಗೆ ಪೂರ್ಣಾವಧಿಯಲ್ಲಿ ಕೊಡಗು ಜಿಲ್ಲಾ ಪರಿಷತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಪ್ರಥಮ ಅಧ್ಯಕ್ಷ ಎಂಬ ಕೀರ್ತಿ ಜೆ.ಎ. ಕರುಂಬಯ್ಯ ಅವರಿಗೆ ಸಲ್ಲುತ್ತದೆ.
ನೇರ ನಡೆ-ನುಡಿಯ ರಾಜಕಾರಣಿ ಎಂದು ಹೆಸರು ಪಡೆದಿದ್ದ ಜೆ.ಎ. ಕರುಂಬಯ್ಯ ಅವರು, ವೀರಾಜಪೇಟೆ ತಾಲೂಕು ಬೋರ್ಡ್ ಅಧ್ಯಕ್ಷರಾಗಿ ೫ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಕಾಂಗ್ರೆಸ್ ಮುಖಂಡರಾಗಿ ನಂತರ ರಾಮಕೃಷ್ಣ ಹೆಗಡೆ ಅವರ ಲೋಕಶಕ್ತಿ ಪಕ್ಷದಲ್ಲಿದ್ದರು. ಬಳಿಕ ಜೆ.ಡಿ.ಎಸ್. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಮತ್ತೆ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದರು.
ಕೊಡಗು ಜಿಲ್ಲಾ ಪರಿಷತ್ ಪ್ರಥಮ ಅಧ್ಯಕ್ಷರಾಗಿದ್ದ ಜಮ್ಮಡ ಕರುಂಬಯ್ಯನವರು ೨೦೧೯ರ ಏಪ್ರಿಲ್ ೧ ರಂದು ವಯೋಸಹಜ ಅನಾರೋಗ್ಯದಿಂದ ಕೈಕೇರಿ ಗ್ರಾಮದ ಸ್ವಗೃಹದಲ್ಲಿ ನಿಧನ ಹೊಂದಿದರು.
ಜಿಲ್ಲಾ ಪರಿಷತ್ ಚುನಾವಣೆ : ಕಾಂಗ್ರೆಸ್ ದರ್ಬಾರ್!
೧೯೮೭ರಲ್ಲಿ ಜಿಲ್ಲಾ ಪರಿಷತ್ ಅಸ್ತಿತ್ವಕ್ಕೆ ಬಂದ ದಶಕದಲ್ಲಿ ಕೊಡಗು ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ವೀರಾಜಪೇಟೆ ಕ್ಷೇತ್ರದಲ್ಲಿ ಸುಮಾ ವಸಂತ್, ಮಡಿಕೇರಿ ಕ್ಷೇತ್ರದಲ್ಲಿ ಡಿ.ಎ. ಚಿಣ್ಣಪ್ಪ ಹಾಗೂ ಸೋಮವಾರಪೇಟೆ ಕ್ಷೇತ್ರದಲ್ಲಿ ಬಿ.ಎ. ಜೀವಿಜಯ, ೧೯೮೯ರ ವಿಧಾನಸಭಾ ಚುನಾವಣೆಯಲ್ಲಿ ಜೀವಿಜಯ ಅವರನ್ನು ಸೋಲಿಸಿ ಎ.ಎಂ. ಬೆಳ್ಯಪ್ಪನವರು ಶಾಸಕ ರಾಗಿದ್ದರು. ೧೯೮೭ರ ಜಿಲ್ಲಾ ಪರಿಷತ್ ಚುನಾವಣೆಯ ಅವಧಿಯಲ್ಲಿ ಎ.ಎಂ. ಬೆಳ್ಯಪ್ಪನವರು ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.
೧೯೮೭ರ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ೩೧ ಸ್ಥಾನಗಳಲ್ಲಿ ಕೊಡಗು ಜಿಲ್ಲೆಯಲ್ಲಿ ೧೭ ಮಂದಿ ಕಾಂಗ್ರೆಸ್ ಸದಸ್ಯರು ಗೆಲುವು ಸಾಧಿಸಿದ್ದರು. ಗುಂಡೂರಾವ್ ಕಾಂಗ್ರೆಸ್ನಿAದ ಸ್ಪರ್ಧಿಸಿದ್ದ ಸುಂಟಿಕೊಪ್ಪ ಜಿಲ್ಲಾ ಪರಿಷತ್ ಕ್ಷೇತ್ರದಿಂದ ಇಬ್ರಾಹಿಂ ಮಾಸ್ಟರ್, ಸುರೇಶ್ ಗೌಡ ಹಾಗೂ ಪಕ್ಷೇತರರಾಗಿ ಸಿದ್ದಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆ.ಕೆ. ಸೆಬಾಸ್ಟಿಯನ್ ಅವರು ಕಾಂಗ್ರೆಸ್ಗೆ ಬೆಂಬಲ ಸೂಚಿಸಿದ್ದರು. ೨೦ ಸದಸ್ಯರ ಬಲದಿಂದ ಪ್ರಥಮ ಜಿಲ್ಲಾ ಪರಿಷತ್ ಮೊದಲ ಅಖಾಡದಲ್ಲೇ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ೧೯೮೭ರ ಪ್ರಥಮ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಒಟ್ಟು ೩೧ ಜಿಲ್ಲಾ ಪರಿಷತ್ ಸ್ಥಾನಗಳಿತ್ತು. ಕಾಂಗ್ರೆಸ್ ೧೭, ಗುಂಡೂರಾವ್ ಕಾಂಗ್ರೆಸ್ ಎರಡು, ಜನತಾ ಪಕ್ಷ ೧೧ ಹಾಗೂ ಪಕ್ಷೇತರರು ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದ್ದರು. ಸಿದ್ದಾಪುರ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದ ಕೆ. ಸೆಬಾಸ್ಟಿಯನ್ ಗೆಲುವು ಸಾಧಿಸಿದ್ದರು. ಸೆಬಾಸ್ಟಿಯನ್ ಕೊಡಗು ಜಿಲ್ಲಾ ಪರಿಷತ್ಗೆ ಆಯ್ಕೆಯಾದ ಪ್ರಥಮ ಪಕ್ಷೇತರ ಅಭ್ಯರ್ಥಿಯಾಗಿದ್ದರು.
ಒಲಿದು ಬಂದ ಅಧ್ಯಕ್ಷ ಸ್ಥಾನದ ಭಾಗ್ಯ
೧೯೮೭ರ ಕೊಡಗು ಜಿಲ್ಲಾ ಪರಿಷತ್ ಪ್ರಥಮ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಸದಸ್ಯರಿಗೆ ನಂತರದ ವರ್ಷದಲ್ಲಿ ಕೊಡಗು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನ ಒಲಿದು ಬಂದಿರುವುದು ವಿಶೇಷ.
೧೯೮೭ರಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಹೆಚ್.ಟಿ. ಸುಂದರ ಅವರು ೫.೪.೧೯೯೭ ರಿಂದ ೭.೧೨.೧೯೯೮ ರವರೆಗೆ ಕೊಡಗು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಹಾಗೂ ಯು.ಪಿ. ಜಯಪ್ರಕಾಶ್ ೮.೧೨.೧೯೯೮ ರಿಂದ ೪.೫.೨೦೦೦ ರವರೆಗೆ ಕೊಡಗು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದರು.
ತಮ್ಮ ೨೭ನೇ ವಯಸ್ಸಿನಲ್ಲಿ ೧೯೮೭ರ ಪ್ರಥಮ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಐಗೂರು ಕ್ಷೇತ್ರದಿಂದ ಜನತಾ ಪಕ್ಷದಿಂದ ಗೆಲುವು ಪಡೆದಿದ್ದ ಕೆ.ಪಿ. ಚಂದ್ರಕಲಾ ಅವರಿಗೆ ೧೨.೭.೨೦೦೦ ರಿಂದ ೧೦.೧೨.೨೦೦೧ ರವರೆಗೆ ಕೊಡಗು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನದ ಭಾಗ್ಯ ಸಿಕ್ಕಿತ್ತು.
ಕೆ.ಪಿ. ಚಂದ್ರಕಲಾ ಅವರಿಗೆ ದಿ. ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಯಾಗಿದ್ದ ಅವಧಿಯಲ್ಲಿ ಒಳಚರಂಡಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೂಡ ನೀಡಲಾಗಿತ್ತು. ೨೦೧೬ರ ಜಿ.ಪಂ. ಚುನಾವಣೆಯಲ್ಲಿ ಕೆ.ಪಿ. ಚಂದ್ರಕಲಾ ಸುಂಟಿಕೊಪ್ಪ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು.
‘ಜರ್ನಿ’ ಬದಲಿಸಿದ್ದ ಚುನಾವಣೆ
ತಮ್ಮ ಕಿರಿಯ ವಯಸ್ಸಿನಲ್ಲೇ ಚುನಾವಣಾ ರಾಜಕೀಯ ಧುಮುಕಿದ್ದ ವೀಣಾ ಅಚ್ಚಯ್ಯನವರು ೧೯೮೭ರ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಮಕ್ಕಂದೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ೧೯೮೭ರ ನಂತರ ಹಲವು ಹುದ್ದೆಗಳ ಭಾಗ್ಯ ವೀಣಾ ಅಚ್ಚಯ್ಯನವರ ಪಾಲಿಗೆ ದೊರೆತಿದೆ. ೨೮.೧.೨೦೦೨ ರಿಂದ ೧೨.೩.೨೦೦೨ ರವರೆಗೆ ಕೊಡಗು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ವೀಣಾ ಅಚ್ಚಯ್ಯ ಕಾರ್ಯನಿರ್ವಹಿಸಿದ್ದರು. ನಂತರ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ, ಕೊಡಗು ಜಿಲ್ಲಾ ಕಾಂಗ್ರೆಸ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ, ೨೦೦೮ ರಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. ರಾಜ್ಯ ಕರಕುಶಲ ನಿಗಮಂಡಳಿ ಅಧ್ಯಕ್ಷರಾಗಿ ಕೂಡ ಕಾರ್ಯ ನಿರ್ವಹಿಸಿರುವ ವೀಣಾ ಅಚ್ಚಯ್ಯನವರು, ೨೦೧೬ರ ಜೂನ್ನಿಂದ ೨೦೨೨ ರವರೆಗೆ ವಿಧಾನಪರಿಷತ್ ಸದಸ್ಯರಾಗಿದ್ದರು. ಇಂದಿಗೂ ಕೂಡ ರಾಜಕೀಯದಲ್ಲಿ ವೀಣಾ ಅಚ್ಚಯ್ಯ ನವರು ಸಕ್ರಿಯರಾಗಿದ್ದಾರೆ. ಅವರು ತಮ್ಮ ೨೬ನೇ ವರ್ಷದಲ್ಲಿ ಜಿಲ್ಲಾ ಪರಿಷತ್ ಚುನಾವಣೆಗೆ ಮಕ್ಕಂದೂರು ಕ್ಷೇತ್ರದಿಂದ ಸ್ಪರ್ಧಿಸಿ ಪ್ರಥಮ ಪ್ರಯತ್ನದಲ್ಲೇ ಗೆಲುವು ಸಾಧಿಸಿದ್ದರು.
ಬಿ. ಜನಾರ್ಧನ ಪೂಜಾರಿ
೧೯೮೭ರ ಪ್ರಥಮ ಜಿಲ್ಲಾ ಪರಿಷತ್ ಅವಧಿಯಲ್ಲಿ, ಕೊಡಗು-ಮಂಗಳೂರು ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಬಿ. ಜನಾರ್ಧನ ಪೂಜಾರಿ ಕಾರ್ಯ ನಿರ್ವಹಿಸುತ್ತಿದ್ದರು. ೧೯೮೭ರ ಅವಧಿಯಲ್ಲಿ ಜನಾರ್ಧನ ಪೂಜಾರಿ ಕೇಂದ್ರ ಹಣಕಾಸು ಸಚಿವರಾಗಿ ನಂತರ ೧೯೮೮-೮೯ರ ಅವಧಿಯಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು. ದೇಶದ ರಾಜಕೀಯದಲ್ಲಿ ಪ್ರಭಾವಿ ಯಾಗಿದ್ದ ಜನಾರ್ಧನ ಪೂಜಾರಿ, ೧೯೮೭ರ ಪ್ರಥಮ ಕೊಡಗು ಜಿಲ್ಲಾ ಪರಿಷತ್ ಸದಸ್ಯರೊಂದಿಗೆ ಮತ್ತು ಕೊಡಗಿನೊಂದಿಗೆ ಹೆಚ್ಚಿನ ಒಡನಾಟ ಹೊಂದಿದ್ದರು. ಪದವೀಧರ ಕ್ಷೇತ್ರದ ಸದಸ್ಯರಾಗಿ ಶಿವಮೊಗ್ಗ ಜಿಲ್ಲೆಯ ಡಿ.ಹೆಚ್. ಶಂಕರಮೂರ್ತಿ, ಕೊಡಗು ಜಿಲ್ಲೆಯ ಸ್ಥಳೀಯ ಸಂಸ್ಥೆ ಕ್ಷೇತ್ರದ ವಿಧಾನಪರಿಷತ್ ಸದಸ್ಯರಾಗಿ ಪಾಲಿಬೆಟ್ಟದ ಎ.ಎನ್. ಸೋಮಯ್ಯ, ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ಗೆ ಫೆಲಿಕ್ಸ್ ರಾಡ್ರಿಗಸ್ ಕಾರ್ಯನಿರ್ವಹಿಸಿದ್ದರು. ೧೯೮೭ರ ಮೊದಲ ಜಿಲ್ಲಾ ಪರಿಷತ್ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ಯಂ.ಸಿ. ನಾಣಯ್ಯ ವಿಧಾನ ಪರಿಷತ್ ಸದಸ್ಯರಾಗಿದ್ದರು.
೧೯೮೭ರ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಅಮ್ಮತ್ತಿ, ಹೊಸೂರು ಪಾಲಿಬೆಟ್ಟ, ಮಾಲ್ದಾರೆ, ಚೆನ್ನಯ್ಯನಕೋಟೆ ಕ್ಷೇತ್ರವನ್ನೊಳ ಗೊಂಡ ಆಗಿನ ಅಮ್ಮತ್ತಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಹೆಚ್.ಸಿ. ಸಣ್ಣಯ್ಯನವರು ೨೦೧೬ರ ಜಿಲ್ಲಾ ಪಂಚಾಯಿತಿ ಚುನಾವಣೆ ಯಲ್ಲಿ ತಮ್ಮ ಪುತ್ರಿ ಲೀಲಾವತಿಗೆ ಚೆನ್ನಯ್ಯನಕೋಟೆ ಕ್ಷೇತ್ರದಿಂದ ಟಿಕೆಟ್ ಕೊಡಿಸಿ, ಗೆಲ್ಲಿಸುವಲ್ಲಿ ಯಶಸ್ಸು ಕಂಡಿದ್ದರು.
(ಮುAದುವರಿಯುವುದು)
- ಕೆ.ಎಂ. ಇಸ್ಮಾಯಿಲ್ ಕಂಡಕರೆ