ವೀರಾಜಪೇಟೆ, ಜ. ೨೨: ವಿದ್ಯಾರ್ಥಿಗಳಿಗೆ ಪಾಠದೊಂದಿಗೆ ನೈತಿಕ ಮೌಲ್ಯಗಳನ್ನು ಶಾಲೆ ಮತ್ತು ಮನೆಯಲ್ಲಿಯೂ ಹೇಳಿಕೊಡುವುದರಿಂದ ವಿದ್ಯಾರ್ಥಿಗಳು ಗುರಿಮುಟ್ಟಲು ಸಾಧ್ಯವಾಗುತ್ತದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಎ.ವಿ. ಮಂಜುನಾಥ್ ಹೇಳಿದರು.
ಸಮೀಪದ ಅರಮೇರಿ-ಕಳಂಚೇರಿ ಶ್ರೀಮಠದ ಲಿಂಗರಾಜೇAದ್ರ ಭವನದಲ್ಲಿ ನಡೆದ ‘ಹೊಂಬೆಳಕು ಕಿರಣ ೨೨೭ನೇ ಮಾಸಿಕ ತತ್ವ ಚಿಂತನಾಗೋಷ್ಠಿ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿ, ‘ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯಗಳ ಅವಶ್ಯಕತೆ’ ಎಂಬ ವಿಷಯದ ಬಗ್ಗೆ ಉಪನ್ಯಾಸದಲ್ಲಿ ವಿದ್ಯಾರ್ಥಿಗಳ ಜೀವನದಲ್ಲಿ ಪ್ರಾಮಾಣಿಕತೆ, ಸಹನೆ, ಜವಾಬ್ದಾರಿಗಳನ್ನು ಕಲಿಯುವುದರೊಂದಿಗೆ ನೈತಿಕ ಮೌಲ್ಯಗಳನ್ನು ಮನೆಯಲ್ಲಿ ಮಾತ್ರ ಅಲ್ಲದೆ ಶಾಲೆಗಳಲ್ಲಿಯೂ ಕಲಿಯುವಂತಾಗಬೇಕು ಹಾಗೂ ಧ್ಯಾನ ಯೋಗದಂತ ಪಠ್ಯೇತರ ಚಟುವಟಿಕೆಗಳನ್ನು ಹೇಳಿಕೊಡುವುದರಿಂದ ಮಕ್ಕಳ ಭವಿಷ್ಯ ಉಜ್ವಲವಾಗಲು ಸಾಧ್ಯವಾಗಲಿದೆ. ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ನೈತಿಕ ಮೌಲ್ಯಗಳ ಅವಶ್ಯಕತೆ ಇರುವುದಾಗಿ ಮಂಜುನಾಥ್ ಹೇಳಿದರು.
ಮೊದಲಿಗೆ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಭಾರತೀಯ ಜೀವ ವಿಮಾ ನಿಗಮದ ನಿವೃತ್ತ ಅಧಿಕಾರಿ ವೀರಾಜಪೇಟೆ ಗಾಂಧಿನಗರದ ಸೀತಾ ಸುಧಾಕರ್ ಮಾತನಾಡಿ, ಪ್ರತಿ ವಿದ್ಯಾರ್ಥಿಗಳಿಗೂ ಜೀವನದ ಮೌಲ್ಯಗಳನ್ನು ಶಾಲೆಯಲ್ಲಿ ಹೇಳಿ ಕೊಡುವಂತಾಗಬೇಕು. ಆಗ ಮಾತ್ರ ಮಕ್ಕಳು ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಅರಮೇರಿ-ಕಳಂಚೇರಿ ಶ್ರೀ ಮಠದ ಪೀಠಾಧಿಪತಿಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಹೊಂಬೆಳಕು ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಶಿಕ್ಷಣದೊಂದಿಗೆ ನೈತಿಕ ಮೌಲ್ಯಗಳ ಅವಶ್ಯವು ಇದೆ. ಮಾತ್ರವಲ್ಲದೆ ಮನುಷ್ಯನಲ್ಲಿರುವಂತ ಕರ್ತವ್ಯ ಪ್ರಜ್ಞೆ, ಮೌಲ್ಯ, ತತ್ವ ಆದರ್ಶಗಳನ್ನು ಪಾಲಿಸುವಂತಾಗಬೇಕು. ಪ್ರಾಣಿ-ಪಕ್ಷಿಗಳನ್ನು ಹಿಂಸಿಸಬಾರದು, ದೇಶ ಅಭಿವೃದ್ಧಿ ಹೊಂದುವ ರಾಷ್ಟçವಾಗಲು ಆಮಿಷಗಳಿಗೆ ಬಲಿಯಾಗಬಾರದು. ದೇಶ ನಮಗೆ ಎಲ್ಲವನ್ನು ನೀಡಿದೆ ಎಂದು ನುಡಿದರು.