ಸೋಮವಾರಪೇಟೆ, ಜ. ೨೨: ಜಿಲ್ಲಾ ರಕ್ತನಿಧಿಕೋಶ, ತಾಲೂಕು ಆರೋಗ್ಯಾ ಧಿಕಾರಿಗಳ ಕಚೇರಿ, ಆಯುಷ್ಮಾನ್ ಆರೋಗ್ಯ ಮಂದಿರ ಹಾಗೂ ತೋಳೂರು ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ತೋಳೂರುಶೆಟ್ಟಳ್ಳಿ ಸಮುದಾಯ ಭವನದಲ್ಲಿ ರಕ್ತದಾನ ಶಿಬಿರ ನಡೆಯಿತು.

ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಕರುಂಬಯ್ಯ ಅವರು ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಆರೋಗ್ಯವಂತರು ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ರಕ್ತದಾನದಿಂದ ಜೀವಗಳನ್ನು ಉಳಿಸಿದ ಸಾರ್ಥಕತೆ ಸಿಗುತ್ತದೆ. ರಕ್ತದಾನದಿಂದ ದಾನಿಗಳ ಆರೋಗ್ಯವೂ ಉತ್ತಮವಾಗಿರುತ್ತದೆ. ಆನೇಕ ರೋಗಗಳಿಂದಲೂ ಮುಕ್ತವಾಗಬಹುದು ಎಂದು ಹೇಳಿದರು. ಹಿಂದೆಲ್ಲಾ ಮೂಢನಂಬಿಕೆ ಮತ್ತು ಭಯದಿಂದ ರಕ್ತದಾನ ಮಾಡುತ್ತಿರಲಿಲ್ಲ. ಈಗ ಗ್ರಾಮೀಣ ಭಾಗದಲ್ಲೂ ಅತೀ ಹೆಚ್ಚಿನ ಮಂದಿ ರಕ್ತದಾನ ಮಾಡುತ್ತಿದ್ದಾರೆ. ದಾನ ಮಾಡಿದ ರಕ್ತ ಒಂದೆರಡು ದಿನಗಳಲ್ಲಿಯೇ ಶರೀರದಲ್ಲಿ ಉತ್ಪತ್ತಿಯಾಗುತ್ತದೆ. ಜನರಲ್ಲಿ ಈ ಬಗ್ಗೆ ಇನ್ನೂ ಜಾಗೃತಿ ಮೂಡಿಸಬೇಕಾಗಿದೆ. ಯುವಕ ಯುವತಿಯರು ರಕ್ತದಾನ ಮಾಡಬೇಕು ಎಂದರು.

ಜಿಲ್ಲಾಸ್ಪತ್ರೆಯಲ್ಲಿ ಮಾಸಿಕವಾಗಿ ೫೦೦ ಯೂನಿಟ್‌ನಷ್ಟು ರಕ್ತದ ಅವಶ್ಯಕತೆಯಿದೆ. ಗರ್ಭಿಣಿಯರಿಗೆ, ರಕ್ತಹೀನತೆಯಿಂದ ಬಳಲುತ್ತಿರುವವರಿಗೆ, ಅಪಘಾತದಲ್ಲಿ ಗಾಯಗೊಂಡವರ ಜೀವ ಉಳಿಸಲು ರಕ್ತ ನೀಡಬೇಕು. ರಕ್ತಕ್ಕೆ ಯಾವ ಪರ್ಯಾಯ ವ್ಯವಸ್ಥೆ ಇಲ್ಲವೇ ಇಲ್ಲ. ದಾನಿಗಳೇ ಕೊಡಬೇಕು ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಅವರು ಕ್ಷಯ ರೋಗ ನಿರ್ಮೂಲನೆಗೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಶಿಬಿರದಲ್ಲಿ ೩೫ ಮಂದಿ ಗ್ರಾಮೀಣ ಜನರು ರಕ್ತದಾನ ಮಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವಾನಿ, ಸದಸ್ಯರಾದ ಆರತಿ, ದಿವ್ಯ, ಮೋಹಿತ್, ನವೀನ್, ರುದ್ರಪ್ಪ, ವೈದ್ಯಾಧಿಕಾರಿ ಚಾರುಮತಿ, ಪಿಡಿಓ ಮನಮೋಹನ್, ಲಯನ್ಸ್ ಅಧ್ಯಕ್ಷ ಶಿವಕುಮಾರ್ ಮತ್ತಿತರರು ಇದ್ದರು.

ಶಿಬಿರದಲ್ಲಿ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಕಿರಣ್ ಸೇರಿದಂತೆ ಇತರ ವೈದ್ಯರು, ಆಶಾ ಕಾರ್ಯಕರ್ತೆಯರು ರಕ್ತದಾನ ಮಾಡಿದರು.

ತೋಳೂರುಶೆಟ್ಟಳ್ಳಿ ಸಮುದಾಯ ಆರೋಗ್ಯಾಧಿಕಾರಿ ನವೀನ್, ಪ್ರಕಾಶ್, ಸ್ಥಳೀಯರಾದ ಈರಪ್ಪ, ಧರ್ಮಪ್ಪ ಅವರುಗಳು ರಕ್ತದಾನಿಗಳಿಗೆ ಹಣ್ಣು ಹಂಪಲು ವಿತರಿಸಿದರು.