ಐಗೂರು, ಜ. ೨೨: ಬೇಳೂರು ಬಸವನಹಳ್ಳಿಯ ಕಾರೆಕೊಪ್ಪ ಗ್ರಾಮದಲ್ಲಿ ಕೊರಗಜ್ಜ ದೈವ ಹಾಗೂ ಪಾಷಾಣಮೂರ್ತಿ ತಾಯಿಯ ಮೂರ್ತಿ ಪ್ರತಿಷ್ಠಾಪನೆ ಮತ್ತು ನೇಮೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.
ಉತ್ಸವದ ಪ್ರಯುಕ್ತ ದೇವಾಲಯದ ಆವರಣವನ್ನು ರಂಗೋಲಿ, ತಳಿರು ತೋರಣ ಮತ್ತು ಹೂವಿನಿಂದ ಅಲಂಕಾರ ಮಾಡಲಾಗಿತ್ತು. ಸೋಮವಾರಪೇಟೆಯ ಅರ್ಚಕರಾದ ಸುರೇಶ್ ಆಚಾರ್ಯ ನೇತೃತ್ವದಲ್ಲಿ ಹೋಮ, ಹವನ, ಪೂಜಾ ವಿಧಾನಗಳೊಂದಿಗೆ ಕೊರಗಜ್ಜ ದೈವ ಮತ್ತು ಪಾಷಾಣಮೂರ್ತಿ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
ಭಂಡಾರ ತೆಗೆಯುವ ಕಾರ್ಯಕ್ರಮ ನಡೆದ ನಂತರ ಪಾಷಾಣ ಮೂರ್ತಿಯ ಕೋಲ ಮತ್ತು ನೇಮೋತ್ಸವ ನಡೆದು ಭಕ್ತರು ಆಶೀರ್ವಚನ ಪಡೆದರು. ಸ್ವಾಮಿ ಕೊರಗಜ್ಜ ದೈವದ ಕೋಲ ನಡೆಯಿತು. ಈ ಸಂದರ್ಭದಲ್ಲಿ ದೇವಾಲಯದ ಸ್ಥಳ ದಾನಿಗಳಾದ ಕೊಟ್ಟಿಗೆಮನೆ ಉಮೇಶ ಮತ್ತು ಕೊಟ್ಟಿಗೆಮನೆ ರಾಜಣ್ಣ ಅವರನ್ನು ದೇವಾಲಯದ ವತಿಯಿಂದ, ಕೆದಕಲ್ಲಿನ ಸ್ವಾಮಿ ಕೊರಗಜ್ಜ ದೇವಸ್ಥಾನದ ಧರ್ಮದರ್ಶಿ ಉಮೇಶ್ ಸನ್ಮಾನಿಸಿದರು.
ಪ್ರಸಾದ ವಿನಿಯೋಗ ಅನ್ನಸಂತರ್ಪಣೆಯೊAದಿಗೆ ಉತ್ಸವಕ್ಕೆ ತೆರೆ ಎಳೆಯಲಾಯಿತು. ಉತ್ಸವದಲ್ಲಿ ಕೃಷ್ಣಪ್ಪಗೌಡ, ಸುದರ್ಶನ್ ಎನ್.ಸಿ., ರವಿ ಕೆ.ಕೆ. ದೇವಾಲಯದ ಪೂಜಾರಿ ನಂದಕುಮಾರ ಮತ್ತು ಗ್ರಾಮಸ್ಥರು ಹಾಜರಿದ್ದರು.