ಮಡಿಕೇರಿ, ಜ. ೨೨: ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ಕಾಫಿ, ಅಡಿಕೆ, ಕರಿಮೆಣಸು ಫಸಲಿನ ವಹಿವಾಟು ಹೆಚ್ಚಾಗುತ್ತಿರುವ ಬೆನ್ನಲ್ಲೇ ನಕಲಿ ನೋಟು ಚಲಾವಣೆಯ ಆತಂಕ ವ್ಯಕ್ತಗೊಂಡಿದೆ. ರೂ. ೫೦೦ ಮುಖ ಬೆಲೆಯ ಖೋಟಾ ನೋಟುಗಳು ಹಲವೆಡೆ ಹರಿದಾಡಿರುವ ಮಾತು ಕೇಳಿ ಬಂದಿದೆ. ಆದರೆ ಈತನಕ ಎಲ್ಲೂ ಇದರ ಬಗ್ಗೆ ಅಧಿಕೃತವಾಗಿ ದೂರು ದಾಖಲಾಗಿಲ್ಲ. ಜನವಲಯದಲ್ಲಿ ಈ ಬಗ್ಗೆ ಖಚಿತವಾದ ಮಾತು ಹೆಚ್ಚಿದ್ದು, ಹಣ ಪಡೆಯುವ ಸಂದರ್ಭದಲ್ಲಿ ನೋಟಿನ ಅಧಿಕೃತೆಯ ಬಗ್ಗೆ ಅನುಮಾನಪಡುವಂತಾಗಿದೆ. ಪ್ರಸ್ತುತ ಕಾಫಿಗೆ ಒಂದಷ್ಟು ಬೆಲೆ ಹೆಚ್ಚಿದ್ದು, ದುಡ್ಡಿನ ಪ್ರಮಾಣ ಹೆಚ್ಚು ವಹಿವಾಟು ಆಗುತ್ತಿದೆ. ಕಾಫಿ ಮಾರಾಟ ಸೇರಿದಂತೆ ಪೆಟ್ರೋಲ್ ಬಂಕ್‌ಗಳಲ್ಲಿಯೂ ಹೆಚ್ಚಾಗಿ ದುಡ್ಡಿನ ವಹಿವಾಟು ನಡೆಯುತ್ತಿರುತ್ತವೆ. ಈ ಸಂದರ್ಭದಲ್ಲಿ ಹಣದ ಕಂತೆಯ ನಡುವೆ ಒಂದೆರಡು ಖೋಟಾ ನೋಟುಗಳನ್ನು ನುಸುಳಿಸುವ ಪ್ರಯತ್ನ ನಡೆದಿರುವದಾಗಿ ‘ಶಕ್ತಿ’ಗೆ ತಿಳಿದು ಬಂದಿದೆ. ಈ ವಿಚಾರ ಕೆಲವೆಡೆ ಬ್ಯಾಂಕ್‌ಗಳ ಗಮನಕ್ಕೂ ಬಂದಿದೆ ಎನ್ನಲಾಗಿದ್ದರೂ ಯಾರೂ ದೂರು ನೀಡಲು ಮುಂದಾಗಿಲ್ಲ. ಕೆಲ ದಿನಗಳ ಹಿಂದೆ ಗೋಣಿಕೊಪ್ಪದ ಪೆಟ್ರೋಲ್ ಬಂಕ್ ಒಂದರಲ್ಲಿ ಯಾರೋ ಈ ರೀತಿಯ ನೋಟು ಚಲಾವಣೆ ಮಾಡಿರುವುದು ಬಂಕ್‌ನವರಿಗೆ ತಡವಾಗಿ ತಿಳಿದು ಬಂದಿದೆ. ಆದರೆ ಖಚಿತವಾಗಿ ಯಾರು... ಏನು... ಎಲ್ಲಿಂದ ಎಂಬ ಮಾಹಿತಿ ಇಲ್ಲದ ಕಾರಣ ಅವರು ಸುಮ್ಮನಾಗಿದ್ದು, ಇದೀಗ ವಹಿವಾಟಿನ ಸಂದರ್ಭದಲ್ಲಿ ಹೆಚ್ಚಿನ ಜಾಗ್ರತೆ ವಹಿಸಿದ್ದಾರೆ. ಕಾಫಿ ವಹಿವಾಟಿನ ಬಿರುಸಿನ ನಡುವೆ ನಕಲಿ ನೋಟು ಚಲಾವಣೆಯ ಆತಂಕ ಹೆಚ್ಚಿದ್ದು, ಈ ಬಗ್ಗೆ ಜಾಗ್ರತೆ ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಬ್ಯಾಂಕ್‌ಗಳೂ ಈ ಬಗ್ಗೆ ಕಾಳಜಿ ತೋರುವುದರೊಂದಿಗೆ ಜನಸಾಮಾನ್ಯರು ಸಮಸ್ಯೆಗೆ ಒಳಗಾಗುವುದನ್ನು ತಪ್ಪಿಸುವ ಕುರಿತು ಮುಂದಾಗಬೇಕಿದೆ. ದೊಡ್ಡ ಪ್ರಮಾಣದ ಹಣದ ವಹಿವಾಟು ನಡೆಯುವ ಸ್ಥಳಗಳಲ್ಲಿ ನೋಟು ಎಣಿಕೆಯ ಮೆಷಿನ್‌ಗಳನ್ನು ಅಳವಡಿಸುವುದು, ಸಿಸಿ ಟಿವಿಗಳ ಅಳವಡಿಕೆಯಂತಹ ಕ್ರಮಗಳನ್ನು ಅನುಸರಿಸುವುದು ಅಗತ್ಯವಾಗಿದೆ. ಕೆಲವೆಡೆಗಳಲ್ಲಿ ಮಾರುಕಟ್ಟೆಗಳಲ್ಲಿ ಜಿಲ್ಲೆಗೆ ವಲಸಿಗರಾಗಿರುವ ಮಂದಿಯೂ ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿಕೊಂಡಿರುವುದು ಗಂಭೀರ ವಿಚಾರವಾಗಿದ್ದು, ಇಂತಹ ಕಡೆಗಳಲ್ಲೂ ನಿಗಾ ವಹಿಸಬೇಕಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಗೋಣಿಕೊಪ್ಪದ ಉದ್ಯಮಿ ಕೊಲ್ಲಿರ ಉಮೇಶ್ ಅವರು ಜನಸಾಮಾನ್ಯರಿಗೆ, ಕೆಲಸದ ಮಂದಿಗೆ ಸುಲಭವಾಗಿ ನಕಲಿ ನೋಟುಗಳನ್ನು ಪತ್ತೆ ಹಚ್ಚುವುದು ಕಷ್ಟ ಸಾಧ್ಯವಾಗಿದೆ.

ಮುಗ್ಧ ಜನರನ್ನು ವಂಚಿಸುವ ವ್ಯಕ್ತಿಗಳ ಬಗ್ಗೆ ಬ್ಯಾಂಕ್‌ನವರು, ಪೊಲೀಸ್ ಇಲಾಖೆ ಒಂದಷ್ಟು ಜಾಗ್ರತೆ ವಹಿಸುವುದು ಸೂಕ್ತ ಎಂದಿದ್ದಾರೆ. ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರು ಪ್ರತಿಕ್ರಿಯಿಸಿದ್ದು, ನೇರವಾಗಿ ಹಣ ಪಡೆಯುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ಬ್ಯಾಂಕ್‌ಗಳ ಮೂಲಕ ವ್ಯವಹಾರ ನಡೆಸುವುದು ಸೂಕ್ತ ದೊಡ್ಡ ಮೊತ್ತದ ವಹಿವಾಟಿನ ಸಂದರ್ಭ ನೇರವಾಗಿ ಹಣದ ಕಂತೆ ಪಡೆಯುವದಾದರೆ, ನೋಟು ಎಣಿಕೆ ಯಂತ್ರದ ಸಹಾಯ ಪಡೆಯಬೇಕಿದೆ. ಅನಿವಾರ್ಯ ಸಂದರ್ಭದಲ್ಲಿ ನೋಟಿನ

(ಮೊದಲ ಪುಟದಿಂದ) ಕೂಲಂಕುಶ ಪರಿಶೀಲನೆ ಮಾಡುವುದು ಒಳ್ಳೆಯದು ಎಂದು ಸಲಹೆಯಿತ್ತಿದ್ದಾರೆ. ದೇಶದಲ್ಲಿ ಹಳೆಯ ನೋಟುಗಳು ಇದ್ದ ಸಂದರ್ಭದಲ್ಲಿ ಖೋಟಾ ನೋಟಿನ ಚಲಾವಣೆ ಪದೇ-ಪದೇ ವರದಿಯಾಗುತ್ತಿತ್ತು. ಆದರೆ ಹಿಂದಿನ ನೋಟುಗಳನ್ನು ಅಮಾನ್ಯ ಮಾಡಿ ಹೊಸ ನೋಟುಗಳನ್ನು ಜಾರಿಗೆ ತಂದ ಬಳಿಕ ಖೋಟಾ ನೋಟು ಚಲಾವಣೆ ಒಂದಷ್ಟು ಕಡಿಮೆಯಾಗಿತ್ತು. ಆದರೆ ಇದೀಗ ಮತ್ತೆ ನಕಲಿ ನೋಟುಗಳು ಬರುತ್ತಿವೆ ಎಂಬ ವಿಚಾರ ಹೊಸ ಆತಂಕಕ್ಕೆ ಕಾರಣವಾಗಿದ್ದು, ಎಲ್ಲರೂ ಜಾಗ್ರತೆ ವಹಿಸುವುದು ಅನಿವಾರ್ಯವಾಗಿದೆ.

ಟಿ.ನರಸೀಪುರದಲ್ಲಿ ಪ್ರಕರಣ ದಾಖಲು

ಕೊಡಗು ಜಿಲ್ಲೆಯಲ್ಲಿ ನಕಲಿ ನೋಟು ಚಲಾವಣೆಯ ಆತಂಕದ ನಡುವೆ ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ ಇಬ್ಬರು ಆರೋಪಿಗಳು ಯಂತ್ರ ಸಹಿತವಾಗಿ ಇತರ ಸಾಮಗ್ರಿಗಳೊಂದಿಗೆ ಬಂಧಿತರಾಗಿದ್ದಾರೆ. ಈ ಪ್ರಕರಣ ನಕಲಿ ನೋಟುಗಳು ಬರುತ್ತಿವೆ ಎಂಬದಕ್ಕೆ ಪುಷ್ಟಿ ನೀಡಿದಂತಾಗಿದೆ. ಟಿ. ನರಸೀಪುರದ ಮಾದಾಪುರ ಗ್ರಾಮದ ಹಿರಿಯೂರು ಗ್ರಾಮದಲ್ಲಿ ದನಕಟ್ಟುವ ಶೆಡ್‌ವೊಂದರಲ್ಲಿ ಈ ದಂಧೆ ನಡೆಯುತ್ತಿರುವ ಮಾಹಿತಿಯಂತೆ ಪೊಲೀಸರು ದಾಳಿ ನಡೆಸಿದ ವೇಳೆ ಪ್ರಕರಣ ಬಯಲಾಗಿದ್ದು ಇಬ್ಬರು ಬಂಧಿತರಾಗಿದ್ದಾರೆ ಎಂದು ವರದಿಯಾಗಿದೆ. ರೂ. ೫೦೦ ಮುಖ ಬೆಲೆಯ ೫೧ ಖೋಟಾ ನೋಟುಗಳು (ರೂ. ೨೫,೫೦೦) ಪತ್ತೆಯಾಗಿದೆ. ಬಂಧಿತರು ಅಸ್ಸಾಮಿಗಳೆಂಬದೂ ಗಮನಾರ್ಹವಾಗಿದೆ. ನಕಲಿ ನೋಟುಗಳು ಬರುತ್ತಿವೆ ಎಂಬ ಸಂಶಯ ನಿಜ ಎಂದು ಈ ಪ್ರಕರಣದಿಂದ ತಿಳಿದುಬಂದಿದೆ. ಕೊಡಗು ಜಿಲ್ಲೆಯಲ್ಲೂ ಈ ಬಗ್ಗೆ ಹೆಚ್ಚಿನ ಜಾಗೃತೆ ಈಗಿನ ಸಂದರ್ಭದಲ್ಲಿ ಅನಿವಾರ್ಯ ಎಂಬದನ್ನು ಜನರು, ಹಣಕಾಸಿನ ವ್ಯವಹಾರ ನಡೆಸುವವರು ಅರಿತುಕೊಳ್ಳಬೇಕಿದೆ.

ಬಂಧಿತರು ಪೊಲೀಸ್ ಕಸ್ಟಡಿಗೆ

ಟಿ. ನರಸೀಪುರದಲ್ಲಿ ನಕಲಿ ನೋಟು ಮುದ್ರಣ ಯಂತ್ರ ಸಹಿತವಾಗಿ ಬಂಧಿತರಾಗಿರುವ ಇಬ್ಬರನ್ನು ಇದೀಗ ಮತ್ತೆ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿಯುತ್ತಿದೆ ಎಂದು ಅಲ್ಲಿನ ಇನ್ಸ್ಪೆಕ್ಟರ್ ಧನಂಜಯ ಅವರು ಮಾಹಿತಿ ನೀಡಿದ್ದಾರೆ. ಆರೋಪಿಗಳು ಯಾವ್ಯಾವ ಕಡೆಗಳಲ್ಲಿ ಎಷ್ಟು ನೋಟುಗಳನ್ನು ಚಲಾವಣೆ ಮಾಡಿದ್ದಾರೆ ಎಂಬದು ಪೊಲೀಸರ ವಿಚಾರಣೆಯಿಂದ ತಿಳಿದು ಬರಬೇಕಿದೆ.

-ಶಶಿ ಸೋಮಯ್ಯ