ಸೋಮವಾರಪೇಟೆ, ಜ. ೨೨: ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ಕಡಿಮೆ ಬೆಲೆಗೆ ಗೃಹೋಪಯೋಗಿ ವಸ್ತುಗಳನ್ನು ‘ಸ್ಕೀಂ’ ಮೂಲಕ ನೀಡುವುದಾಗಿ ಮುಂಗಡ ಹಣ ಸಂಗ್ರಹಿಸಿ ನಾಪತ್ತೆಯಾಗಿದ್ದ ಮಹೀ ಟ್ರೇರ್ಸ್ನ ಮಾಲೀಕರೋರ್ವರು ಪೊಲೀಸ್ ಬಲೆಗೆ ಬಿದ್ದಿದ್ದಾರೆ.
ಸೋಮವಾರಪೇಟೆ ಪೊಲೀಸರು ತಮಿಳುನಾಡು ರಾಜ್ಯದ ಪುದುಕೋಟೈ ಜಿಲ್ಲೆಯ ಬಾಬು ಕೇಶವನ್ ಅವರನ್ನು ವಶಕ್ಕೆ ಪಡೆದು ಸೋಮವಾರಪೇಟೆ ಠಾಣೆಗೆ ರಾತ್ರಿ ಕರೆತಂದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಕಳೆದ ಡಿ. ೩೧ರಿಂದ ಅಂಗಡಿ ಬಾಗಿಲು ತೆಗೆಯದೇ ಮುಂಗಡ ಹಣದೊಂದಿಗೆ ನಾಪತ್ತೆಯಾಗಿದ್ದ ಮಹೀ ಟ್ರೇರ್ಸ್ನ ಬಾಬು ಕೇಶವನ್, ಮಹೇಶ್ ಸೇರಿದಂತೆ ಇತರ ಮೂವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು.
ಬಾಬು ಕೇಶವನ್ ಅವರಿಗೆ ಸೇರಿದ ೨ ಮೊಬೈಲ್, ಮಹೇಶ್ಗೆ ಸೇರಿದ ೧ ಮೊಬೈಲ್ ಅಂದಿನಿAದ ಇಂದಿನವರೆಗೂ ಸ್ವಿಚ್ ಆಫ್ ಆಗಿದ್ದು, ಇವರುಗಳ ಪತ್ತೆಗೆ ಪೊಲೀಸರು ಸಾಕಷ್ಟು ಶ್ರಮ ವಹಿಸಿದ್ದರು. ಸೋಮವಾರಪೇಟೆ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿಗಳು ತಮಿಳುನಾಡು ರಾಜ್ಯಕ್ಕೆ ತೆರಳಿ, ಅಂತಿಮವಾಗಿ ಬಾಬು ಕೇಶವನ್
(ಮೊದಲ ಪುಟದಿಂದ) ಅವರನ್ನು ಪತ್ತೆಹಚ್ಚಿ ಸೋಮವಾರಪೇಟೆಗೆ ಕರೆತಂದಿದ್ದಾರೆ. ಕಳೆದ ಡಿಸೆಂಬರ್ ೭ ರಿಂದ ಪಟ್ಟಣದ ಎಂ.ಜಿ.ರಸ್ತೆಯ ದೂಪದ್ ಕಾಂಪ್ಲೆಕ್ಸ್ನಲ್ಲಿ ಕಾರ್ಯಾರಂಭಿಸಿದ್ದ, ತಮಿಳುನಾಡು ಮೂಲದ ವ್ಯಕ್ತಿಗಳ ಮಾಲೀಕತ್ವದ ಮಹೀ ಟ್ರೇರ್ಸ್ನಲ್ಲಿ ಹಲವು ಗ್ರಾಹಕರು ಗೃಹೋಪಯೋಗಿ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿಸಿದ್ದರೆ, ನೂರಾರು ಮಂದಿ ಗ್ರಾಹಕರು ತಲಾ ಸಾವಿರಾರು ರೂಪಾಯಿ ಮುಂಗಡ ಹಣ ನೀಡಿದ್ದರು.
ಈ ನಡುವೆ ಡಿಸೆಂಬರ್ ೩೧ರಿಂದ ಮಹೀ ಟ್ರೇರ್ಸ್ನ ಬಾಗಿಲು ತೆರೆಯದೇ ಮಾಲೀಕರು ನಾಪತ್ತೆಯಾಗಿದ್ದರು. ಇದರಿಂದಾಗಿ ಗಾಬರಿಗೊಂಡ ನೂರಾರು ಮಂದಿ ಗ್ರಾಹಕರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೌಡಾಯಿಸಿದ್ದರು. ಕೆಲವರು ೫ ಸಾವಿರದಿಂದ ೧ ಲಕ್ಷದವರೆಗೂ ಮುಂಗಡ ಹಣ ಪಾವತಿಸಿರುವ ಬಗ್ಗೆ ಅಳಲು ತೋಡಿಕೊಂಡಿದ್ದರು. ಪ್ರಸ್ತುತ ಅಂಗಡಿಯನ್ನು ಪೊಲೀಸರು ತಮ್ಮ ವಶಕ್ಕೆ ಪಡೆದು ಬ್ಯಾರಿಕೇಡ್ ಅಳವಡಿಸಿದ್ದಾರೆ.
ಕಳೆದ ಡಿ.೩೧ರಂದು ನಾಪತ್ತೆಯಾಗಿದ್ದ ಮಹೀ ಟ್ರೇರ್ಸ್ನ ಮಾಲೀಕರ ವಿರುದ್ಧ ಜ. ೧೫ರಂದು ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು. ವಳಗುಂದ ಗ್ರಾಮದ ವಿ.ಎಂ. ಗಿರೀಶ್ ಅವರು ನೀಡಿದ ದೂರಿನ ಮೇರೆ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ತಮಿಳುನಾಡು ರಾಜ್ಯಕ್ಕೆ ತೆರಳಿದ್ದ ಮೂವರು ಸಿಬ್ಬಂದಿಗಳು ಮೂರು ದಿನಗಳ ಕಾಲ ಕಾರ್ಯಾಚರಣೆ ನಡೆಸಿ, ಪ್ರಕರಣದ ಪ್ರಮುಖ ಆರೋಪಿಯಾಗಿರುವ ಬಾಬು ಕೇಶವನ್ ಅವರನ್ನು ಪತ್ತೆಹಚ್ಚಿ, ಠಾಣೆಗೆ ಕರೆತಂದಿದ್ದು, ತನಿಖೆ ಮುಂದುವರೆಸಿದ್ದಾರೆ.