ಮಡಿಕೇರಿ, ಜ. ೨೨: ಮಹಾಯೋಗಿ ವೇಮನ ತ್ಯಾಗಿ ಜೀವಿ. ವಚನ ಸಾಹಿತ್ಯದ ಮೂಲಕ ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಮಹಾನ್ ಚೇತನ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಆಶ್ರಯದಲ್ಲಿ ನಗರದ ಗಾಂಧಿ ಭವನದಲ್ಲಿ ನಡೆದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಉಪನ್ಯಾಸ ನೀಡಿದ ಅವರು ರಾಷ್ಟçಕಂಡ ಖ್ಯಾತ ಸಂತರು, ದಾರ್ಶನಿಕರು, ತಾನು ಕಂಡ ಅನುಭವಿಸಿದ ಸತ್ಯವನ್ನು ಆಡು ಭಾಷೆಯಲ್ಲಿ ವಚನಗಳ ಮೂಲಕ ತಿಳಿಸಿದ್ದಾರೆ ಎಂದರು.

ಅವುಗಳಲ್ಲಿ ಆಡಂಬರವಿಲ್ಲ, ವೈಭವೀಕರಣವಿಲ್ಲ, ಎಲ್ಲವೂ ನೇರ ಮತ್ತು ಸ್ಟಷ್ಟ ಸ್ಥಾಪಿತ ಧರ್ಮವೆಂದರು. ಅವರ ಕಾವ್ಯದಲ್ಲಿ ಮಡಿಮೈಲಿಗೆ, ಪಾಪ ಪುಣ್ಯ, ಮೇಲು ಕೀಳು ಎಂಬ ಭಾವನೆಯನ್ನು ಖಂಡಿಸಿದ್ದಾರೆ. ಸಕಲ ಧರ್ಮಗಳ ಸಹಭಾಗಿತ್ವದಲ್ಲಿ ಸಮಾಜ ಸಮಾನತೆ ಕಾಣಬೇಕಾಗಿದೆ ಎಂದರು.

ಜನಸಾಮಾನ್ಯರಲ್ಲಿರುವ ಮೌಢ್ಯತೆಯನ್ನು ತೊಡೆದು, ಸಮಾಜದ ಅಂಕುಡೊAಕುಗಳನ್ನು ತಿದ್ದಿ ಸರಳವಾದ ಉಪದೇಶ ನೀಡಿದ್ದಾರೆ ಎಂದು ಮಹಾಯೋಗಿ ವೇಮನರ ಜೀವನ ಸಾಧನೆ ಕುರಿತಂತೆ ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಸ್ವಾಗತಿಸಿದರು. ವಿದ್ವಾನ್ ಬಿ.ಸಿ. ಶಂಕರಯ್ಯ ಪ್ರಾರ್ಥಿಸಿ, ಕಾರ್ಯಕ್ರಮ ನಿರೂಪಿಸಿದರು. ಮಣಜೂರು ಮಂಜುನಾಥ್ ವಂದಿಸಿದರು.