x

ಐಗೂರು, ಜ. ೨೨: ಸಮೀಪದ ಐಗೂರು ಗ್ರಾಮ ಪಂಚಾಯಿತಿ ಮತ್ತು ನಾವು ಪ್ರತಿಷ್ಠಾನ ಸಂಸ್ಥೆ ಸಹಭಾಗಿತ್ವದಲ್ಲಿ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಕ್ಕಳ ಗ್ರಾಮ ಸಭೆ ನಡೆಯಿತು.

ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಕೆ. ವಿನೋದ್ ವಹಿಸಿದ್ದರು. ಐಗೂರು ಪ್ರೌಢ ಶಾಲೆಯ ವಿದ್ಯಾರ್ಥಿನಿ ಸಹನ ಮತ್ತು ಸ.ಹಿ.ಪ್ರಾ. ಶಾಲೆ ಕಾಜೂರಿನ ವಿದ್ಯಾರ್ಥಿನಿ ರೋಷ್ನಿ ಜಂಟಿಯಾಗಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದು, ಪಿ.ಡಿ.ಓ. ಪೂರ್ಣ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿವಿಧ ಶಾಲೆಯ ವಿದ್ಯಾರ್ಥಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಗಿರೀಶ್ ಮಕ್ಕಳ ಹಕ್ಕುಗಳ ಬಗ್ಗೆ ಮಾತನಾಡಿದರು. ನಾವು ಪ್ರತಿಷ್ಠಾನದ ಸುಮನ್ ಮಾತನಾಡಿ, ಸರಕಾರ ೨,೦೦೬ರಲ್ಲಿ ಮಕ್ಕಳ ಹಕ್ಕು ಕಾಯ್ದೆಯನ್ನು ಅನುಷ್ಠಾನಗೊಳಿಸಿದೆ. ಶೂನ್ಯದಿಂದ ೧೮ ವರ್ಷದವರೆಗೆ ಮಕ್ಕಳು ಎಲ್ಲಾ ರೀತಿಯ ಹಕ್ಕುಗಳಿಗೆ ಜನರಾಗಿರುತ್ತಾರೆ ಎಂದರು.

ಗ್ರಂಥಾಲಯದ ಮೇಲ್ವಿಚಾರಕ ಮೊಣ್ಣಪ್ಪ ಮಾತನಾಡಿ, ೪೫೨ ವಿದ್ಯಾರ್ಥಿಗಳು ಗ್ರಂಥಾಲಯದ ಸದಸ್ಯರಾಗಿದ್ದು ಎಲ್ಲರೂ ಪ್ರಯೋಜನ ಪಡೆಯಬೇಕೆಂದರು. ಬಜೆಗುಂಡಿ ಮತ್ತು ಎಡವಾರೆ ಭಾಗಗಳಿಂದ ಐಗೂರಿಗೆ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಮತ್ತು ಸಂಜೆ ಶಾಲಾ ವೇಳೆಗೆ ತಲುಪಲು ಬಸ್‌ಗಳ ಕೊರತೆ, ಕಾಜೂರು ಶಾಲೆಯಲ್ಲಿ ಆಂಗ್ಲ ಮಾಧ್ಯಮದ ಯುಕೆಜಿ ತರಗತಿಗಳಿಗೆ ಹೆಚ್ಚುವರಿ ಕೊಠಡಿಗಳ ನಿರ್ಮಾಣ, ಯಡವನಾಡಿನ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಪ್ರಾರಂಭದಿAದಲೂ ಆಟದ ಮೈದಾನದ ಕೊರತೆ, ಎಡವಾರೆ ಶಾಲೆಯಲ್ಲಿ ಓದುತ್ತಿರುವ ಪೋಷಕರಿಲ್ಲದ ಮಕ್ಕಳ ಸಮಸ್ಯೆ ಮತ್ತು ಐಗೂರು ಪ್ರೌಢಶಾಲೆಯ ಶೌಚಾಲಯ ನಿರ್ಮಾಣದ ಬಗ್ಗೆ ಶಾಲಾ ಮಕ್ಕಳಿಂದ ಅಹವಾಲು, ಸಮಸ್ಯೆಗಳ ಕುರಿತು ಮಾಹಿತಿಯನ್ನು ನೀಡಿದರು.

ಪಿ.ಡಿ.ಓ. ಪೂರ್ಣ ಕುಮಾರ್ ಮಾತನಾಡಿ ಪಂಚಾಯಿತಿಯಲ್ಲಿ ಆದಾಯದ ಕೊರತೆಯಿದ್ದು, ಬಗೆಹರಿಯದ ಸಮಸ್ಯೆಗಳನ್ನು ತಾಲೂಕು ಪಂಚಾಯಿತಿಗೆ ಶಿಫಾರಸು ಮಾಡಲಾಗುವದೆಂದರು. ಮುಖ್ಯ ಶಿಕ್ಷಕ ಯಶವಂತ ಕುಮಾರ್ ಸ್ವಾಗತಿಸಿ ವಂದಿಸಿದರು.

ಕಾರ್ಯಕ್ರಮದಲ್ಲಿ ಐಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನೋದ್, ಉಪಾಧ್ಯಕ್ಷ ಗೌರಮ್ಮ, ಶಿಶು ಅಭಿವೃದ್ಧಿ ಇಲಾಖೆಯ ಸಾವಿತ್ರಮ್ಮ, ಪಂಚಾಯಿತಿ ಸದಸ್ಯರು, ಪಿ.ಡಿ.ಓ. ಪೂರ್ಣ ಕುಮಾರ್, ಸಿ.ಎಂ.ಸಿ.ಎ. ಮರುಳಪ್ಪ, ನಾವು ಪ್ರತಿಷ್ಠಾನದ ಗೌತಮ್, ಸುಮನ್, ಸಂಪನ್ಮೂಲ ವ್ಯಕ್ತಿ ಗಿರೀಶ್, ಪ.ಪೂ. ಕಾಲೇಜಿನ ಪ್ರಾಂಶುಪಾಲ ಉಮೇಶ್, ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಯಶವಂತ್, ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜು, ಗ್ರಂಥಪಾಲಕ ಮೊಣ್ಣಪ್ಪ, ಎಲ್ಲಾ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕಿಯರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.