ಮಡಿಕೇರಿ, ಜ. ೨೨: ಕೊಡಗು ಹಾಗೂ ಮೈಸೂರಿನಲ್ಲಿ ಕರಿಛಾಯೆ ಉಳಿಸಿ ಮರೆಯಾಗಿರುವ ಟಿಪ್ಪು ಸುಲ್ತಾನ್ ಕುರಿತು ಪುಸ್ತಕ ಬರೆದು ಬಿಡುಗಡೆ ಮಾಡಿದ ಡಾ|| ವಿಕ್ರಂ ಸಂಪತ್, ಭವ್ಯ ಪರಂಪರೆಯುಳ್ಳ ಕೊಡಗಿನ ಚರಿತ್ರೆಯನ್ನು ಸಂಶೋಧಿಸಿ ಬರೆಯುವುದಾಗಿ ಹೇಳಿದ್ದಾರೆ.
ನಿನ್ನೆದಿನ ಗೋಣಿಕೊಪ್ಪಲಿನಲ್ಲಿ ಟಿಪ್ಪು ಕುರಿತ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಸಂಸದ ಯದುವೀರ್, ತನ್ನ ವಿಶಿಷ್ಟ ಸಂಸ್ಕೃತಿ, ಶೌರ್ಯ ಹಾಗೂ ಶಿಸ್ತಿನ ಪರಂಪರೆಯೊAದಿಗೆ ಭಾರತವನ್ನು ಶ್ರೀಮಂತ ಮಾಡಿರುವ ಕೊಡಗಿನ ಕುರಿತು ಅಗತ್ಯವಾಗಿ ಸತ್ಯಾಧಾರಿತ ಚರಿತ್ರೆ ಸಾರುವ ಪುಸ್ತಕ ಹೊರಬರಬೇಕೆಂದು ಆಶಿಸಿದರು. ಈ ಕಾರ್ಯವನ್ನು ಡಾ|| ವಿಕ್ರಂ ಸಂಪತ್ ಮಾಡುವಂತಾಗಲಿ ಎಂದು ಬಯಸಿದರು.
ಸಭೆಯ ಬಳಿಕ ಸಂಪತ್ ಅವರನ್ನು ‘ಶಕ್ತಿ’ ಈ ಕುರಿತು ಪ್ರಶ್ನಿಸಿತು. ಜಿಲ್ಲೆಯ ಭವ್ಯ ಹಿನ್ನೆಲೆ ಕುರಿತು, ಟಿಪ್ಪು ಚಾಚಿದ ಕರಾಳ ಹಸ್ತದ ಕುರಿತು ಖಂಡಿತವಾಗಿಯೂ ಸಂಶೋಧಿಸಿ ಪುಸ್ತಕ ಹೊರತರುವೆ ಎಂದು ಸಂಪತ್ ನುಡಿದರು. ಅಧ್ಯಯನಕ್ಕೆ ಕೊಡಗಿನ ಮಂದಿ ಸಹಕರಿಸುವಂತೆ ಕೇಳಿಕೊಂಡರು.
ಒಬ್ಬ ಬರಹಗಾರನೇ ಅಲ್ಲದ ತಾನು ಹೇಗೆ ಚರಿತ್ರೆ ಸಂಶೋಧನೆಗೆ ತೊಡಗಿದೆ ಎಂದು ಸಂಪತ್ ಸಭೆಯಲ್ಲಿ ಮನಬಿಚ್ಚಿ ಮಾತನಾಡಿದರು. ಮೈಸೂರು ಮಹಾರಾಜರ ಕುಟುಂಬದ ಸಂಪರ್ಕವೇ ಇಲ್ಲದ ತಾನು ‘‘ಸ್ವೋರ್ಡ್ ಆಫ್ ಟಿಪ್ಪು’’ ಸಿನೆಮಾದಲ್ಲಿ ಮೈಸೂರು ಅರಸರ ಬೆಲೆವುಳ್ಳ ಚರಿತ್ರೆಯನ್ನು ಲಘುವಾಗಿ, ಹಾಸ್ಯಾಸ್ಪದವಾಗಿ, ಚರಿತ್ರೆ ತಿರುಚಿ ಬಿಂಬಿಸಿದುದನ್ನು ಕಂಡು ಕ್ರುದ್ಧನಾದೆ. ಸಂಶೋಧನೆಗೆ ತೊಡಗಿದೆ. ಆ ಸಂದರ್ಭದಲ್ಲಿ ನಾನು ಈ ಕುರಿತು ಬೆಂಗಳೂರಿನಲ್ಲಿ ಸಮಾರಂಭ ಒಂದರಲ್ಲಿ ಭಾಷಣಕ್ಕೆ ತೆರಳಿದಾಗ ಟಿಪ್ಪು ಅಭಿಮಾನಿಗಳು ದೊಂಬಿ ಎಬ್ಬಿಸಿದರು. ಕಲ್ಲೆಸೆದರು. ಸಭೆ ನಡೆಸಲು ಬಿಡಲಿಲ್ಲ. ‘‘ನಿಮ್ಮ ಪುತ್ರ ಜೀವದಲ್ಲಿ ಇರಬೇಕಾದರೆ, ಆತ ಟಿಪ್ಪು ಕುರಿತು ಬರೆಯಕೂಡದು. ಮಾತನಾಡ ಕೂಡದು ಎಂದು ಸಭೆಯಲ್ಲಿ ಕುಳಿತಿದ್ದ ಅವರ
(ಮೊದಲ ಪುಟದಿಂದ) ತಂದೆಗೆ ಬೆದರಿಸಿದರು. ಇಂಗ್ಲೀಷ್ ಪತ್ರಿಕೆಯೊಂದರಲ್ಲಿ ಲೇಖನ ಬರೆದಾಗ ಬೆಂಗಳೂರು ಎಂ.ಜಿ. ರಸ್ತೆಯಲ್ಲಿರುವ ಪತ್ರಿಕಾ ಕಚೇರಿಯೆದುರು ಭಾರೀ ಪ್ರತಿಭಟನೆ ನಡೆಸಿದರು. ಗಲಭೆಗಳಿಂದ ಬೆದರಿದ ಅವರ ತಾಯಿ ‘‘ತಾನೆಂದೂ ಈ ಕುರಿತು ಭಾಷಣ ಮಾಡುವುದಿಲ್ಲ, ಪುಸ್ತಕ ಬರೆಯುವುದಿಲ್ಲ’’ ಎಂದು ಭಾಷೆ ಪಡೆದರು. ೨೦೧೮ರಲ್ಲಿ ತಾಯಿ ಅಸುನೀಗಿದ ಬಳಿಕ ನೀಡಿದ ಭಾಷೆಗೆ ಇನ್ನು ಅರ್ಥವಿಲ್ಲ ಎಂದು ತೀರ್ಮಾನಿಸಿ ಪುಸ್ತಕ ಬರೆದೆ ಎಂದರು.
ಸಭೆಯಲ್ಲಿ ಯದುವೀರ್ ತಂದೆ
ಪರಿಮಳ ವಿಹಾರದಲ್ಲಿ ಸೇರಿದ್ದ ಆಹ್ವಾನಿತ ಸಭಿಕರ ನಡುವೆ ಎದುರು ಸಾಲಿನಲ್ಲಿ ಇವರೂ ಕುಳಿತಿದ್ದರು. ‘‘ಅವ್ರು ಯದುವೀರ್ ಅವ್ರ ತಂದೆ ಇರಬೇಕು’’ ಎಂದು ಬೊಳ್ಳಜೀರ ಅಯ್ಯಪ್ಪ ಹೇಳಿದರು. ನಾನು ನೇರವಾಗಿ ಅವರ ಬಳಿ ಹೋದಾಗ, ಅಲ್ಲಿಯೇ ಇದ್ದ ಸಂಸದ ಯದುವೀರ್ ‘‘ಬನ್ನಿ, ತಂದೆಯನ್ನು ಪರಿಚಯಿಸುವೆ’’ ಎಂದರು.
ಸರಳ ಜೀವಿ. ಹೆಸರು ಸ್ವರೂಪ್ ಆನಂದ್ ಗೋಪಾಲ್ರಾಜ್ ಅರಸ್. ‘‘ಆದ್ರೆ ನನ್ನ ಎಲ್ರೂ ಸ್ವರೂಪ್ ಅಂತ ಕರೀತಾರೆ ಎಂದ ಅವರು, ನಾವು ಕುಳಿತಿದ್ದಲ್ಲಿಗೇ ಎದ್ದು ಬಂದರು. ಸ್ವರೂಪ್ ಅವರಿಗೆ ಯದುವೀರ್ ಜೊತೆ ಮತ್ತೊಬ್ಬಳು ಪುತ್ರಿಯಿದ್ದು, ಆಕೆ ಮಧ್ಯಪ್ರದೇಶದ ರಾಜಮನೆತನ ವೊಂದನ್ನು ಸೇರಿದ್ದಾರೆ. ಯದುವೀರ್ಗೆ ಇಪ್ಪತ್ತೊಂದು ವಯಸ್ಸು ತುಂಬಿದಾಗ ಅರಸರ ಕುಟುಂಬ ದತ್ತು ಸ್ವೀಕರಿಸುತ್ತದೆ. ಯದುವೀರ್ ಒಡೆಯರ್ ಆಗಿ ಅರಸರ ಪೀಠ ಅಲಂಕರಿಸುತ್ತಾರೆ. ನಿಮ್ಮ ಏಕೈಕ ಪುತ್ರ ಅರಮನೆ ಸೇರಿದ್ದು, ಕುಟುಂಬದಲ್ಲಿ ಅವರಿಲ್ಲ ಎಂಬ ಕೊರಗು ಇದೆಯೇ ಎಂದು ‘ಶಕ್ತಿ’ ಪ್ರಶ್ನಿಸಿತು. ಹಾಗೇನೂ ಇಲ್ಲ, ಅರಮನೆಯಿಂದ ಮೂರು ಕಿಲೋಮೀಟರ್ ದೂರದಲ್ಲೇ ನನ್ನ ಮನೆಯಿದೆ. ಆಗಿಂದಾಗ್ಗೆ ಭೇಟಿ ಆಗುತ್ತೇವೆ ಎಂದು ಸ್ವರೂಪ್ ಹೇಳಿದರು. ಅವರು ಸುಮಾರು ನಲವತ್ತು ವರುಷಗಳಿಂದ ವಾಣಿ ಜ್ಯೋದ್ಯಮಿಯಾಗಿದ್ದು, ಬೆಂಗಳೂರು - ಮೈಸೂರು ನಡುವೆ ಓಡಾಡುತ್ತಾರೆ. ಮಗ ಅರಸ ಆದ ಎಂದು ನನ್ನಲ್ಲಿ ನನ್ನ ವ್ಯವಹಾರದಲ್ಲಿ ಏನೂ ಬದಲಾ ಗಿಲ್ಲ ಎನ್ನುವ ಅವರು ‘‘ನನ್ಜೀವನ ನನ್ಗೆ, ಅವ್ನ ಜೀವನ ಅವನ್ಗೆ ಎಂದು ಹೇಳಿ ನಕ್ಕರು. ಯದುವೀರ್ ದಂಪತಿಗೆ ಇಬ್ಬರು ಪುತ್ರರ ಜನನವಾಗಿದ್ದು, ರಾಜಮನೆತನದ ೫೦-೬೦ ವರುಷದಲ್ಲಿ ಪ್ರಥಮ ಬಾರಿಗೆ ಮಕ್ಕಳ ಜನನವಾದುದು ಅತ್ಯಂತ ಸಂತಸದ- ಸಂಭ್ರಮದ ವಿಷಯ ಎಂದು ಸ್ವರೂಪ್ ಹೇಳಿದರು. ಎಲ್ಲವೂ ದೈವೇಚ್ಛೆ, ಅದರಂತೆ ಎಲ್ಲವೂ ನಡೆಯುತ್ತದೆ ಎಂದು ಮಾತಿಗೆ ವಿರಾಮ ಹಾಕಿದರು. -ಬಿ.ಜಿ. ಅನಂತಶಯನ.