ಮುಳ್ಳೂರು, ಜ. ೨೨: ಜಾತ್ರೋತ್ಸವಗಳು ಸಂಸ್ಕೃತಿಯ ಪ್ರತೀಕ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ಹಂಡ್ಲಿ ಗ್ರಾ.ಪಂ.ಗೆ ಸೇರಿದ ಗುಡುಗಳಲೆ ಜಾತ್ರಾ ಮೈದಾನದಲ್ಲಿ ನಡೆಯುತ್ತಿರುವ ೮೧ನೇ ವರ್ಷದ ಗುಡುಗಳಲೆ ಜಯದೇವ ಜಾನುವಾರುಗಳ ಜಾತ್ರೆಯ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಹಿಂದೆ ಈಗಿನಂತೆ ಮನರಂಜನೆಗಾಗಿ ಮಾಧ್ಯಮ ಸಂಪರ್ಕ ಸಾಧನಗಳು ಇಲ್ಲದಂತಹ ಕಾಲದಲ್ಲಿ ಸುಗ್ಗಿಯ ಕಾಲದಲ್ಲಿ ಜಾತ್ರೆ, ಉತ್ಸವಗಳನ್ನು ಆಚರಣೆ ಮಾಡುವ ಮೂಲಕ ಜನರಿಗೆ ಸಾಂಸ್ಕೃತಿಕ ಮನರಂಜನೆಯ ಜೊತೆಯಲ್ಲಿ ವಿಚಾರ ವಿನಿಮಯಗಳಾಗುತ್ತಿದ್ದವು. ಆದರೆ ಇಂದಿನ ವೈಜ್ಞಾನಿಕ ಭರಾಟೆಯಲ್ಲಿ ಹಿಂದಿನ ಜಾತ್ರೋತ್ಸವಗಳ ವೈಭವ ಮರೆಯಾಗುತ್ತಿದೆ. ಗುಡುಗಳಲೆ ಜಾನುವಾರುಗಳ ಜಾತ್ರೆಯಲ್ಲಿ ಜಾನುವಾರುಗಳು ಸೇರುವುದು ಕಡಿಮೆಯಾಗುತ್ತಿದ್ದರೂ ಜಾತ್ರಾ ಸಮೀತಿಯವರು ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾತ್ರೆಯನ್ನು ನಶಿಸಲು ಬಿಡುತ್ತಿಲ್ಲ; ಇದು ಶ್ಲಾಘನಿಯ ಬೆಳವಣಿಗೆ ಎಂದರು.
ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿ, ಇಂದು ಎಲ್ಲರೂ ವಿದ್ಯಾವಂತರಾಗುತ್ತಿದ್ದಾರೆ ಮತ್ತು ಸಮಾಜ ವೈಜ್ಞಾನಿಕವಾಗಿಯೂ ಬೆಳವಣಿಗೆಯಾಗುತ್ತಿದೆ. ಆದರೆ ಸಂಸ್ಕಾರ ಕಡಿಮೆಯಾಗುತ್ತಿದೆ; ಮನೆಯಲ್ಲಿ ಮಕ್ಕಳು ವಿದ್ಯಾವಂತರಾಗುತ್ತಿದ್ದರೆ, ಮನೆಯ ಹಿರಿಯರು ವೃದ್ಧಾಶ್ರಮ ಸೇರಿಕೊಳ್ಳುತ್ತಿರುವುದು ದುರಂತ ಎಂದರು. ಜಾನುವಾರುಗಳ ಜಾತ್ರೆ ಜನವಾರು ಜಾತ್ರೆಗಳಾಗಿ ಮಾರ್ಪಾಡಾಗುತ್ತಿರುವ ಸಮಯದಲ್ಲಿ ಜಾತ್ರಾ ಸಮಿತಿಯವರು ಜಾತ್ರೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಶ್ಲಾಘನಿಯ ಎಂದರು.
ಕಲ್ಲಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಮಾತನಾಡಿ, ಯುವಕರು ದುಶ್ಚಟಗಳಿಗೆ ಬಲಿಯಾಗದೆ ತನ್ನ ಧರ್ಮ, ಧಾರ್ಮಿಕ ಸಂಸ್ಕೃತಿಗೆ ಲಕ್ಷö್ಯ ನೀಡಿದರೆ ವ್ಯಕ್ತಿ ಸಂಸ್ಕಾರಗೊಳ್ಳುವುದರ ಜೊತೆಯಲ್ಲಿ ಸಮಾಜ ಸಂಸ್ಕಾರಗೊಳ್ಳುತ್ತದೆ ಎಂದರು.
ಜಾತ್ರಾ ಸಮೀತಿ ಅಧ್ಯಕ್ಷ ಎಚ್.ಎಸ್.ಅಶೋಕ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾತ್ರೆಗೆ ಹಿಂದಿನ ವೈಭವವನ್ನು ಮರುಕಳಿಸಲು ಪ್ರಯತ್ನಿಸುವ ಕಾರ್ಯದಲ್ಲಿ ಜಾತ್ರಾ ಸಮಿತಿಗೆ ಗ್ರಾಮಸ್ಥರು ಮತ್ತು ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು.
ಸಮಾರಂಭವನ್ನು ಶನಿವಾರಸಂತೆ ಎಸ್ಐ ಎಚ್.ವೈ.ಚಂದ್ರ ಉದ್ಘಾಟಿಸಿ ಶುಭ ಕೋರಿದರು. ವೇದಿಕೆಯಲ್ಲಿ ಜಾತ್ರಾ ಸಮಿತಿ ಉಪಾಧ್ಯಕ್ಷೆ ಚೈತ್ರ, ಕಾರ್ಯದರ್ಶಿ ಎಸ್.ಆರ್. ವೀರೇಂದ್ರಕುಮಾರ್, ಹಂಡ್ಲಿ ಗ್ರಾ.ಪಂ. ಅಧ್ಯಕ್ಷೆ ಸುಧಾ ಹಿರೇಶ್, ಸದಸ್ಯೆ ಮಹದೇವಮ್ಮ, ಶನಿವಾರಸಂತೆ ಗ್ರಾ.ಪಂ. ಅಧ್ಯಕ್ಷೆ ಗೀತಾ ಹರೀಶ್, ದುಂಡಳ್ಳಿ ಗ್ರಾ.ಪಂ. ಸದಸ್ಯೆ ಪೂರ್ಣಮಾ ಕಿರಣ್, ತಾ.ಪಂ. ಮಾಜಿ ಸದಸ್ಯ ಕುಶಾಲಪ್ಪ, ಹಂಡ್ಲಿ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಚಿದಾನಂದ್, ಪ್ರಮುಖರಾದ ಉಮಾಶಂಕರ್, ಎಚ್.ಎಸ್. ಸಂದೀಪ್, ಸೋಮಶೇಖರ್, ಜಾತ್ರಾ ಸಮೀತಿಯ ಸರ್ವ ಸದಸ್ಯರು ಹಾಜರಿದ್ದರು.
ಜಾತ್ರೆ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಗುಡುಗಳಲೆ ಯಲ್ಲಿನ ಶ್ರೀ ಬಸವೇಶ್ವರ ದೇವಸ್ಥಾನದಿಂದ ವಾದ್ಯಗೋಷ್ಠಿಯೊಂದಿಗೆ ಶ್ರೀ ಬಸವಣ್ಣ ದೇವರ ಉತ್ಸವ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಇರಿಸಿ ವೀರಗಾಸೆ, ನಂದಿಧ್ವಜ ಕುಣಿತದೊಂದಿಗೆ ಸುಮಂಗಲಿಯರಿAದ ಕಳಸ ಮೆರವಣಿಗೆ ಮತ್ತು ಮೆರವಣಿಗೆಯಲ್ಲಿ ಅಲಂಕರಿಸಿದ ಬಸವವೊಂದನ್ನು ಕರೆತಂದು ಜಾತ್ರಾ ಮೈದಾನವನ್ನು ಪ್ರವೇಶಿಸಲಾಯಿತು. ಈ ಸಂದರ್ಭ ಜಾತ್ರಾ ಪ್ರವೇಶದ್ವಾರವನ್ನು ಕುಶಾಲನಗರ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್ ಉದ್ಘಾಟಿಸಿದರು. -ಭಾಸ್ಕರ್ ಮುಳ್ಳೂರು