ಸಿದ್ದಾಪುರ, ಜ. ೨೩: ಬ್ಯಾಂಕ್ ಸಿಬ್ಬಂದಿ ಬ್ಯಾಂಕ್ ಖಾತೆದಾರನ ಹಣವನ್ನು ಎಗರಿಸಿರುವ ಘಟನೆ ಸಿದ್ದಾಪುರದಲ್ಲಿ ನಡೆದಿದೆ.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಸಿದ್ದಾಪುರ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬ್ಯಾಂಕಿನ ಸಿಬ್ಬಂದಿ ರಕ್ಷಿತ್ ಎಂಬಾತ ಖಾತೆದಾರರ ಖಾತೆಯಿಂದ ಸುಮಾರು ಒಂದು ಲಕ್ಷದ ಎಂಬತ್ತು ಸಾವಿರ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದು, ಈ ಬಗ್ಗೆ ಬ್ಯಾಂಕ್ನವರು ತನಿಖೆ ಕೈಗೊಂಡಾಗ ಹಣ ದುರುಪಯೋಗ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಕೆಡಿಸಿಸಿ ಬ್ಯಾಂಕಿನ ಸಿದ್ದಾಪುರ ಶಾಖೆಯ ವ್ಯವಸ್ಥಾಪಕರು ಸಿದ್ದಾಪುರ ಠಾಣೆಗೆ ದೂರು ನೀಡಿದ ಮೇರೆಗೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇತ್ತೀಚೆಗಷ್ಟೇ ವಾಲ್ನೂರು ಗ್ರಾಮದ ಯೂನಿಯನ್ ಬ್ಯಾಂಕಿನಲ್ಲಿ ಸಹಾಯಕ ವ್ಯವಸ್ಥಾಪಕ ಬ್ಯಾಂಕಿನ ಎಟಿಎಂನಿAದ ಹಣ ಎಗರಿಸಿದ ಘಟನೆ ಮಾಸುವ ಮುನ್ನವೇ ಇದೀಗ ಗ್ರಾಹಕರ ಖಾತೆಯಿಂದ ಬ್ಯಾಂಕ್ ಸಿಬ್ಬಂದಿ ಹಣ ದುರುಪಯೋಗ ಪಡಿಸಿರುವುದು ಬೆಳಕಿಗೆ ಬಂದಿದೆ. ಕೆಡಿಸಿಸಿ ಬ್ಯಾಂಕಿನಲ್ಲಿ ಹಣ ದುರುಪಯೋಗ ಪಡಿಸಿದ ಸಿಬ್ಬಂದಿ ಯನ್ನು ಬ್ಯಾಂಕಿನವರು ಅಮಾನತು ಗೊಳಿಸಿರುವುದಾಗಿ ತಿಳಿದು ಬಂದಿದೆ.ಈ ಹಿಂದೆ ಇದೇ ಬ್ಯಾಂಕಿನಲ್ಲಿ ಪಿಗ್ಮಿ ಹಣ ಸಂಗ್ರಹಿಸುತ್ತಿದ್ದ ವ್ಯಕ್ತಿ ಹಲವರಿಗೆ ಪಂಗನಾಮ ಹಾಕಿ ಪರಾರಿಯಾಗಿರುವ ಘಟನೆ ನಡೆದಿತ್ತು.