ಮಡಿಕೇರಿ, ಫೆ. ೧: ಏಳು ದಿನಗಳ ಕೊಡವಾಮೆ ಬಾಳೋ ಪಾದಯಾತ್ರೆ ತಾ. ೨ ರಿಂದ (ಇಂದಿನಿAದ) ಕುಟ್ಟದಿಂದ ಆರಂಭಗೊಳ್ಳಲಿದೆ.

ಕೊಡವ - ಭಾಷಿಕ ಸಮುದಾಯಗಳ ಸಂಸ್ಕೃತಿ ಆಚಾರ - ವಿಚಾರಗಳ ಮೇಲೆ ಆಗುತ್ತಿರುವ ದಬ್ಬಾಳಿಕೆ, ಸಮುದಾಯದವರ ಕಡೆಗಣನೆ ಮತ್ತಿತರ ಅಸಮಾಧಾನಗಳನ್ನು ಪ್ರತಿಬಿಂಬಿಸಿ ಸರಕಾರದ ಗಮನ ಸೆಳೆಯುವ ಸಲುವಾಗಿ ಅಖಿಲ ಕೊಡವ ಸಮಾಜದ ಬ್ಯಾನರ್ ಅಡಿಯಲ್ಲಿ ಈ ಪಾದಯಾತ್ರೆ ಕುಟ್ಟದಿಂದ ಮಡಿಕೇರಿತನಕ ನಡೆಯುತ್ತಿದೆ. ಭಾನುವಾರ ಕುಟ್ಟದಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಾಗುತ್ತಿದ್ದು, ಸಾವಿರಾರು ಮಂದಿ ಆರಂಭಿಕ ದಿನದಂದು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಶಿಸ್ತುಬದ್ಧವಾಗಿ ಈ ಪಾದಯಾತ್ರೆಯನ್ನು ಯಶಸ್ಸುಗೊಳಿಸುವಲ್ಲಿ ಸಂಘಟಕರು ಸಾಕಷ್ಟು ತಯಾರಿ ಮಾಡಿಕೊಂಡಿದ್ದು, ವ್ಯಾಪಕ ಜನಬೆಂಬಲ ವ್ಯಕ್ತಗೊಂಡಿರುವುದು ವಿಶೇಷವಾಗಿದೆ.

ವಿವಿಧ ಕೊಡವ ಸಮಾಜ, ಸಂಘಟನೆ, ಸಂಘ - ಸಂಸ್ಥೆಗಳೂ, ವಿವಿಧ ಕುಟುಂಬಸ್ಥರು, ಮಹಿಳಾ ಸಂಘಗಳು, ಭಾಷಿಕ ಸಮುದಾಯದವರ ಸಾಮೂಹಿಕ ಪಾಲ್ಗೊಳ್ಳುವಿಕೆಯ ಈ ಪಾದಯಾತ್ರೆ ಒಂದು ರೀತಿಯಲ್ಲಿ ಸಂಚಲನ ಸೃಷ್ಟಿಸಿದಂತಾಗಿದ್ದು, ಐತಿಹಾಸಿಕ ಕಾರ್ಯಕ್ರಮ ಎಂಬAತೆ ನಡೆಯಲಿದೆ. ಮಾರ್ಗದುದ್ದಕ್ಕೂ ಶಾಂತಿಯುತವಾಗಿ ಪಾದಯಾತ್ರೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಆರಂಭಿಕ ದಿನ ತಕ್ಕ ಮುಖ್ಯಸ್ಥರು, ಸಮಾಜಗಳ ಪ್ರಮುಖರು, ಸಂಘಟನೆಯವರು ಸೇರಿ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಮೊದಲ ದಿನ ಕುಟ್ಟದಿಂದ ಟಿ. ಶೆಟ್ಟಿಗೇರಿಯತನಕ ೧೪ ಕಿ.ಮೀ. ಪಾದಯಾತ್ರೆ ಜರುಗಲಿದೆ.