ಮಡಿಕೇರಿ, ಫೆ. ೧: ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನ ವಿಚಾರ ಕೆಲ ಗೊಂದಲಕ್ಕೆ ಎಡೆಮಾಡಿಕೊಟ್ಟಿದ್ದು, ಸ್ಥಾನವನ್ನು ಅಧಿಕೃತಗೊಳಿಸುವ ನಿಟ್ಟಿನಲ್ಲಿ ಪಕ್ಷದ ಹೈಕಮಾಂಡ್‌ಗೆ ಜಿಲ್ಲೆಯಿಂದ ಮೂವರ ಹೆಸರುಗಳನ್ನು ಶಿಫಾರಸ್ಸು ಮಾಡಿರುವುದು ಕಮಲ ಪಾಳಯದಲ್ಲಿ ಚರ್ಚೆ ಹುಟ್ಟುಹಾಕಿದೆ.

ಜ. ೧೫ ರಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಚುನಾವಣಾಧಿಕಾರಿ ಸುಲೋಚನ್ ಭಟ್ ಹಾಗೂ ವೀಕ್ಷಕ ಮೋನಪ್ಪ ಭಂಡಾರಿ ನೇತೃತ್ವದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ, ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದ ಸಭೆಯಲ್ಲಿ ನಾಪಂಡ ರವಿಕಾಳಪ್ಪ ಸರ್ವಾನುಮತವನ್ನು ಪಡೆದು ಅವಿರೋಧವಾಗಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದರು. ಈ ಕುರಿತು ನಿರ್ಣಯ ಕೈಗೊಂಡು ಸಭೆಯಲ್ಲಿದ್ದ ೫೦ಕ್ಕೂ ಹೆಚ್ಚು ಮಂದಿ ಸಹಿ ಹಾಕಿ ಒಪ್ಪಿಗೆಯನ್ನೂ ಸೂಚಿಸಿದ್ದರು.

ಆದರೆ, ಆಯ್ಕೆ ಪ್ರಕ್ರಿಯೆ ಪಕ್ಷದ ಶಿಷ್ಟಾಚಾರದ ಪ್ರಕಾರ ಕ್ರಮಬದ್ಧವಾಗಿ ನಡೆದಿಲ್ಲ ಎಂಬ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಹಾಲಿ ಅಧ್ಯಕ್ಷ ನಾಪಂಡ ರವಿಕಾಳಪ್ಪ ಸೇರಿದಂತೆ ಅಧ್ಯಕ್ಷ ಸ್ಥಾನಕ್ಕೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಗುಮ್ಮಟಿರ ಕಿಲನ್ ಗಣಪತಿ ಹಾಗೂ ಜಿಲ್ಲಾ ಕಾರ್ಯದರ್ಶಿ ಐಕೊಳಂಡ ಪ್ರಶಾಂತ್ ಭೀಮಯ್ಯ ಈ ಮೂವರ ಹೆಸರನ್ನು ರಾಜ್ಯ ಬಿಜೆಪಿ ಹೈಕಮಾಂಡ್‌ಗೆ ಚುನಾವಣಾಧಿಕಾರಿ ಕಳುಹಿಸಿದ್ದಾರೆ.

ಅಡ್‌ಹಾಕ್ ಸಮಿತಿ

ಲೋಕಸಭಾ ಚುನಾವಣೆ ವೇಳೆಯಲ್ಲಿ ನಾಪಂಡ ರವಿಕಾಳಪ್ಪ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಅಡ್‌ಹಾಕ್ ಸಮಿತಿಯನ್ನು ರಚಿಸಲಾಗಿತ್ತು. ಅನಂತರ ಅವರೇ ಕಾರ್ಯಕಾರಿ ಮಂಡಳಿಯನ್ನು ರಚಿಸಿ ಕಳೆದ ೧೦ ತಿಂಗಳಿನಿAದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು.

ಈ ಸಮಿತಿ ವಿಸರ್ಜಿಸಿ ಅಧಿಕೃತ ಸಮಿತಿ ರಚನೆಗಾಗಿ ನಡೆದ ಸಭೆಯಲ್ಲಿ ರವಿಕಾಳಪ್ಪ ಮತ್ತೊಮ್ಮೆ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು. ಲೋಕಸಭಾ ಚುನಾವಣೆ ಸೇರಿದಂತೆ ಸಹಕಾರಿ ಸಂಘಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ರವಿಕಾಳಪ್ಪ ಅವರಿಗೆ ಮತ್ತಷ್ಟು ಬಲ ತಂದಿತ್ತು. ಇದರೊಂದಿಗೆ ಸಂಘಟನಾ ಪರ್ವ ಸದಸ್ಯತ್ವ ಅಭಿಯಾನಕ್ಕೂ ಶ್ರಮಿಸಿದ್ದು, ಬೆಂಬಲಕ್ಕೆ ಕಾರಣವಾಗಿತ್ತು.

ಆಯ್ಕೆಯಾಗಿದ್ದ ರವಿಕಾಳಪ್ಪ

ಕಳೆದ ತಿಂಗಳು ನಡೆದ ಸಭೆಯಲ್ಲಿ ರವಿಕಾಳಪ್ಪ ಅವರನ್ನು ಆಯ್ಕೆಗೊಳಿಸಿ ಘೋಷಿಸಲಾಗಿತ್ತು. ನಿಯಮದ ಪ್ರಕಾರ ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಆಕಾಂಕ್ಷಿಗಳ ಹೆಸರನ್ನು ಹೈಕಮಾಂಡ್‌ಗೆ ರವಾನಿಸಿ ಒಪ್ಪಿಗೆ ಪಡೆದುಕೊಳ್ಳಬೇಕಾಗಿತ್ತು. ಇದು ಉಲ್ಲಂಘನೆಯಾದ ಹಿನ್ನೆಲೆ ಮತ್ತೊಮ್ಮೆ ನಾಪಂಡ ರವಿಕಾಳಪ್ಪ, ಗುಮ್ಮಟಿರ ಕಿಲನ್ ಗಣಪತಿ, ಪ್ರಶಾಂತ್ ಭೀಮಯ್ಯ ಅವರ ಹೆಸರನ್ನು ಶಿಫಾರಸ್ಸು ಮಾಡಿ ಕಳುಹಿಸಲಾಗಿದೆ.

ಹಾಗಾಗಿ ಈ ಹಿಂದೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಘೋಷಣೆಯಾಗಿದ್ದ ರವಿಕಾಳಪ್ಪ ಅವರು ಅಧಿಕೃತವಾಗಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಕಾಯಬೇಕಾಗಿದೆ. ಬಿಜೆಪಿ ವಲಯದಲ್ಲೂ ರವಿಕಾಳಪ್ಪ ಅವರೇ ಮತ್ತೊಮ್ಮೆ ಅಧ್ಯಕ್ಷರಾಗುತ್ತಾರೆ ಎಂಬ ಪ್ರಬಲ ನಂಬಿಕೆ ಇದ್ದು, ಬಹುತೇಕವಾಗಿ ರವಿಕಾಳಪ್ಪ ಅಧ್ಯಕ್ಷರಾಗುವುದು ಖಚಿತ ಎಂಬ ಮಾತುಗಳಿವೆ. ಇದಕ್ಕೆ ಹೈಕಮಾಂಡ್ ಅಧಿಕೃತ ಮುದ್ರೆ ಒತ್ತಬೇಕಾಗಿದೆ.

ಬುಧವಾರ ರಾಜ್ಯದ ೨೩ ಜಿಲ್ಲೆಗಳ ಅಧ್ಯಕ್ಷ ಆಯ್ಕೆಗೊಳಿಸಿ ಚುನಾವಣಾಧಿಕಾರಿ ಕ್ಯಾ. ಗಣೇಶ್ ಕಾರ್ಣಿಕ್ ಆದೇಶ ಮಾಡಿದ್ದು, ಕೊಡಗಿನ ಅಧ್ಯಕ್ಷರ ಹೆಸರು ಇನ್ನೂ ಪ್ರಕಟಗೊಂಡಿಲ್ಲ. ಇದಕ್ಕೆ ಕೊಡಗಿನಲ್ಲಿ ನಡೆಯುತ್ತಿರುವ ಕೆಲ ವಿದ್ಯಮಾನಗಳು ಕಾರಣ ಎಂಬ ಮಾಹಿತಿಗಳು ಲಭ್ಯವಾಗಿವೆ.