ಸೋಮವಾರಪೇಟೆ, ಫೆ. ೧: ಸಾರ್ವಜನಿಕ ವಲಯದಲ್ಲಿ ಭಯಾತಂಕ ಸೃಷ್ಟಿಸಿದ್ದ ಕಾಜೂರು ಕರ್ಣ(೪೦ ವರ್ಷ) ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಇಂದು ನಸುಕಿನ ೪ ಗಂಟೆಯಿAದಲೇ ೬ ಸಾಕಾನೆಗಳೊಂದಿಗೆ ಆಪರೇಷನ್ ಕರ್ಣ ಆರಂಭಿಸಿದ ಅರಣ್ಯ ಇಲಾಖೆ, ೭.೪೦ರ ಸುಮಾರಿಗೆ ಕರ್ಣನಿಗೆ ಅರವಳಿಕೆ ನೀಡುವಲ್ಲಿ ಯಶ ಕಂಡಿದ್ದು, ಮಧ್ಯಾಹ್ನ ೧೨ ಗಂಟೆಯ ವೇಳೆಗೆ ದಿಗ್ಬಂಧನ ವಿಧಿಸಿ, ದುಬಾರೆ ಸಾಕಾನೆ ಶಿಬಿರಕ್ಕೆ ಸಾಗಿಸುವ ಮೂಲಕ ಯಶಸ್ವಿ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿತು.

ಕಳೆದೆರಡು ವರ್ಷಗಳಿಂದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಗೂರು, ಕಾಜೂರು, ಯಡವಾರೆ, ಸಜ್ಜಳ್ಳಿ, ಕೋವರ್ ಕೊಲ್ಲಿ, ಯಡವನಾಡು, ಬಾಣಾವರ ಭಾಗದಲ್ಲಿ ಓಡಾಡಿಕೊಂಡಿದ್ದ ಕಾಜೂರು ಕರ್ಣ, ಸ್ಥಳೀಯರು ಹಾಗೂ ಸಾರ್ವಜನಿಕರ ಮೇಲೆ ಆಗಾಗ್ಗೆ ಧಾಳಿ ನಡೆಸುತ್ತಿತ್ತು. ಕೋವರ್ ಕೊಲ್ಲಿ ಜಂಕ್ಷನ್ ನಿಂದ ಕಾಜೂರು ಜಂಕ್ಷನ್ ವರೆಗಿನ ಮಡಿಕೇರಿ-ಸೋಮವಾರಪೇಟೆ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಆತಂಕದಿAದ ಕೂಡಿತ್ತು. ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ರಸ್ತೆ ದಾಟುತ್ತಿದ್ದ ಕಾಡಾನೆ, ಈ ಸಮಯದಲ್ಲಿ ಎದುರಾಗುವ ವಾಹನಗಳ ಮೇಲೆ ದಾಳಿಗೆ ಮುಂದಾಗುತ್ತಿತ್ತು. ಇದರೊಂದಿಗೆ ಜನವಸತಿ ಪ್ರದೇಶಕ್ಕೆ ತೆರಳಿ ಮನಸೋಯಿಚ್ಛೆ ದಾಂಧಲೆ ನಡೆಸುತ್ತಿತ್ತು. ಮನೆಯ ಚಾವಣಿ, ವಾಹನಗಳ ಮೇಲೆ ಧಾಳಿಗೆ ಮುಂದಾಗುತ್ತಿದ್ದ ಆನೆಗೆ ಸ್ಥಳೀಯರು ರೌಡಿ ರಂಗ ಎಂದು ನಾಮಕರಣ ಮಾಡಿದ್ದರೆ, ಅರಣ್ಯ ಇಲಾಖೆಯವರು ಪ್ರೀತಿಯಿಂದ ಕಾಜೂರು ಕರ್ಣ ಎಂದು ಹೆಸರಿಟ್ಟಿದ್ದರು.

ಈ ಆನೆಯ ಉಪಟಳ ಅಧಿಕವಾಗುತ್ತಿದ್ದಂತೆ ಇಲಾಖೆಯ ಮೇಲಾಧಿಕಾರಿಗಳು, ಕಾಜೂರು ಕರ್ಣನನ್ನು ಸೆರೆಹಿಡಿಯಲು ಕಳೆದ ಒಂದೂವರೆ ತಿಂಗಳ ಹಿಂದೆಯೇ ಆದೇಶ ಮಾಡಿದ್ದರು. ಡಿಸಿಎಫ್ ಭಾಸ್ಕರ್ ಅವರು ಇಲಾಖೆಯ ಉನ್ನತಾಧಿಕಾರಿಗಳಿಗೆ ಕರ್ಣನ ಉಪಟಳದ ಬಗ್ಗೆ ಮಾಹಿತಿ ಒದಗಿಸಿ, ಸೆರೆಹಿಡಿಯುವ ಅವಶ್ಯಕತೆಯ ಬಗ್ಗೆ ಮನವರಿಗೆ ಮಾಡಿಕೊಟ್ಟರು. ಅಂತಿಮವಾಗಿ ಒಂದೂವರೆ ತಿಂಗಳ ಹಿಂದೆ ಕಾಡಾನೆಯನ್ನು ಸೆರೆಹಿಡಿಯಲು ಉನ್ನತಾಧಿಕಾರಿಗಳು ಆದೇಶಿಸಿದ್ದು, ಅದರಂತೆ ಯಶಸ್ವಿ ಕಾರ್ಯಾಚರಣೆ ನಡೆಸಲಾಯಿತು.

ಆಪರೇಷನ್ ಕರ್ಣ: ಇಲಾಖೆಯ ಅಧಿಕಾರಿಗಳಿಂದ ಆದೇಶ ಲಭಿಸುತ್ತಿದ್ದಂತೆ ಕಾರ್ಯಾಚರಣೆಗೆ ಮುಂದಾಗ ಅರಣ್ಯ ಇಲಾಖೆ, ಆಪರೇಷನ್ ಕರ್ಣನಿಗೆ ರೂಪುರೇಷೆ ಸಿದ್ಧಪಡಿಸಿತು. ಕಾಡಾನೆಯ ಚಲನ ವಲನದ ಬಗ್ಗೆ ನಿಗಾ ಇಟ್ಟ ಸಿಬ್ಬಂದಿಗಳು, ಆನೆಯ ಪ್ರತಿದಿನದ ಓಡಾಟವನ್ನು ಗಮನಿಸುತ್ತಿದ್ದರು.

ಈ ನಡುವೆ ೨೦ ದಿನಗಳ ಕಾಲ ಕಾಜೂರು ಕರ್ಣನ ಸುಳಿವು ಇಲಾಖೆಗೆ ಲಭಿಸಿರಲಿಲ್ಲ. ಆರ್.ಆರ್.ಟಿ. ಸಿಬ್ಬಂದಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳ ಕಣ್ತಪ್ಪಿಸಿಕೊಂಡು ಓಡಾಡುತ್ತಿದ್ದ ಕಾಡಾನೆ, ಕಳೆದ ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ೭ ದಿನಗಳ ಹಿಂದೆ ಕಣ್ಣಿಗೆ ಬಿದ್ದಿತು. ಅಲ್ಲಿಂದ ಪ್ರತಿ ದಿನ ಕಾಡಾನೆಯ ಹಿಂದೆ ಬಿದ್ದ ಸಿಬ್ಬಂದಿಗಳು, ಚಲನ ವಲನದ ಬಗ್ಗೆ ಇಂಚಿAಚೂ ಮಾಹಿತಿ ಸಂಗ್ರಹಿಸಿದರು. ಪ್ರತಿದಿನ ಯಡವನಾಡು ಅರಣ್ಯದಿಂದ ರಾತ್ರಿ ವೇಳೆ ಕಾಜೂರು ಟಾಟಾ ಕಾಫಿ ಎಸ್ಟೇಟ್‌ಗೆ ಆಗಮಿಸಿ, ಮಾರನೆ ದಿನ ಬೆಳಿಗ್ಗೆ ೭ ರಿಂದ ೭.೩೦ರ ಸಮಯದಲ್ಲಿ ರಾಜ್ಯ ಹೆದ್ದಾರಿ ದಾಟಿ ಮತ್ತೆ ಯಡವನಾಡು ಅರಣ್ಯಕ್ಕೆ ತೆರಳುವುದು ಕಾಜೂರು ಕರ್ಣನ ದಿನಚರಿಯಾಗಿತ್ತು. ಕಳೆದ ೧ ವಾರದಿಂದಲೂ ಇದೇ ಸಮಯವನ್ನು ಪಾಲಿಸುತ್ತಿದ್ದ ಕಾಡಾನೆಯನ್ನು ಸೆರೆಹಿಡಿಯಲು ಇಲಾಖೆ ಇಂದು ಮುಹೂರ್ತ ನಿಗದಿಪಡಿಸಿತ್ತು.

ದುಬಾರೆಯಿಂದ ೬ ಆನೆಗಳು: ಅದರಂತೆ ಇಲಾಖೆಯ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ, ದುಬಾರೆ ಸಾಕಾನೆ ಶಿಬಿರದಿಂದ ೬ ಆನೆಗಳನ್ನು ಕರೆಸಿಕೊಳ್ಳಲಾಯಿತು. ಅರವಳಿಕೆ ತಜ್ಞರ ತಂಡದೊAದಿಗೆ ಸೋಮವಾರಪೇಟೆ ಉಪ ವಲಯದ ೬೦ ಸಿಬ್ಬಂದಿಗಳನ್ನು ನಿಯೋಜಿಸಲಾಯಿತು. ಇದಕ್ಕೂ ಮುನ್ನ ಪೊಲೀಸ್ ಇಲಾಖೆ, ಪಶುವೈದ್ಯಕೀಯ ಇಲಾಖೆ, ವನ್ಯಜೀವಿ ವಿಭಾಗದ ನಾಮನಿರ್ದೇಶನ ಸದಸ್ಯರು, ಶಾಸಕರು, ಸ್ಥಳೀಯ ಸಾರ್ವಜನಿಕರಿಗೆ ನಿನ್ನೆ ಸಂಜೆ ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಲಾಗಿತ್ತು.

ಇಂದು ನಸುಕಿನ ವೇಳೆ ೪ ಗಂಟೆ ಸುಮಾರಿಗೆ ಕಾರ್ಯಾಚರಣೆಗೆ ಚಾಲನೆ ನೀಡಲಾಯಿತು. ಕಾಜೂರು ಜಂಕ್ಷನ್‌ಗೆ ಆಗಮಿಸಿದ ದುಬಾರೆ ಸಾಕಾನೆ ಶಿಬಿರದ ಕಾಡಾನೆಗಳಾದ ಪ್ರಶಾಂತ್, ಮಾರ್ತಾಂಡ, ಸುಗ್ರೀವ, ಶ್ರೀರಾಮ,ಹರ್ಷ,ಧನಂಜಯ, ಜೊತೆಗೆ ಅರವಳಿಕೆ ತಜ್ಞ ಡಾ. ರಮೇಶ್, ಡಿಸಿಎಫ್ ಭಾಸ್ಕರ್, ಎಸಿಎಫ್ ಗೋಪಾಲ್, ವಲಯ ಅರಣ್ಯಾಧಿಕಾರಿ ಶೈಲೇಂದ್ರಕುಮಾರ್ ಸೇರಿದಂತೆ ಸಿಬ್ಬಂದಿಗಳು ಕಾಜೂರು ಕರ್ಣನ ಆಗಮನಕ್ಕೆ ಕಾದು ಕುಳಿತಿದ್ದರು.

ನಿರೀಕ್ಷೆಯಂತೆ ೭.೩೦ರ ಸುಮಾರಿಗೆ ಟಾಟಾ ಕಾಫಿ ಎಸ್ಟೇಟ್‌ನಿಂದ ಯಡವನಾಡು ಅರಣ್ಯಕ್ಕೆ ತೆರಳಲೆಂದು ಕಾಜೂರು ರಾಜ್ಯಹೆದ್ದಾರಿಗೆ ಬರುತ್ತಿದ್ದಂತೆ ಅರಣ್ಯ ಇಲಾಖೆಯ ವಾಹನಗಳನ್ನು ಕಂಡ ಕಾಡಾನೆ ಆಕ್ರೋಶಗೊಂಡು ಇಲಾಖೆಯ ಜೀಪ್‌ನತ್ತ ನುಗ್ಗಿತು. ಇದೇ ಸಮಯದಲ್ಲಿ ೧೦ ಮೀಟರ್ ಒಳಗಿನ ಅಂತರದಲ್ಲಿ ಅರವಳಿಕೆ ತಜ್ಞ ಡಾ. ರಮೇಶ್ ಅವರು ಚುಚ್ಚುಮದ್ದು ರವಾನಿಸಿದರು.

ಈ ಸಂದರ್ಭ ಬೆದರಿದಂತೆ ಕಂಡುಬAದ ಕಾಡಾನೆ ಪಕ್ಕದ ಅರಣ್ಯದೊಳಗೆ ಓಡಿತು. ಸುಮಾರು ೧ ಕಿಲೋ ಮೀಟರ್ ಓಡಿದ ನಂತರ ಅರಣ್ಯದೊಳಗೆ ಪ್ರಜ್ಞೆ ತಪ್ಪಿ ಬಿದ್ದಿತು. ಕಾಡಾನೆಯನ್ನು ಬೆನ್ನಟ್ಟಿದ ೬ ಸಾಕಾನೆಗಳೊಂದಿಗೆ ಸಿಬ್ಬಂದಿಗಳು, ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಕಾಡಾನೆಗೆ ಸಾಕಾನೆಗಳ ಸಹಾಯದಿಂದ ಹಗ್ಗ ಬಿಗಿದು ದಿಗ್ಬಂಧನ ವಿಧಿಸಲಾಯಿತು. ಡಾ. ರಮೇಶ್ ಅವರು ಕಾಡಾನೆಯ ದೇಹಕ್ಕೆ ತಣ್ಣೀರು ಹಾಕಿ, ಪ್ರಜ್ಞೆ ಬರುವ ಔಷಧ ನೀಡಿದರು. ನಂತರ ಪ್ರಜ್ಞೆ ಗೊಂಡ ಕಾಡಾನೆ ಕರ್ಣ, ಕಣ್ ಬಿಟ್ಟಾಗ ಸುತ್ತಲೂ ೬ ಆನೆಗಳು, ಅಲುಗಾಡಲು ಆಗದಂತೆ ಹಗ್ಗ ಬಿಗಿದಿರುವುದು ತಿಳಿದು ಆಕ್ರೋಶ ಹೊರಹಾಕಿತು. ಆದರೆ ೬ ಸಾಕಾನೆಗಳು ಅತ್ತಿಂದಿತ್ತ ಕದಲದಂತೆ ಬಿಗಿಪಟ್ಟು ಹಾಕಿದ್ದವು. ಅರಣ್ಯದೊಳಗೆ ಜೆಸಿಬಿ ಸಹಾಯದಿಂದ ರಸ್ತೆ ನಿರ್ಮಿಸಿ, ಕಾಜೂರು ಕರ್ಣನನ್ನು ಅರಣ್ಯ ಇಲಾಖಾ ವಸತಿ ಗೃಹದ ಬಳಿಗೆ ಕರೆತರಲಾಯಿತು. ನಂತರ ಕ್ರೇನ್ ಸಹಾಯದಿಂದ ಲಾರಿಗೆ ಹತ್ತಿಸಿ ದುಬಾರೆ ಸಾಕಾನೆ ಶಿಬಿರಕ್ಕೆ ಸ್ಥಳಾಂತರಿಸಲಾಯಿತು.

ಹಿಂದೆ ಬಂದ ೬ ಆನೆಗಳು: ಕಾಜೂರು ಕರ್ಣನಿಗೆ ಅರವಳಿಕೆ ನೀಡಿದ ನಂತರ ಅರಣ್ಯದೊಳಗೆ ಓಡಿದ ಸಂದರ್ಭ ಅದನ್ನು ಹಿಂಬಾಲಿಸಿಕೊAಡು ಸಾಕಾನೆಗಳು, ಸಿಬ್ಬಂದಿಗಳು ತೆರಳಿದರು. ಇದೇ ಸಮಯಕ್ಕೆ ಟಾಟಾ ಕಾಫಿ ಎಸ್ಟೇಟ್ ನಿಂದ ಎರಡು ಮರಿಯಾನೆಗಳು ಒಳಗೊಂಡAತೆ ೬ ಕಾಡಾನೆಗಳು ಮುಖ್ಯರಸ್ತೆಯಲ್ಲಿ ಪ್ರತ್ಯಕ್ಷಗೊಂಡು ಕೆಲಕಾಲ ಆತಂಕ ಸೃಷ್ಟಿಸಿದ್ದವು. ನಂತರ ಅವುಗಳನ್ನು ಸಿಬ್ಬಂದಿಗಳು ಬೇರೆ ಮಾರ್ಗದ ಮೂಲಕ ಅರಣ್ಯಕ್ಕೆ ಅಟ್ಟಿದರು. ಬೆಳಿಗ್ಗೆ ೪ ಗಂಟೆಯಿAದ ಆರಂಭಗೊAಡ ಕಾರ್ಯಾಚರಣೆ ಮಧ್ಯಾಹ್ನ ೧೨ ಗಂಟೆಯ ಸುಮಾರಿಗೆ ಮುಕ್ತಾಯ ಗೊಂಡಿತು.

ಶಾಸಕ ಡಾ. ಮಂತರ್ ಗೌಡ ಮೆಚ್ಚುಗೆ: ಸಾರ್ವಜನಿಕರಿಗೆ ಉಪಟಳ ನೀಡುತ್ತಿದ್ದ ಕಾಡಾನೆಯನ್ನು ಯಶಸ್ವಿ ಕಾರ್ಯಾಚರಣೆ ಮೂಲಕ ಸೆರೆಹಿಡಿದ ಅರಣ್ಯ ಇಲಾಖಾ ಸಿಬ್ಬಂದಿಗಳು ಹಾಗೂ ಅಧಿಕಾರಿಗಳನ್ನು ಶಾಸಕ ಡಾ. ಮಂತರ್ ಗೌಡ ಅವರು ಶ್ಲಾಘಿಸಿದರು.

ಕಾರ್ಯಾಚರಣೆಯ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಶಾಸಕರು, ಸಿಬ್ಬಂದಿಗಳ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಭಾಗದಲ್ಲಿ ನಿರಂತರವಾಗಿ ಧಾಳಿ ನಡೆಸುತ್ತಿದ್ದ ಕಾಡಾನೆಯನ್ನು ಸೆರೆ ಹಿಡಿದು ಸ್ಥಳಾಂತರಿಸುವ ಮೂಲಕ ಅರಣ್ಯ ಇಲಾಖೆ ಉತ್ತಮ ಕಾರ್ಯ ಮಾಡಿದೆ. ಇದರೊಂದಿಗೆ ಕಾರ್ಯಾಚರಣೆ ಸಂದರ್ಭ ಯಾವುದೇ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಅಧಿಕಾರಿಗಳನ್ನು ಶ್ಲಾಘಿಸಿದರು.

ರಸ್ತೆ ಸಂಚಾರ ಬಂದ್: ಕಾಡಾನೆ ಕಾರ್ಯಾಚರಣೆ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿದರು. ಕಾಡಾನೆಯನ್ನು ವಾಹನಕ್ಕೆ ಹತ್ತಿಸುವ ಸಂದರ್ಭ ಹಾಗೂ ಉಳಿದ ೬ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಸಂದರ್ಭ ಮಡಿಕೇರಿ- ಸೋಮವಾರಪೇಟೆ ರಾಜ್ಯಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಪೊಲೀಸ್ ಸಿಬ್ಬಂದಿಗಳು ಸಂಚಾರ ವ್ಯವಸ್ಥೆ ಗಮನಿಸಿದರು. -ವಿಜಯ್ ಹಾನಗಲ್