ಸಿದ್ದಾಪುರ, ಫೆ. ೨: ಬಾಡಗ ಬಾಣಂಗಾಲ ಗ್ರಾಮದ ಘಟ್ಟದಳ್ಳದಲ್ಲಿ ಎಂ.ಸಿ. ಮುತ್ತಣ್ಣ ಎಂಬವರಿಗೆ ಸೇರಿದ ಕಾಫಿ ತೋಟದಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟು ದಾಂಧಲೆ ನಡೆಸುತ್ತಿದೆ.

ಕಾಡಾನೆಗಳು ಕಾಫಿ ತೋಟದೊಳಗೆ ಹತ್ತಕ್ಕೂ ಅಧಿಕ ಫಸಲಿರುವ ಅಡಿಕೆ ಮರ ಕಾಫಿ ಗಿಡಗಳನ್ನು ನಾಶಗೊಳಿಸಿದೆ. ಇದರಿಂದಾಗಿ ಅಪಾರ ನಷ್ಟ ಸಂಭವಿಸಿದೆ ಎಂದು ತೋಟದ ಮಾಲೀಕರು ತಿಳಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ತೋಟದ ಕಬ್ಬಿಣದ ಗೇಟನ್ನು ಹಾನಿಗೊಳಿಸಿದಲ್ಲದೆ ಕೃಷಿ ಪಸಲುಗಳನ್ನು ಧ್ವಂಸಗೊಳಿಸಿತ್ತು. ಶನಿವಾರದಂದು ರಾತ್ರಿ ಕಾಡಾನೆಗಳು ಅಡಿಕೆ ಫಸಲು ಧ್ವಂಸಗೊಳಿಸಿ ತೋಟವನ್ನು ಮೈದಾನದಂತೆ ಮಾಡಿದೆ. ನಿರಂತರ ಕಾಡಾನೆಗಳ ಹಾವಳಿಯಿಂದಾಗಿ ನೆಮ್ಮದಿ ಇಲ್ಲದಂತಾಗಿದೆ ಎಂದು ಬೆಳಗರಾದ ಎಂ.ಸಿ. ಮುತ್ತಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.

ಕಾಡಾನೆಗಳ ಉಪಟಳದಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತ ಪರಿಸ್ಥಿತಿ ನಿರ್ಮಾಣವಾಗಿದ್ದು ಬೆಳೆ ಹಾನಿಯಿಂದಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ. ಕಾಡಾನೆಗಳ ಹಾವಳಿಯಿಂದ ನಷ್ಟದೇ ಒಳಗಾದ ಬೆಳೆಗಾರರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಸೂಕ್ತ ಪರಿಹಾರವನ್ನು ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅಲ್ಲದೆ ಕಾಡಾನೆಗಳು ಉಪಟಳವನ್ನು ತಡೆಗಟ್ಟಲು ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.