ಪೆರಾಜೆ, ಫೆ. ೨: ಇಲ್ಲಿಯ ಶ್ರೀ ಶಾಸ್ತಾವು ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ರುದ್ರಯಾಗ ಹಾಗೂ ನೂತನ ರಾಜಗೋಪುರ ಉದ್ಘಾಟನ ಕಾರ್ಯಕ್ರಮ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಯವರ ನೇತ್ರತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ನಡೆಯಿತು. ಸಂಜೆ ಶಾಸ್ತಾವು ದೇವಸ್ಥಾನದ ಆವರಣದಲ್ಲಿ ದೇವಾಲಯದ ಆಡಳಿತ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ಜಿಲ್ಲೆಯ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ದೇವಾಲಯಗಳ ಅಭಿವೃದ್ಧಿಗೆ ಇನ್ನಷ್ಟು ಕೊಡುಗೆ ನೀಡಲು ನಾನು ಸದಾ ಬದ್ಧ , ಈ ಕ್ಷೇತ್ರದ ನೂತನ ರಾಜಗೋಪುರಕ್ಕೆ ಸರಕಾರದಿಂದ ಬಂದ ಅನುದಾನದ ಹಿಂದೆ ಪ್ರೊ.ರಾಧಾಕೃಷ್ಣ ಅವರ ಶ್ರಮ ಅಪಾರ. ಜಿಲ್ಲಾಧಿಕಾರಿಗಳ ಮೂಲಕ ಚರ್ಚಿಸಿ ಬರುವಂತೆ ಮಾಡಲಾಗುವುದು ಎಂದರು.
ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ದೇವಾಲಯ ಹಾಗೂ ಶಾಲೆ ಊರಿನ ಎರಡು ಕಣ್ಣುಗಳು. ದೇವಾಲಯ ಅಭಿವೃದ್ಧಿ ಆದರೆ ಊರಿನ ಅಭಿವೃದ್ಧಿಯಾಗುತ್ತದೆ. ಕೊಡಗಿನೊಂದಿಗೆ ನೆರೆಯ ಸುಳ್ಯ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿಗೂ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಅನುದಾನ ಒದಗಿಸಿಕೊಡುವಂತೆ ವಿರಾಜಪೇಟೆ ಶಾಸಕ ಪೊನ್ನಣ್ಣ ಅವರಲ್ಲಿ ಮನವಿ ಮಾಡಿದರು.
ಶಿಕ್ಷಣ ತಜ್ಞ ಪ್ರೊ.ರಾಧಾಕೃಷ್ಣ ಕೆ.ಇ ಮಾತನಾಡಿ ಕಾವೇರಿ ನದಿಯ ವಿರುದ್ಧ ದಿಕ್ಕಿನಲ್ಲಿ ಹರಿಯುವ ಪಯಸ್ವಿನಿ ನದಿಯ ತಟದಲ್ಲಿ ಇರುವ ಪೆರಾಜೆ ಕ್ಷೇತ್ರ ಅತ್ಯಂತ ಐತಿಹಾಸಿಕ ಕ್ಷೇತ್ರವಾಗಿದ್ದು ಇಲ್ಲಿ ಕೊಡಗು, ದ.ಕ, ಕೇರಳ ಸಂಗಮ ಸ್ಥಳವಾಗಿದ್ದು ಇಲ್ಲಿ ಎಲ್ಲಾ ಭಾಷೆಯ ದೈವಗಳಿವೆ. ಅವುಗಳನ್ನು ನಾವು ಉತ್ಸವದ ಸಮಯದಲ್ಲಿ ಕಾಣಬಹುದಾಗಿದೆ. ನಮ್ಮ ಗ್ರಾಮದಲ್ಲಿ ಮ್ಯೂಸಿಯಂ ಮಾಡಿ ಅಲ್ಲಿ ಹಲವಾರು ಮನೆತನಗಳ ಹಾಗೂ ಐನ್ಮನೆಗಳ ಇತಿಹಾಸವನ್ನು ಒದಗಿಸುವಂತೆ ಮಾಡಿದರೆ ಈ ಕ್ಷೇತ್ರ ಮುಂದೊAದು ದಿನ ಐತಿಹಾಸಿಕವಾಗಿರಲು ಸಾಧ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಜಿ ಶಾಸಕ ಕೆ.ಜಿ ಬೋಪಯ್ಯ ಮಾತನಾಡಿ ಪೆರಾಜೆ ಶಾಸ್ತಾವು ಕ್ಷೇತ್ರಕ್ಕೆ ಭಾಗಮಂಡಲ ಭಗಂಡೇಶ್ವರ ಹಾಗೂ ಶ್ರೀ ತಲಕಾವೇರಿ ಕ್ಷೇತ್ರಕ್ಕೆ ಧಾರ್ಮಿಕತೆಯಲ್ಲಿ ಅವಿನಾಭಾವ ಸಂಬAಧವಿದೆ. ದೇವಸ್ಥಾನದ ಒಳ ಪ್ರವೇಶಿಸಿದಾಗ ನಮ್ಮ ಕಲ್ಮಶಗಳು ದೂರವಾಗಿ ಭಕ್ತಿ ಹೆಚ್ಚುತ್ತದೆ. ದೇವಾಲಯಗಳ ಅಭಿವೃದ್ಧಿ ಮುಖಾಂತರ ಊರು ಒಗ್ಗಟ್ಟಾಗಲು ಸಾಧ್ಯವಿದೆ ಎಂದರು. ಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರು ಮಾತನಾಡಿದರು. ಈ ಸಂದರ್ಭದಲ್ಲಿ ಶಾಸಕರ ಮೂಲಕ ಸರ್ಕಾರದ ವತಿಯಿಂದ ಹತ್ತು ಲಕ್ಷ ಅನುದಾನ ಒದಗಿಸಲು ಶ್ರಮವಹಿಸಿದ ರಾಧಾಕೃಷ್ಣ ಕೆ.ಇ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಶ್ರೀ ತಲಕಾವೇರಿ ಕ್ಷೇತ್ರದ ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ, ಪೆರಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ಬಳ್ಳಡ್ಕ, ದೇವತಕ್ಕ ರಾಮಕಜೆ ರಾಜಗೋಪಾಲ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮಚೂರು, ಸಹ ಕಾರ್ಯದರ್ಶಿ ಅಡ್ಕದ ಚಿನ್ನಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದೇವಸ್ಥಾನದ ಆಡಳಿತ ಮೊಕ್ತೆಸರ ಜಿತೇಂದ್ರ ನಿಡ್ಯಮಲೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮಚೂರು ವಂದಿಸಿದರು.