ಸೋಮವಾರಪೇಟೆ, ಫೆ .೨: ಸಮೀಪದ ಅಬ್ಬೂರುಕಟ್ಟೆ ಗ್ರಾಮದ ಪ್ರಗತಿಪರ ಕೃಷಿಕ ಖಾಲಿಸ್ತ ಡಿಸಿಲ್ವ ಅವರ ಕಾಫಿ ತೋಟಕ್ಕೆ ಭಾರತ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ಭೇಟಿ ನೀಡಿ ಸಾವಯವ ಕೃಷಿಯ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭ ಜಾನ್‌ಸನ್ ಕಾಂಪೋಷ್ಟ್ ಉತ್ಪಾದನೆ ಮತ್ತು ಅದರ ಬಳಕೆಯ ಬಗ್ಗೆ ಕೃಷಿಕರು ಮಾಹಿತಿ ನೀಡಿದರು. ನಂತರ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಕಾಫಿ ತೋಟಗಳ ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿದ್ದು, ಹಲವೆಡೆಗಳಲ್ಲಿ ಸಾವಯವ ಕೃಷಿಯತ್ತ ರೈತರು ಮುಂದಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಸಾವಯವ ಕೃಷಿಯಿಂದ ಉತ್ತಮ ಗುಣಮಟ್ಟದ ಬೆಳೆ ಉತ್ಪಾದನೆಯಾಗುತ್ತದೆ. ಅಲ್ಲದೆ, ವಿದೇಶಗಳಲ್ಲಿಯೂ ಸಾವಯವ ಕೃಷಿಯಿಂದ ಬೆಳೆದ ಬೆಳೆಗೆ ಉತ್ತಮ ಮಾರುಕಟ್ಟೆ ಇದ್ದು, ರೈತರು ಸಾವಯವ ಕೃಷಿಯನ್ನು ಮಾಡಲು ಮುಂದಾಗಬೇಕೆAದರು.
ಮುAದಿನ ದಿನಗಳಲ್ಲಿ ಕೊಡಗು ಜಿಲ್ಲೆಯ ಚೆಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರ ಮತ್ತು ಬಾಳೆಹೊನ್ನೂರಿನ ಕಾಫಿ ಸಂಶೋಧನಾ ಕೇಂದ್ರಗಳಲ್ಲಿ ಕಾಂಪೋಷ್ಟ್ ಉತ್ಪಾದನೆ ಮತ್ತು ಅದರ ಬಳಕೆಯ ಬಗ್ಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಈ ಸಂದರ್ಭ ಚೆಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರದ ಕಿರಿಯ ಕಾಫಿ ಸಂಪರ್ಕಾಧಿಕಾರಿ ನಾಗರಾಜು, ಮೈಕ್ರೋ ಬಯಾಲಾಜಿಸ್ಟ್ ಸುಚಿತ್ರ ಹಾಗೂ ಕಾಫಿ ಬೆಳೆಗಾರರು ಇದ್ದರು.