ಸೋಮವಾರಪೇಟೆ, ಫೆ. ೨: ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ನೀಡಲಾಗುವ ಲ್ಯಾಪ್‌ಟಾಪ್‌ಗಳನ್ನು ಈ ವರ್ಷ ನೀಡದೇ ಇರುವುದು ವಿದ್ಯಾರ್ಥಿಗಳ ಪೋಷಕರ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರತಿ ವರ್ಷದ ಗಣರಾಜ್ಯೋತ್ಸವದಂದು ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ, ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಪ್ರಥಮ ಮೂರು ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಹಾಗೂ ತಾಲೂಕು ಮಟ್ಟದಲ್ಲಿ ಮೂವರು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡುವುದು ಶಿಕ್ಷಣ ಇಲಾಖೆಯ ವಿಶೇಷವಾದ ಕಾರ್ಯಕ್ರಮ.

ಈ ಕಾರ್ಯಕ್ರಮವನ್ನು ಇದುವರೆಗೂ ಸರಿಯಾಗಿ ನಿಭಾಯಿಸಿಕೊಂಡು ಬಂದ ಶಿಕ್ಷಣ ಇಲಾಖೆ, ಈ ಸಾಲಿನ ಗಣರಾಜ್ಯೋತ್ಸವದಲ್ಲಿ ಎಸ್‌ಎಸ್‌ಎಲ್‌ಸಿ ಟಾಪರ್‌ಗಳನ್ನು ನಿರಾಸೆಗೊಳಿಸಿದೆ.

ಜಿಲ್ಲಾ ಮಟ್ಟದಲ್ಲಿ ಟಾಪರ್‌ಗಳಾಗಿ ನಾಲ್ವರು ಲ್ಯಾಪ್‌ಟಾಪ್‌ಗೆ ಅರ್ಹರಾಗಿದ್ದರೆ, ತಾಲೂಕು ಮಟ್ಟದಲ್ಲಿ ಪ್ರತಿ ತಾಲೂಕಿನಿಂದ ಈರ್ವರನ್ನು ಗುರುತಿಸಿ, ಜಿಲ್ಲಾ ಮಟ್ಟದ ಗಣರಾಜ್ಯೋತ್ಸವದಲ್ಲಿ ಲ್ಯಾಪ್‌ಟಾಪ್ ನೀಡಿ ಸನ್ಮಾನಿಸಲು ಸಿದ್ದತೆಗಳನ್ನು ಕೈಗೊಳ್ಳಲಾಗಿತ್ತು. ಆದರೆ ಅಂತಿಮ ಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ನಿರಾಸೆ ಮೂಡಿಸಲಾಗಿದೆ.

ಲ್ಯಾಪ್‌ಟಾಪ್ ನೀಡುವ ಯೋಜನೆ ಸಾಧಕ ವಿದ್ಯಾರ್ಥಿಗಳಿಗೆ ಇನ್ನಷ್ಟು ಸಾಧನೆಗೆ ಪ್ರೋತ್ಸಾಹವಾದರೆ, ಇತರ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ನಾವುಗಳೂ ಇನ್ನಷ್ಟು ಸಾಧಿಸಬೇಕೆಂಬ ಛಲಕ್ಕೆ ವೇದಿಕೆಯನ್ನೂ ಒದಗಿಸುತ್ತದೆ. ಆದರೆ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಎಸ್‌ಎಸ್‌ಎಲ್‌ಸಿ ಟಾಪರ್‌ಗಳನ್ನು ಶಿಕ್ಷಣ ಇಲಾಖೆ ಕಡೆಗಣಿಸಿರುವ ಬಗ್ಗೆ ವಿದ್ಯಾರ್ಥಿಗಳ ಪೋಷಕರಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಕಳೆದ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಈ ಸಾಲಿನ ಗಣರಾಜ್ಯೋತ್ಸವದಲ್ಲಿ ಸನ್ಮಾನಿಸಿ, ಲ್ಯಾಪ್‌ಟಾಪ್ ವಿತರಿಸಲು ಸಿದ್ಧತೆ ಕೈಗೊಳ್ಳಲಾಗಿತ್ತು. ಜಿಲ್ಲಾ ಮಟ್ಟದಲ್ಲಿ ಸೋಮವಾರಪೇಟೆ ಸರ್ಕಾರಿ ಪೌಢಶಾಲೆಯ ಕೆ.ಹೆಚ್. ಸೌಜನ್ಯ (ಪ್ರಥಮ ರ‍್ಯಾಂಕ್), ವೀರಾಜಪೇಟೆ ಹೆಗ್ಗಳದ ಎಸ್. ಸ್ವಪ್ನಾ (ದ್ವಿತೀಯ ರ‍್ಯಾಂಕ್), ಚನ್ನಯ್ಯನಕೋಟೆ ಸರ್ಕಾರಿ ಶಾಲೆಯ ಎಸ್. ಪೂಜಾ ಹಾಗೂ ಮಡಿಕೇರಿಯ ವಿ.ಹೆಚ್. ಪ್ರೀತಿಕಾ(ತೃತೀಯ ರ‍್ಯಾಂಕ್) ಅವರುಗಳ ಹೆಸರನ್ನು ಅಂತಿಮಗೊಳಿಸಿ, ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡುವ ಬಗ್ಗೆ ಮಾಹಿತಿ ಒದಗಿಸಲಾಗಿತ್ತು.

ಅಂತೆಯೇ ತಾಲೂಕು ಮಟ್ಟದಲ್ಲಿಯೂ ಮೂವರು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಲು ಕ್ರಮ ಕೈಗೊಳ್ಳಲಾಗಿತ್ತು. ೨೦೨೩-೨೪ರ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಪಟ್ಟಿಯನ್ನು ಕಳುಹಿಸಿಕೊಡುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಜಿಲ್ಲಾ ಉಪ ನಿರ್ದೇಶಕರಿಗೆ ಸೂಚನೆ ನೀಡಿದ್ದು, ಅದರಂತೆ ವಿದ್ಯಾರ್ಥಿಗಳ ಪಟ್ಟಿಯನ್ನು ಸಲ್ಲಿಸಲಾಗಿತ್ತು.

ಆದರೆ ಇಲಾಖೆಯಿಂದ ಈವರೆಗೆ ಲ್ಯಾಪ್‌ಟಾಪ್ ನೀಡುವ ಬಗ್ಗೆ ಯಾವುದೇ ಮಾಹಿತಿಯಿಲ್ಲ. ೨೦೨೩-೨೪ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಟಾಪರ್‌ಗಳಾದವರು ಪಿಯುಸಿ ವಿದ್ಯಾಭ್ಯಾಸಕ್ಕಾಗಿ ಬೇರೆ ಬೇರೆ ಕಾಲೇಜುಗಳಲ್ಲಿ ವ್ಯಾಸಂಗ ಮುಂದುವರೆಸಿದ್ದಾರೆ. ಅವರುಗಳ ಪ್ರಥಮ ಪಿಯುಸಿ ವಿದ್ಯಾಭ್ಯಾಸ ಪೂರ್ಣಗೊಳ್ಳುತ್ತಾ ಬಂದರೂ ಸಹ ಈವರೆಗೆ ಸರ್ಕಾರದಿಂದ ಲ್ಯಾಪ್‌ಟಾಪ್ ನೀಡಿಲ್ಲ.

ಈ ಬಗ್ಗೆ ವಿದ್ಯಾರ್ಥಿಯೋರ್ವರ ಪೋಷಕರು ಪ್ರತಿಕ್ರಿಯಿಸಿದ್ದು, ‘ನಿಮ್ಮ ಮಗಳಿಗೆ ಸರ್ಕಾರದಿಂದ ಲ್ಯಾಪ್‌ಟಾಪ್ ನೀಡಲಾಗುವುದು. ಗಣರಾಜ್ಯೋತ್ಸವದಂದು ವಿತರಣೆ ನಡೆಯಲಿದೆ. ವಿದ್ಯಾರ್ಥಿಯ ಹೆಸರನ್ನು ಶಾಲೆಯಿಂದ ಕಳುಹಿಸಿಕೊಟ್ಟಿದ್ದೇವೆ. ಎಂದು ಶಾಲೆಯ ಉಪ ಪ್ರಾಂಶುಪಾಲರು ತಿಳಿಸಿದ್ದರು. ಆದರೆ ಗಣರಾಜ್ಯೋತ್ಸವದಲ್ಲಿ ಇಂತಹ ಯಾವುದೇ ಕಾರ್ಯಕ್ರಮ ನಡೆಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಡಿಡಿಪಿಐ ಕಚೇರಿಯನ್ನು ಸಂಪರ್ಕಿಸಿದ ಸಂದರ್ಭ ಆರಂಭದಲ್ಲಿ ಸಮರ್ಪಕ ಮಾಹಿತಿ ಲಭ್ಯವಾಗಲಿಲ್ಲ. ವಿದ್ಯಾರ್ಥಿಗಳಿಗೆ ಈಗಾಗಲೇ ಲ್ಯಾಪ್‌ಟಾಪ್ ವಿತರಣೆ ಮಾಡಲಾಗಿದೆ. ಯಾರಿಗೂ ಬಾಕಿ ಉಳಿಸಿಕೊಂಡಿಲ್ಲ ಎಂದು ಹಿರಿಯ ಅಧಿಕಾರಿಯೋರ್ವರು ಮಾಹಿತಿ ನೀಡಿದರು.

ಈ ಮಾಹಿತಿಯ ಸತ್ಯಾಸತ್ಯತೆಯ ಬಗ್ಗೆ ಪರಿಶೀಲಿಸಿದ ಸಂದರ್ಭ, ಈ ಶೈಕ್ಷಣಿಕ ಸಾಲಿನ ಸ್ವಾತಂತ್ರö್ಯ ದಿನಾಚರಣೆಯಂದು ೨೦೨೨-೨೩ನೇ ಸಾಲಿನ ಎಸ್‌ಎಸ್‌ಎಲ್‌ಸಿ ಟಾಪರ್‌ಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಗಿದೆ. ಆದರೆ ೨೦೨೩-೨೪ನೇ ಶೈಕ್ಷಣಿಕ ಸಾಲಿನಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸರ್ಕಾರಿ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡದಿರುವುದು ಸ್ಪಷ್ಟವಾಗಿದೆ.

ಮಾಹಿತಿಯ ಪ್ರಕಾರ ರಾಜ್ಯಾದ್ಯಂತ ಈ ಯೋಜನೆಯಡಿ ೩೪ ಶೈಕ್ಷಣಿಕ ಜಿಲ್ಲೆಗಳಲ್ಲಿ ೨೦೦ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲು ಕ್ರಮವಹಿಸಲಾಗಿದೆ. ಇದಕ್ಕೆಂದೇ ೩.೯೬ ಕೋಟಿ ರೂಪಾಯಿ ವೆಚ್ಚದಲ್ಲಿ ಲ್ಯಾಪ್‌ಟಾಪ್ ಖರೀದಿಸಲು ಟೆಂಡರ್ ಸಹ ನಡೆದಿದೆ. ಆದರೆ ಗಣರಾಜ್ಯೋತ್ಸವದಂದು ಮಾತ್ರ ಕೊಡಗಿನ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆಯಾಗಿಲ್ಲ. ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳು ಗಮನ ಹರಿಸಬೇಕಾಗಿದೆ. - ವಿಜಯ್ ಹಾನಗಲ್