ವೀರಾಜಪೇಟೆ, ಫೆ. ೨: ವೀರಾಜಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಶಾಸಕ ಎ.ಎಸ್. ಪೊನ್ನಣ್ಣ ಅವರು ಹಲವು ಭಾಗಗಳಿಗೆ ದಿಢೀರ್ ಭೇಟಿ ನೀಡಿ, ಪ್ರಗತಿಯಲ್ಲಿ ಇರುವ ವಿವಿಧ ಕಾಮಗಾರಿಗಳ ವೀಕ್ಷಣೆ ಮಾಡಿದರು.

ಪಟ್ಟಣಕ್ಕೆ ನೀರು ಸರಬರಾಜಾಗುವ ಕದನೂರು ನೀರಿನ ಮೂಲ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕರು, ನೀರಿನ ಲಭ್ಯತೆ, ಶುಚಿತ್ವ ಹಾಗೂ ಘಟಕದ ಮೂಲಸೌಕರ್ಯ ವ್ಯವಸ್ಥೆಯನ್ನು ಪರಿಶೀಲಿಸಿದರು.

ಅದೇ ರೀತಿ, ನಗರ ವ್ಯಾಪ್ತಿಯ ಛತ್ರಕೆರೆ ಹಾಗೂ ಗೌರಿ ಕೆರೆ ಅಭಿವೃದ್ಧಿ ಕಾರ್ಯ ಪರಿಶೀಲಿಸಿದರು.

ಬಳಿಕ ಪುರಸಭಾ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ನೂತನ ಉದ್ಯಾನವನ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿ ಪ್ರಗತಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಮಹತ್ವಕಾಂಕ್ಷೆಯ ಡೆಲ್ಟ್ ಕಾಮಗಾರಿಯ ವೀಕ್ಷಣೆಯನ್ನು ಸಹ ಇದೇ ಸಂದರ್ಭದಲ್ಲಿ ವೀಕ್ಷಿಸಿದರು.

ರಸ್ತೆಗಳ ಅಗಲೀಕರಣ ಬಗ್ಗೆ ಶಾಸಕರು ಸ್ಥಳ ಪರಿಶೀಲನೆ ಮಾಡಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ವಿವರಗಳನ್ನು ಕೂಡಲೇ ನೀಡಬೇಕೆಂದು ಸೂಚಿಸಿದರು. ಕಾಮಗಾರಿಗಳ ಸ್ಥಳ ವೀಕ್ಷಣೆ, ಗುಣಮಟ್ಟ ಪರೀಕ್ಷೆಗೆ ಮುಂದಾದ ಶಾಸಕರು, ನಿಗದಿತ ಸಮಯದಲ್ಲಿ ಗುಣಮಟ್ಟದ ಕಾಮಗಾರಿ ಮುಗಿಸಿಕೊಡಬೇಕೆಂದು ನಿರ್ದೇಶನ ನೀಡಿದರು.