ಕೂಡಿಗೆ, ಫೆ. ೨: ವಿದ್ಯಾರ್ಥಿಗಳು ಓದಿನ ಜೊತೆಗೆ ಕ್ರೀಡಾ ಆಸಕ್ತಿಯನ್ನೂ ಬೆಳೆಸಿಕೊಂಡು ತಮ್ಮನ್ನು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕುಶಾಲನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಡಾ. ಪ್ರವೀಣ್ ದೇವರಗುಂಡ ಸೋಮಪ್ಪ ಕರೆ ನೀಡಿದರು. ಅವರು ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲೆಯ ವಿದ್ಯಾರ್ಥಿ ಸಂಘ, ಎಸ್.ಡಿ.ಎಂ.ಸಿ., ಎನ್.ಎಸ್.ಎಸ್. ಘಟಕ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕುಶಾಲನಗರ ಸ್ಥಳೀಯ ಸಂಸ್ಥೆಯ ಸಹಯೋಗದೊಂದಿಗೆ ಶಾಲೆಯಲ್ಲಿ ಏರ್ಪಡಿಸಿದ್ದ ಶಾಲಾ ಗ್ರಾಮೀಣ ವಾರ್ಷಿಕ ಕ್ರೀಡೋತ್ಸವ : ೨೦೨೫ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡೆಯು ಮಕ್ಕಳಲ್ಲಿ ಕ್ರೀಡಾ ಸ್ಫೂರ್ತಿ ಬೆಳೆಸಲು ಸಹಕಾರಿಯಾಗಿವೆ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಕೆ.ಕೆ. ಭೋಗಪ್ಪ ಮಾತನಾಡಿ, ಕ್ರೀಡೆಗಳು ಉತ್ತಮ ಆರೋಗ್ಯ ಕಾಪಾಡಲು ಸಹಕಾರಿಯಾಗಿವೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್, ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆ ಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದಾಗ ಕ್ರೀಡಾ ಕ್ಷೇತ್ರದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ ಉತ್ತಮ ಸಾಧನೆ ಗಳಿಸಲು ಸಾಧ್ಯ ಎಂದರು.

ಜಿಲ್ಲಾ ಗೈಡ್ಸ್ ಸಂಸ್ಥೆಯ ಸಹಾಯಕ ಆಯುಕ್ತೆ ಸಿ.ಎಂ. ಸುಲೋಚನ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆಯಿಂದ ಉತ್ತಮ ಶಿಸ್ತು-ಸಂಯಮ ಬೆಳೆಸಿಕೊಳ್ಳಲು ಸಾಧ್ಯ ಎಂದರು. ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷ ಎ.ಎಂ. ಜವರಯ್ಯ ಹಾಗೂ ಕೂಡುಮಂಗಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಹೆಚ್.ಎಸ್. ಸುಜಾತ, ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಸ್. ರಾಜಾಚಾರಿ, ಮಾತನಾಡಿದರು. ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎಂ.ಟಿ. ದಯಾನಂದ ಪ್ರಕಾಶ್, ಶಿಕ್ಷಕರಾದ ಕೆ. ಗೋಪಾಲಕೃಷ್ಣ, ಬಿ.ಎನ್. ಸುಜಾತ, ಬಿ.ಡಿ. ರಮ್ಯ, ಎಸ್.ಎಂ. ಗೀತಾ, ಅನ್ಸಿಲಾ ರೇಖಾ, ದೈಹಿಕ ಶಿಕ್ಷಣ ಶಿಕ್ಷಕಿ ಕೆ.ಟಿ. ಸೌಮ್ಯ, ಸಿಬ್ಬಂದಿ ಎಂ. ಉಷಾ, ಶಾಲಾ ನಾಯಕ ಎಂ. ಗೌತಮ್, ಉಪ ನಾಯಕಿ ಸ್ಪಂದನ, ವಿದ್ಯಾರ್ಥಿಗಳು ಇದ್ದರು.