ಪಾಲಿಬೆಟ್ಟ, ಫೆ. ೨: ಪಾಲಿಬೆಟ್ಟ ಲೂರ್ಡ್ಸ್ ಹಿಲ್ ಶಾಲೆಯಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಶಾಲಾ ಆವರಣದಲ್ಲಿ ನಡೆಯಿತು.
ಸಂತ ಅನ್ನಮ್ಮ ಶಾಲೆಯ ಸಿಸ್ಟರ್ ಅರ್ಪಿತಾ ಮಾತನಾಡಿ, ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳಿಗೆ ಇಂಟರ್ನೆಟ್ ಸೌಲಭ್ಯ ಇದೆ. ಸಾಕಷ್ಟು ಮಾಹಿತಿಗಳು ಸುಲಭವಾಗಿ ಲಭ್ಯವಾಗುತ್ತವೆ. ಇದನ್ನು ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಬಳಸಿಕೊಂಡು ಭವಿಷ್ಯ ಉಜ್ವಲಗೊಳಿಸಿಕೊಳ್ಳಬೇಕು ಎಂದರು.
ಪ್ರತಿಯೊAದು ಕೆಲಸದಲ್ಲಿಯೂ ಮಕ್ಕಳು ಶಿಸ್ತು, ಪರಿಶ್ರಮ ಮತ್ತು ಗುಣಮಟ್ಟವನ್ನು ಕಾಯ್ದುಕೊಂಡಾಗ ಯಶಸ್ಸು ಖಂಡಿತ.
ಯಾವ ಸಂದರ್ಭದಲ್ಲೂ ಇತರರನ್ನು ಟೀಕಿಸದೆ, ಪರಸ್ಪರ ಒಮ್ಮತದಿಂದ ಕಾರ್ಯ ನಿರ್ವಹಿಸುವ ಮನೋಭಾವ ರೂಢಿಸಿಕೊಳ್ಳಿ ಎಂದು ಅವರು ಮಕ್ಕಳಿಗೆ ಕಿವಿಮಾತು ಹೇಳಿದರು.
ವಿವಿಧ ಕ್ರೀಡೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ಪಾಲಕರು ಹಾಜರಿದ್ದರು.
ಮುಖ್ಯ ಶಿಕ್ಷಕಿ ಐರಿಸ್, ಪಾಲಿಬೆಟ್ಟ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಕರುಂಬಯ್ಯ ಮತ್ತು ಶಿಕ್ಷಕರು ಹಾಜರಿದ್ದರು.